ಹುಬ್ಬಳ್ಳಿ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸಲು ಶಿಕ್ಷಣ ಇಲಾಖೆಯು ಪ್ರತಿ ವರ್ಷ ಹಲವು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಪರಿಣಾಮ ಬೀರುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಇದಕ್ಕೆ ಧಾರವಾಡ ಜಿಲ್ಲೆಯೂ ಹೊರತಾಗಿಲ್ಲ.
ಪ್ರವೇಶ ಶುಲ್ಕ, ಬಟ್ಟೆ, ಶೂ, ಸಾಕ್ಸ್, ಬಿಸಿಯೂಟ, ಹಾಲು, ಮೊಟ್ಟೆ ಹೀಗೆ ವಿವಿಧ ಸೌಲಭ್ಯಗಳನ್ನೂ ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ನೀಡಿದರೂ ನಗರ ಪ್ರದೇಶಗಳ ವಿದ್ಯಾರ್ಥಿ ಪೋಷಕರಲ್ಲಿ ಮಾತ್ರ ಖಾಸಗಿ ಶಾಲೆಗಳ ವ್ಯಾಮೋಹ ಕಡಿಮೆ ಆಗುತ್ತಿಲ್ಲ.
ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆಗಳು ದೂರವಿರುವ ಕಾರಣ ಹಾಗೂ ಉತ್ತಮ ಸರ್ಕಾರಿ ಶಾಲೆ, ಕಟ್ಟಡಗಳ ಸ್ಥಿತಿ, ಶಿಕ್ಷಕರ ಬದ್ಧತೆಯ ಪರಿಣಾಮ, ಆರ್ಥಿಕವಾಗಿ ತೀರಾ ಕೆಳಮಟ್ಟದಲ್ಲಿ ಇರುವ ಕುಟುಂಬದವರು ಮಾತ್ರ ಸರ್ಕಾರಿ ಶಾಲೆಗಳಿಗೆ ಅನಿವಾರ್ಯವಾಗಿ ಮಕ್ಕಳನ್ನು ದಾಖಲಿಸುತ್ತಾರೆ.
2025–26ನೇ ಶೈಕ್ಷಣಿಕ ಸಾಲಿಗೆ ಜಿಲ್ಲೆಯಲ್ಲಿ 1 ರಿಂದ 10ನೇ ತರಗತಿವರೆಗೆ ದಾಖಲಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 3,13,935. ಈ ಪೈಕಿ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು 1,23,184. ಕಳೆದ ವರ್ಷಕ್ಕೆ ಹೋಲಿಸಿದರೆ 11,290 ಮಕ್ಕಳ ದಾಖಲಾತಿ ಕಡಿಮೆ ಆಗಿದೆ.
ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲೇ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಕುಸಿತ ಉಂಟಾಗು ತ್ತಿರುವುದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಂಕಿ– ಅಂಶಗಳಿಂದ ತಿಳಿದುಬರುತ್ತದೆ.
ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸೇರಿ ಜಿಲ್ಲೆಯಲ್ಲಿ ಒಟ್ಟು 1,526 ಶಾಲೆಗಳಿವೆ. ಇವುಗಳಲ್ಲಿ 735 ಸರ್ಕಾರಿ ಪ್ರಾಥಮಿಕ ಶಾಲೆಗಳು ಹಾಗೂ 112 ಸರ್ಕಾರಿ ಪ್ರೌಢಶಾಲೆಗಳು ಇವೆ. ಆದರೆ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಬಲ್ಲ, ದಾಖಲಾತಿಗೆ ಪೋಷಕರನ್ನು ಸಾಲುಗಟ್ಟಿಸಬಲ್ಲ ಸರ್ಕಾರಿ ಶಾಲೆಗಳು ತೀರಾ ವಿರಳ.
