ADVERTISEMENT

ಹುಬ್ಬಳ್ಳಿ | ಸೆ.22ರಿಂದ ಅ.7ರವರೆಗೆ ಗಣತಿ: ಮನೆಗಳ ಜಿಯೋ ಟ್ಯಾಗಿಂಗ್‌ ಶುರು

ಶ್ರೀಕಾಂತ ಕಲ್ಲಮ್ಮನವರ
Published 5 ಸೆಪ್ಟೆಂಬರ್ 2025, 5:48 IST
Last Updated 5 ಸೆಪ್ಟೆಂಬರ್ 2025, 5:48 IST
<div class="paragraphs"><p>ಹುಬ್ಬಳ್ಳಿಯ ರಾಜನಗರದ ಮನೆಗೆ ಜಿಯೋ ಟ್ಯಾಗ್‌ ಅಳವಡಿಸಲಾಗಿದೆ&nbsp; &nbsp;</p></div>

ಹುಬ್ಬಳ್ಳಿಯ ರಾಜನಗರದ ಮನೆಗೆ ಜಿಯೋ ಟ್ಯಾಗ್‌ ಅಳವಡಿಸಲಾಗಿದೆ   

   

ಪ್ರಜಾವಾಣಿ ಚಿತ್ರ/ ಗುರು ಹಬೀಬ

ಹುಬ್ಬಳ್ಳಿ: ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಭಾಗವಾಗಿ ವಿದ್ಯುತ್‌ ಮೀಟರ್‌ (ಆರ್‌.ಆರ್‌.ಸಂಖ್ಯೆ) ಮೂಲಕ ಮನೆಗಳ ಗುರುತು ಕಾರ್ಯ ಜಿಲ್ಲೆಯಲ್ಲಿ ಆರಂಭಗೊಂಡಿದೆ. 

ADVERTISEMENT

ಜಿಲ್ಲೆಯಲ್ಲಿ ಸುಮಾರು 5,30,950 ಮನೆಗಳಿಗೆ ವಿದ್ಯುತ್‌ ಸಂಪರ್ಕವಿದೆ. ಎಲ್ಲಾ ಮನೆಗಳಿಗೆ ಜಿಯೋ ಟ್ಯಾಗಿಂಗ್‌ ಪ್ರಕ್ರಿಯೆ ಆರಂಭಗೊಂಡಿದ್ದು, ವಾರದೊಳಗೆ ಪೂರ್ಣಗೊಳ್ಳಲಿದೆ. ನಂತರ ಗಣತಿ ಕಾರ್ಯ ನಡೆಯಲಿದೆ.

ಗಣತಿ 22ರಿಂದ ಆರಂಭ:

ಮೀಟರ್‌ ರೀಡರ್‌ಗಳು ಮನೆಗಳನ್ನು ಗುರುತಿಸಿ, ಯುಎಚ್‌ಐಡಿ ಸಂಖ್ಯೆ ನೀಡುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಿಕ್ಷಕರು ಗಣತಿ ಆರಂಭಿಸುವರು. ದಸರಾ ರಜೆ ಅವಧಿಯಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಗಣತಿದಾರರು ಮನೆಮನೆಗೆ ತೆರಳಿ, ಸಮೀಕ್ಷೆ ನಡೆಸುವರು. ಜಿಯೋ ಟ್ಯಾಗ್‌ ಮಾಡಿದ ಮನೆಗಳಲ್ಲಿ ವಾಸವಿರುವ ಕುಟುಂಬಗಳ ಕುರಿತು ಮಾಹಿತಿಯನ್ನು ಆ್ಯಪ್‌ ಮೂಲಕ ಅಪ್‌ಲೋಡ್‌ ಮಾಡುವರು. 

ಮೀಟರ್ ರೀಡರ್‌ಗಳು ಸೆರೆಹಿಡಿದ ಮನೆ ಪಟ್ಟಿ ಡೇಟಾವನ್ನು ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ವಿತರಣೆ (ಇಡಿಸಿಎಸ್‌) ಸರ್ವರ್‌ನಲ್ಲಿ ಅಪ್‌ಲೋಡ್ ಮಾಡುವರು. ನಂತರ ದ್ವಿತೀಯ ದತ್ತಾಂಶಗಳನ್ನು ಆಧರಿಸಿ, ಮೌಲೀಕರಿಸಿದ ನಂತರ ‘ಮನೆ ಪಟ್ಟಿ’ ಸಮೀಕ್ಷೆಯ ಉದ್ದೇಶಕ್ಕಾಗಿ 'ಮ್ಯಾಪಿಂಗ್' ಮಾಡುವರು. ಅಭಿವೃದ್ಧಿಗೊಂಡ ಅಪ್ಲಿಕೇಶನ್‌ನಲ್ಲಿ ಮನೆಯ ಸ್ಥಳವನ್ನು ಸೆರೆಹಿಡಿದು, ಪ್ರತಿ ಮನೆಗಳಿಗೆ ವಿಶಿಷ್ಟ ಸಂಖ್ಯೆ ನೀಡುವರು.

ಗಣತಿದಾರರಿಗೆ ತರಬೇತಿ: 

‘ಪ್ರತಿ 150 ಮನೆಗಳಿಗೆ ಒಬ್ಬ ಗಣತಿದಾರರ, ಪ್ರತಿ 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕ ಮತ್ತು ಮಾಸ್ಟರ್‌ ತರಬೇತುದಾರರನ್ನು ನೇಮಿಸಿಕೊಳ್ಳಲಾಗಿದೆ. ನಮ್ಮ ಜಿಲ್ಲೆಯಲ್ಲಿನ ಐವರು ಮಾಸ್ಟರ್‌ ತರಬೇದಾತುದಾರರು ಬೆಂಗಳೂರಿನಲ್ಲಿ ತರಬೇತಿ ಪಡೆದು ಬಂದ ಬಳಿಕ ಮೇಲ್ವಿಚಾರಕರಿಗೆ ಹಾಗೂ ಗಣತಿದಾರರಿಗೆ ತರಬೇತಿ ನೀಡುವರು’ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಭಾನುಮತಿ ‘ಪ್ರಜಾವಾಣಿ‘ಗೆ ತಿಳಿಸಿದರು.

‘ಕೆಲ ಕಡೆ ಒಂದೇ ವಿದ್ಯುತ್‌ ಮೀಟರ್‌ನಲ್ಲಿ 2 ರಿಂದ 3 ಮನೆಗಳ ಸಂಪರ್ಕ ಇರುತ್ತದೆ. ಅದನ್ನು ಗಣತಿ ವೇಳೆ ಸೇರಿಸಿಕೊಳ್ಳುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳನ್ನು ಪತ್ತೆ ಮಾಡಿ, ಅವುಗಳಲ್ಲಿ ವಾಸವಿರುವ ಕುಟುಂಬಗಳ ಕುರಿತು ಮಾಹಿತಿ ಸಂಗ್ರಹಿಸಲಾಗುವುದು’ ಎಂದರು.

ಸರ್ಕಾರದ ಸೂಚನೆಯಂತೆ ಹಿಂದುಳಿದ ವರ್ಗಗಳಷ್ಟೇ ಅಲ್ಲ ಎಲ್ಲ ಕುಟುಂಬಗಳ ಗಣತಿ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹಕರಿಸಬೇಕು
ಭಾನುಮತಿ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.