ADVERTISEMENT

ದೈಹಿಕ, ಬೌದ್ಧಿಕ ಆರೋಗ್ಯ ವೃದ್ದಿಸುವ ಕ್ರೀಡೆ- ನ್ಯಾಯಾಧೀಶ ಉಮೇಶ ಅಡಿಗ

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 8:51 IST
Last Updated 4 ಜನವರಿ 2022, 8:51 IST
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿ ಮಂಗಳವಾರ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಉಮೇಶ ಅಡಿಗ ಅವರು, ತ್ರಿವರ್ಣ ಬಲೂನುಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದರು. ಪೊಲೀಸ್ ಕಮಿಷನರ್ ಲಾಭೂ ರಾಮ್,  ಡಿಸಿಪಿಗಳಾದ ಎಸ್.ವಿ. ಯಾದವ್, ಸಾಹಿಲ್ ಬಾಗ್ಲಾ ಹಾಗೂ ಆರ್.ಬಿ. ಬಸರಗಿ ಇದ್ದಾರೆ
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿ ಮಂಗಳವಾರ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಉಮೇಶ ಅಡಿಗ ಅವರು, ತ್ರಿವರ್ಣ ಬಲೂನುಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದರು. ಪೊಲೀಸ್ ಕಮಿಷನರ್ ಲಾಭೂ ರಾಮ್, ಡಿಸಿಪಿಗಳಾದ ಎಸ್.ವಿ. ಯಾದವ್, ಸಾಹಿಲ್ ಬಾಗ್ಲಾ ಹಾಗೂ ಆರ್.ಬಿ. ಬಸರಗಿ ಇದ್ದಾರೆ   

ಹುಬ್ಬಳ್ಳಿ: ‘ದೈಹಿಕ ಹಾಗೂ ಬೌದ್ಧಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ದೈಹಿಕ ಚಟುವಟಿಕೆ ಮುಖ್ಯವಾಗಿದೆ’ ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಉಮೇಶ ಅಡಿಗ ಹೇಳಿದರು.

ಗೋಕುಲ ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿ ಮಂಗಳವಾರ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದ ಜೊತೆಗೆ, ಕ್ರೀಡೆಗಳನ್ನು ಆಡಲು ಸಾಧ್ಯವಿದೆ. ಸಿಬ್ಬಂದಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಕ್ರೀಡಾ ಚಟುವಟಿಕೆಯು ಏಕಾಗ್ರತೆ ಹಾಗೂ ಸಮಚಿತ್ತದಿಂದ ಕೆಲಸ ಮಾಡಲು ಸಹಕಾರಿಯಾಗಿದೆ’ ಎಂದರು.

‘ಜನರ ಸುರಕ್ಷತೆಯ ಜವಾಬ್ದಾರಿ ಪೊಲೀಸರ ಹೆಗಲ ಮೇಲಿದೆ. ಜನ ನೆಮ್ಮದಿಯಿಂದ ಇರುವುದಕ್ಕೆ ಪೊಲೀಸರೇ ಕಾರಣ. ವರ್ಷವಿಡೀ ಹಗಲಿರುಳು ಕೆಲಸ ನಿರ್ವಹಿಸುವ ಪೊಲೀಸರು ಆರೋಗ್ಯ ಕಾಪಾಡಿಕೊಳ್ಳವುದು ಮುಖ್ಯ. ಕ್ರೀಡೆಯಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ಕ್ರೀಡೆಯಿಂದ ನಾವೆಲ್ಲರೂ ಒಂದೇ ಎನ್ನುವ ಭಾವನೆ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ, ಸದಾ ಚಟುವಟಿಕೆಯಿಂದ ಇದ್ದಾಗ ಆರೋಗ್ಯವೂ ಉತ್ತಮವಾಗಿರುತ್ತದೆ. ಪ್ರತಿಯೊಬ್ಬರು ವಯೋಮಾನಕ್ಕೆ ತಕ್ಕಂತೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಸದೃಢ ನಾಗರಿಕರೇ ದೇಶದ ನಿರ್ಮಾತೃಗಳು’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪೊಲೀಸ್ ಕಮಿಷನರ್ ಲಾಭೂ ರಾಮ್, ‘ಪೊಲೀಸರು ಮಾನಸಿಕವಾಗಿ‌ ಹಾಗೂ ದೈಹಿಕವಾಗಿ ಸಧೃಡವಾಗಿರಬೇಕು. ಪ್ರತಿದಿನ ಒಂದು ಗಂಟೆ ವ್ಯಾಯಾಮ, ಯೋಗ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮೂರು ದಿನಗಳ ಕ್ರೀಡಾಕೂಟದಲ್ಲಿ ಎಲ್ಲರೂ ಉತ್ಸಾಹದಿಂದ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.

ಪಾರಿವಾಳದೊಂದಿಗೆ ಕೇಸರಿ, ಬಳಿ ಹಾಗೂ ಹಸಿರು ಬಲೂನುಗಳನ್ನು ಆಗಸಕ್ಕೆ ಹಾರಿ ಬಿಟ್ಟು ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಕ್ರೀಡಾಕೂಟದಲ್ಲಿ ಭಾಗವಹಿಸಿದ ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಸಶಸ್ತ್ರ ಮೀಸಲು ಪಡೆಯ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಮುರಾಳ ಪಥಸಂಚಲನದ ಮುಂದಾಳತ್ವ ವಹಿಸಿ, ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಈರಣ್ಣ ದೇಸಾಯಿ ಕ್ರೀಡಾಜ್ಯೋತಿ ಹಿಡಿದು ಓಡಿದರು. ಸಿಎಆರ್ ದಕ್ಷಿಣ, ಉತ್ತರ, ಮಹಿಳಾ‌, ಧಾರವಾಡ ಹಾಗೂ ಸಂಚಾರ ವಿಭಾಗದ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಸಿಎಆರ್‌ ಡಿಸಿಪಿ ಎಸ್.ವಿ. ಯಾದವ್ ವಂದನಾರ್ಪಣೆ ಮಾಡಿದರು. ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಆರ್.ಬಿ. ಬಸರಗಿ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.