ಜಿಲ್ಲೆಯ 2,528 ಸರ್ಕಾರಿ ಶಾಲಾ ಕೊಠಡಿಗಳ ಪೈಕಿ 1,490 ಕೊಠಡಿಗಳು ಮಾತ್ರ ಸುಸ್ಥಿಯಲ್ಲಿವೆ. ಉಳಿದಂತೆ 259 ಶಾಲಾ ಕೊಠಡಿಗಳು ಬಾಗಿಲು, ಶೌಚಾಲಯ, ಕಿಟಕಿ, ಗೋಡೆ, ವಿದ್ಯುತ್ ಸೇರಿ ಸಣ್ಣಪುಟ್ಟ ದುರಸ್ತಿಗೆ ಬಂದಿವೆ. 580 ಶಾಲಾ ಕೊಠಡಿಗಳು ಹೆಚ್ಚಿನ ಪ್ರಮಾಣದಲ್ಲಿ ದುರಸ್ತಿ ಆಗಬೇಕಿದೆ. 173 ಶಾಲಾ ಕೊಠಡಿಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು, ಇವುಗಳನ್ನು ನೆಲಸಮ ಮಾಡಿ ಮತ್ತೆ ಕಟ್ಟಬೇಕಿದೆ.
ಮಳೆ ಸಂದರ್ಭದಲ್ಲಿ ಶಾಲಾ ಕೊಠಡಿಗಳು ಸೋರುತ್ತವೆ. ಅನಿವಾರ್ಯವಾಗಿ ಒಂದೇ ತರಗತಿಯಲ್ಲಿ ಇತರ ತರಗತಿಗಳ ಮಕ್ಕಳನ್ನು ಕೂರಿಸಿ ಪಾಠ ಮಾಡ ಬೇಕಾದ ಸ್ಥಿತಿ ಸರ್ಕಾರಿ ಶಾಲೆಗ ಳದ್ದು. ಹೀಗಾಗಿ ಎಷ್ಟೇ ಸೌಲಭ್ಯ ನೀಡಿದರೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಖಾಸಗಿ ಶಾಲೆಗಳೇ ಪೋಷಕರ ಆಯ್ಕೆ ಆಗಿವೆ.
‘ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ಕಲಿಕೆಗೆ ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ಕಟ್ಟಡ, ಮೂಲ ಸೌಲಭ್ಯ ಸರಿಯಾಗಿಲ್ಲ. ಶಾಲಾ ಕಟ್ಟಡ ಕಟ್ಟಿಸಿಕೊಡುವ ಸರ್ಕಾರ, ಅವುಗಳ ದುರಸ್ತಿಗೆ ಆಸಕ್ತಿ ವಹಿಸುವುದಿಲ್ಲ. ಕನಿಷ್ಠ ದುರಸ್ತಿಗೂ ವರ್ಷಗಟ್ಟಲೇ ಕಾಯಬೇಕು. ಹೀಗಾಗಿ ಹಣ ಖರ್ಚಾದರೂ ಪರವಾಗಿಲ್ಲ, ಮಕ್ಕಳ ಸುರಕ್ಷತೆ ಮುಖ್ಯ ಎಂದು ನನ್ನ ಇಬ್ಬರ ಮಕ್ಕಳನ್ನು ಸರ್ಕಾರಿ ಶಾಲೆಯಿಂದ ಬಿಡಿಸಿ ಖಾಸಗಿ ಶಾಲೆಗೆ ದಾಖಲಿಸಿದ್ದೇನೆ’ ಎಂದು ಹುಬ್ಬಳ್ಳಿಯ ಖಾಸಗಿ ಶಾಲೆಯ ವಿದ್ಯಾರ್ಥಿ ಪೋಷಕರೊಬ್ಬರು ಹೇಳಿದರು.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯಲು ಗ್ರಾಮೀಣ ಭಾಗಗಳಲ್ಲಿ ಎಸ್‌ಡಿಎಂಸಿ, ಹಳೇ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶಿಕ್ಷಕರು, ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ, ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲಿಸಲು ಜುಲೈ 31ರವರೆಗೂ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಬೇಕೆಂದರೆ ವಿದ್ಯಾರ್ಥಿ ಪೋಷಕರು ಮನಸ್ಸು ಮಾಡಬೇಕಷ್ಟೇ.
