
ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆಯಬೇಕಿದ್ದ ಕೃಷಿ ಮಹಾ ವಿದ್ಯಾಲಯದ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ಕೊನೆ ಕ್ಷಣದಲ್ಲಿ ರದ್ದಾಗಿದೆ. ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಕ್ಕೆ ದಲಿತ ಸಂಘಟನೆಯವರು ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.
ದಲಿತ ಸಂಘಟನೆಯವರು ವಿಶ್ವವಿದ್ಯಾಲಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿದ್ದ ಪರಮೇಶ್ವರ ಕಾಳೆ, ಕೃಷ್ಣ ಗುಮ್ಮಗೋಳ ಮೊದಲಾದವರನ್ನು ಪೊಲೀಸರು ವಶಕ್ಕೆ (ಮುಂಜಾಗ್ರತಾ ಕ್ರಮವಾಗಿ) ಪಡೆದು, ಸ್ವಲ್ಪ ಹೊತ್ತಿನ ನಂತರ ಬಿಡುಗಡೆಗೊಳಿಸಿದರು.
ಕೃಷಿ ಮಹಾ ವಿದ್ಯಾಲಯದ ವಿದ್ಯಾರ್ಥಿ ಸಂಘದ ಪದಗ್ರಹಣ ಡಿ.30 ಸಮಾರಂಭ ನಡೆಯಬೇಕಿತ್ತು. ಆದರೆ ಚಕ್ರವರ್ತಿ ಸೂಲಿಬೆಲೆ ಅವರು ಭಾಗವಹಿಸುವುದಕ್ಕೆ ದಲಿತ ಸಂಘಟನೆಯವರಿಂದ ಆಕ್ಷೇಪ ವ್ಯಕ್ತವಾಯಿತು. ಪದಗ್ರಹಣ ಸಮಾರಂಭವನ್ನು ಕಾರಣಾಂತರಗಳಿಂದ ರದ್ದುಪಡಿಸಲಾಗಿದೆ ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಅವರು ಪ್ರಕಟಣೆ ಹೊರಡಿಸಿದರು.
‘ಅದು ವಿದ್ಯಾರ್ಥಿ ಸಂಘಟನೆಯ ಕಾರ್ಯಕ್ರಮ. ವಿದ್ಯಾರ್ಥಿಗಳೇ ಅತಿಥಿಯನ್ನು ಆಹ್ವಾನಿಸಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಸಮಾರಂಭ ರದ್ದಾಗಿದೆ. ನಾನು ಊರಿನಲ್ಲಿ ಇರಲಿಲ್ಲ’ ಎಂದು ಕೃಷಿ ವಿ.ವಿ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಾರ್ಯಕ್ರಮದಲ್ಲಿ ಸೂಲಿಬೆಲೆ ಅವರು ಪಾಲ್ಗೊಳ್ಳುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತ ಪ್ರತಿಭಟನೆಗೆ ಮುಂದಾದರು. ಹೀಗಾಗಿ ಅವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ಸ್ವಲ್ಪ ಹೊತ್ತಿನ ನಂತರ ಬಿಡುಗಡೆ ಮಾಡಲಾಯಿತು’ ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದ್ಧಾರೆ.
‘ಚಕ್ರವರ್ತಿ ಸೂಲಿಬೆಲೆ ಅವರು ಕೃಷಿ ತಜ್ಞರಲ್ಲ, ಕೃಷಿ ವಿಜ್ಞಾನಿಯಲ್ಲ. ಕೃಷಿ ಚಟುವಟಿಕೆ ಬಗ್ಗೆ ಅವರಿಗೇನು ಗೊತ್ತಿದೆ? ಕೃಷಿ ವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದೆವು’ ಎಂದು ಮುಖಂಡ ಪರಮೇಶ್ವರ ಕಾಳೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.