‘ಸ್ಕಿಲ್‌ಪ್ಲಸ್ ಕಾನ್‌ಕ್ಲೇವ್’ ಕಾರ್ಯಕ್ರಮ
ಹುಬ್ಬಳ್ಳಿ: ‘ವಯಸ್ಸಾದಂತೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ. ಕಲಿಕೆ ಹೆಚ್ಚಾದಂತೆ ಅವಕಾಶಗಳು ಹೆಚ್ಚುತ್ತ ಹೋಗುತ್ತವೆ. ಪ್ರತಿದಿನವೂ ಹೊಸ ಅನುಭವ, ಹೊಸ ಅವಕಾಶ ಎನ್ನುತ್ತ ಹೊಸತನಕ್ಕೆ ತೆರೆದುಕೊಳ್ಳಬೇಕು’ ಎಂದು ದೇಶಪಾಂಡೆ ಫೌಂಡೇಷನ್ ಸಂಸ್ಥಾಪಕ ಗುರುರಾಜ ದೇಶಪಾಂಡೆ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ಅನಂತ ಗ್ರ್ಯಾಂಡ್ ಹೋಟೆಲ್‌ನಲ್ಲಿ ಶುಕ್ರವಾರ ದೇಶಪಾಂಡೆ ಪೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ‘ಸ್ಕಿಲ್‌ಪ್ಲಸ್ ಕಾನ್‌ಕ್ಲೇವ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾಲೇಜು, ವಿಶ್ವವಿದ್ಯಾಲಯಗಳು ಶಿಕ್ಷಣವನ್ನು ನೀಡುತ್ತದೆ. ಆದರೆ, ಪ್ರತಿಕ್ಷಣವೂ ಹೊಸ ಆವಿಷ್ಕಾರವಾಗುವ ಇಂದಿನ ದಿನಗಳಲ್ಲಿ ಶಿಕ್ಷಣದ ಜೊತೆಗೆ ಕೌಶಲವೂ ಅತೀ ಅವಶ್ಯಕ. ಓದಿನಲ್ಲಿ ಜಾಣನಿದ್ದರಷ್ಟೇ ಸಾಲದು, ವೃತ್ತಿ ಕೌಶಲಗಳು ಏನೇನಿದೆ ಎನ್ನುವುದನ್ನು ಉದ್ಯೋಗದಾತರು ನೋಡುತ್ತಾರೆ’ ಎಂದರು.
‘ಉದ್ಯೋಗಾವಕಾಶಗಳು ಎಲ್ಲ ಕಡೆಯೂ ವಿಪುಲವಾಗಿವೆ. ಅದು ಸ್ಥಳದಿಂದ ಸ್ಥಳಕ್ಕೆ ಹೆಚ್ಚು ಕಡಿಮೆಯಾಗಿರುತ್ತವೆ. ಎಲ್ಲಿಯೇ ಆದರೂ ಕೆಲಸ ಮಾಡುತ್ತೇನೆ ಎನ್ನುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಕಲಿಕೆಯ ಅನುಭವವೇ ವೃತ್ತಿ ಬದುಕನ್ನು ಕೈಹಿಡಿದು, ಭವಿಷ್ಯ ರೂಪಿಸುವುದು. ಅನುಭವಕ್ಕಿಂತ ದೊಡ್ಡದು ಯಾವುದೂ ಇಲ್ಲ’ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ವೈಂಟಂಟ್ ಸರ್ವಿಸ್ ಸಂಸ್ಥಾಪಕ ಎನ್.ಸಿ. ಮೂರ್ತಿ, ‘ವೃತ್ತಿ ಬದುಕಿಗೆ ಶಿಕ್ಷಣ ಒಂದು ಭಾಗವಾದರೆ, ನಾಯಕತ್ವ, ಆತ್ಮವಿಶ್ವಾಸ, ವ್ಯಕ್ತಿತ್ವ, ಮಾತುಗಾರಿಕೆ, ಭಾಷಾಜ್ಞಾನ, ವರ್ತನೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂಥ ಚಾಕಚಕ್ಯತೆಯ ಕೌಶಲಗಳು ಮತ್ತೊಂದು ಭಾಗವಾಗಿದೆ. ಇಂದಿನ ಎಐ(ಕೃತಕ ಬುದ್ಧಿಮತ್ತೆ) ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಕೌಶಲಜ್ಞಾನ ಅನಿವಾರ್ಯ’ ಎಂದರು.
‘ಹೊಸ ತಂತ್ರಜ್ಞಾನದೊಂದಿಗೆ ಕೈಗಾರಿಕೆಗಳು ತಲೆ ಎತ್ತುತ್ತಿದ್ದು, ಉದ್ಯೋಗ ಬಯಸುವವರು ಸಹ ಹೊಸ ಆವಿಷ್ಕಾರದ ಮನಸ್ಥಿತಿಗೆ ಸಿದ್ಧವಾಗಿರಬೇಕು. ವೃತ್ತಪರತೆ, ಬದ್ಧತೆ ಮೈಗೂಡಿಸಿಕೊಂಡರೆ ಯಶಸ್ಸು ಸಾಧ್ಯ. ಕಲಿತ ಶಾಲೆಗೆ, ಊರಿಗೆ ಹಾಗೂ ಹೆತ್ತವರಿಗೆ ಹೆಮ್ಮೆಯ ಮಕ್ಕಳಾಗಬೇಕು. ಮಾದರಿ ಉದ್ಯೋಗಿಯಾಗಿ ಬೆಳೆಯಬೇಕು’ ಎಂದು ಹೇಳಿದರು.
ಬೆಳಗಾವಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಸಿ.ಎಂ. ತ್ಯಾಗರಾಜ, ಧಾರವಾಡ ವಿಶ್ವವಿದ್ಯಾಲಯದ ಕುಲಪತಿ ಜಯಶ್ರೀ ಎಸ್., ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ ಜಂಗಮಶೆಟ್ಟಿ ಮತ್ತು ಐಐಎಂ ನಿವೃತ್ತ ನಿರ್ದೇಶಕ ಪ್ರೊ. ಸುಶೀಲ್ ವಚಾನಿ ಮಾತನಾಡಿದರು.
ಫೌಂಡೇಷನ್‌ನಲ್ಲಿ ಕೌಶಲಾಭಿವೃದ್ಧಿ ಕೋರ್ಸ್ ಮುಗಿಸಿ ಉದ್ಯೋಗ ಪಡೆದ ಸ್ವಾತಿ ನರಗುಂದ ಮತ್ತು ಅರ್ಪಿತಾ ಪಲ್ಲೇದ ಅನುಭವ ಹಂಚಿಕೊಂಡರು. ಫೌಂಡೇಷನ್ ಸಿಇಒ ಪಿ.ಎನ್. ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.