
ಹುಬ್ಬಳ್ಳಿ: ‘ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ದೌರ್ಜನ್ಯಕ್ಕೆ ಒಳಗಾದ ಕುಟುಂಬದವರಿಗೆ ಸಾಮೂಹಿಕ ಬಹಿಷ್ಕಾರ ಹಾಕಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ. ಗ್ರಾಮದಲ್ಲಿ ಜನಪ್ರತಿನಿಧಿಗಳು, ವಿವಿಧ ಮುಖಂಡರು ಮತ್ತು ಅಧಿಕಾರಿಗಳ ಸಭೆ ನಡೆಸಿ, ಪರಿಹರಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದ ವಿವೇಕಾನಂದ ಆಸ್ಪತ್ರೆಯಲ್ಲಿ ದಾಖಲಾಗಿರುವ ಕುಟುಂಬದ ಸದಸ್ಯರನ್ನು ಶನಿವಾರ ಭೇಟಿ ಆಗುವುದರ ಜೊತೆಗೆ ಗ್ರಾಮಕ್ಕೂ ತೆರಳಿದ್ದ ಅವರು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
‘ಆಘಾತಗೊಂಡಿರುವ ಕುಟುಂಬದವರಿಗೆ ಆಪ್ತ ಸಮಾಲೋಚನೆ ನಡೆಸಿ, ಧೈರ್ಯ ತುಂಬಲಾಗುತ್ತಿದೆ. ಇಡೀ ಕುಟುಂಬಕ್ಕೆ ಪುನರ್ವಸತಿ ಅಥವಾ ಪರ್ಯಾಯ ವ್ಯವಸ್ಥೆ ಮಾಡಬಹುದೇ ಎಂಬ ಬಗ್ಗೆಯೂ ಚಿಂತನೆ ಮಾಡಲಾಗುತ್ತಿದೆ’ ಎಂದರು.
‘ಸಮಾನತೆ ಬಗ್ಗೆ ಮಾತನಾಡುವ, ಹೋರಾಡುವ ನಾವು ಕೆಲ ಸಂದರ್ಭಗಳಲ್ಲಿ ಮನುಷ್ಯತ್ವ ಮೀರಿ ವರ್ತಿಸುತ್ತೇವೆ ಎನ್ನಲು ಇದು ಜ್ವಲಂತ ನಿದರ್ಶನ. ಆತಂಕಗೊಂಡಿರುವ ಕುಟುಂಬದ ಜೊತೆ ರಾಜ್ಯ ಸರ್ಕಾರವಿದ್ದು, ಅಗತ್ಯವಿರುವ ಎಲ್ಲ ಸೌಲಭ್ಯ ಹಾಗೂ ಪರಿಹಾರಗಳನ್ನು ವಿತರಿಸಲಾಗುವುದು’ ಎಂದು ಹೇಳಿದರು.
ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಇದ್ದರು.
ಈಗಾಗಲೇ ಹಲವು ಕಾನೂನುಗಳಿವೆ. ಮರ್ಯಾದೆಗೇಡು ಹತ್ಯೆಯಂತಹ ವಿಶೇಷ ಘಟನೆಗಳ ಕುರಿತು ಕಾನೂನು ಜಾರಿ ಮಾಡುವ ಅಗತ್ಯವಿದೆಯೇ ಎಂಬ ಬಗ್ಗೆ ವಿಚಾರ ಮಾಡಲಾಗುವುದುಎಚ್.ಕೆ.ಪಾಟೀಲ ಕಾನೂನು ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.