
ನವಲಗುಂದ: ಕೇಂದ್ರ ಸರ್ಕಾರದ ಕೃಷಿ ಹಾಗೂ ರೈತ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಮಣ್ಣು ಮತ್ತು ಭೂಬಳಕೆ ಸಮೀಕ್ಷಾ ಸಂಸ್ಥೆ ಬೆಂಗಳೂರು ಕೇಂದ್ರದ ತಂಡವು ತಾಲ್ಲೂಕಿನ ಕೃಷಿಭೂಮಿಗಳಲ್ಲಿ ಮಣ್ಣು ಪರೀಕ್ಷೆ ನಡೆಸುತ್ತಿದೆ.
ಡಾ.ಮಲ್ಲಿಕಾರ್ಜುನ ರೂಡಗಿ, ಕೆ.ಮುರಗಯ್ಯ ಮತ್ತು ನವೀನ್ ಕುಮಾರ್ ಅವರನ್ನು ಒಳಗೊಂಡ ತಂಡವು ಧಾರವಾಡ ಜಿಲ್ಲೆಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕುಗಳಲ್ಲದೇ ಗದಗ ಜಿಲ್ಲೆಯ ನರಗುಂದ, ರೋಣ ಹಾಗೂ ಗದಗ ತಾಲ್ಲೂಕುಗಳ ಕೃಷಿಭೂಮಿಗಳಲ್ಲಿ ಮಣ್ಣು ಪರೀಕ್ಷಾ ಕಾರ್ಯ ಕೈಗೊಂಡಿದೆ.
ಪಟ್ಟಣದ ಹೊರವಲಯದಲ್ಲಿ ಜಮೀನೊಂದರಲ್ಲಿ ಮಣ್ಣು ಪರೀಕ್ಷಾ ನಡೆಸುತ್ತಿರುವ ಡಾ. ಮಲ್ಲಿಕಾರ್ಜುನ ರೂಡಗಿ ಮಾತನಾಡಿ, ದೇಶಾದ್ಯಂತ ಮಣ್ಣು ಪರೀಕ್ಷೆಗಳನ್ನು ನಡೆಸುವ ಕೇಂದ್ರ ಸರ್ಕಾರದ ಶ್ರೇಷ್ಠ ಸಂಸ್ಥೆಯಾದ ಮಣ್ಣು ಮತ್ತು ಭೂಬಳಕೆ ಸಮೀಕ್ಷಾ ಸಂಸ್ಥೆ ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಮಣ್ಣು ನಕ್ಷೆ ಕಾರ್ಯಕ್ರಮ ಮುನ್ನಡೆಸುತ್ತಿದೆ. ಉಪಗ್ರಹ ಆಧರಿತ ದೂರ ಸಂವೇದಿ ಹಾಗೂ ಭೌಗೋಳಿಕ ಮಾಹಿತಿ ವ್ಯವಸ್ಥೆ ತಂತ್ರಜ್ಞಾನ ಬಳಸಿ 1:10,000 ಪ್ರಮಾಣದ ನಕ್ಷೆಗಳಲ್ಲಿ ಗ್ರಾಮ ಮಟ್ಟದ ವಿವರವಾದ ಡಿಜಿಟಲ್ ಮಣ್ಣು ದತ್ತಾಂಶ ಸೃಷ್ಟಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಮಣ್ಣು ಸಂಪನ್ಮೂಲಗಳ ನಕ್ಷೆಕರಣದಿಂದ ಗ್ರಾಮ ಮಟ್ಟದ ಸೂಕ್ಷ್ಮ ಯೋಜನೆಗೆ ಮತ್ತು ರೈತರಿಗೆ ಅಗತ್ಯ ಮಾಹಿತಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಕೆ. ಮುರಗಯ್ಯ ಮಾತನಾಡಿ, ಈ ಪರೀಕ್ಷೆ ಮೂಲಕ ಮಣ್ಣಿನ ಪ್ರಕಾರಗಳು, ಅವುಗಳ ಲಕ್ಷಣಗಳು, ಸಾಮರ್ಥ್ಯಗಳು ಹಾಗೂ ಭೂಬಳಕೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಭೂ- ಅವನತಿ ಸಮಸ್ಯೆಗಳಾದ ಮಣ್ಣು ಸವಕಳಿ, ನೀರು ನಿಲ್ಲುವಿಕೆ, ಸವಳು ಮಣ್ಣು ಮೊದಲಾದವುಗಳನ್ನು ವೈಜ್ಞಾನಿಕವಾಗಿ ಗುರುತಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.