ಜಿಲ್ಲೆಯ ಒಂದು ಸರ್ಕಾರಿ ಶಾಲೆ ಮತ್ತು ಒಂದು ಅನುದಾನಿತ ಶಾಲೆಯು ಶೂನ್ಯ ದಾಖಲಾತಿ ಹೊಂದಿದೆ.ಧಾರವಾಡದ ಮಾಳಮಡ್ಡಿ ಕ್ಲಸ್ಟರ್‌ನ ಧಾನೂನಗರದ ಜಿಎಚ್‌ಪಿಎಸ್ ಸರ್ಕಾರಿ ಶಾಲೆಗೆ ಕಳೆದ ಬಾರಿ 8 ವಿದ್ಯಾರ್ಥಿಗಳು ದಾಖಲಾಗಿದ್ದರು. ಈ ಬಾರಿ ಒಬ್ಬರೂ ದಾಖಲಾಗಿಲ್ಲ. ಇನ್ನು ಧಾರವಾಡದ ತೇಜಸ್ವಿ ನಗರದ ತೇಜಸ್ವಿ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯದ್ದೂ ಇದೇ ಪರಿಸ್ಥಿತಿ. ಈ ಶಾಲೆಗೆ ಕಳೆದ ಬಾರಿ ಐವರು ವಿದ್ಯಾರ್ಥಿಗಳಷ್ಟೇ ದಾಖಲಾಗಿದ್ದರು.
‘ರೈಲ್ವೆ ಸೇತುವೆ ನಿರ್ಮಾಣದ ಕಾರಣ ಧಾನೂನಗರದಲ್ಲಿನ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಹೀಗಾಗಿ ಅಲ್ಲಿನ ಸರ್ಕಾರಿ ಜಿಎಚ್‌ಪಿಎಸ್ ಸರ್ಕಾರಿ ಶಾಲೆಗೆ ಒಂದೇ ಒಂದು ಮಗು ದಾಖಲಾಗಿಲ್ಲ. ಇನ್ನು ತೇಜಸ್ವಿ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿರುವ ಹಿನ್ನೆಲೆ ಕನ್ನಡ ಮಾಧ್ಯಮದಲ್ಲಿ ಶೂನ್ಯ ದಾಖಲಾತಿ ಇದೆ. ಈ ಎರಡೂ ಶಾಲೆಗಳ ಶಿಕ್ಷಕರನ್ನು ಅಧಿಕ ಮಕ್ಕಳ ಸಂಖ್ಯೆ ಇರುವ ಶಾಲೆಗಳಿಗೆ ನಿಯೋಜಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ಯೋಜನಾ ಸಂಯೋಜಕ ಎಸ್.ಎಂ. ಹುಡೇದಮನಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿದರೂ ಇಲ್ಲಿಗೆ ದಾಖಲಾಗುವವರ ಸಂಖ್ಯೆ ಕಡಿಮೆ. ಆದರೆ, ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪೂರ್ಣಗೊಂಡಿದ್ದರೂ, ಹೇಗಾದರೂ ಮಾಡಿ ಅಲ್ಲಿಯೇ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಹೆಣಗಾಡುತ್ತಾರೆಯೇ ಹೊರತು, ಸರ್ಕಾರಿ ಶಾಲೆಗಳ ಸಮೀಪವೂ ಸುಳಿಯುವುದಿಲ್ಲ.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪೋಷಕರು ಮನಸ್ಸು ಮಾಡಬೇಕುಎಸ್.ಎಸ್. ಕೆಳದಿಮಠ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.