
ರೈಲು ಸಂಚಾರ– ಸಾಂದರ್ಭಿಕ ಚಿತ್ರ
ನವದೆಹಲಿ: ಹುಬ್ಬಳ್ಳಿ–ಬೆಂಗಳೂರು ಮಧ್ಯೆ ನಿತ್ಯ ʼಸೂಪರ್ ಫಾಸ್ಟ್ ವಿಶೇಷ ರೈಲುʼ ಸಂಚಾರಕ್ಕೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ.
ಈ ರೈಲು ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬಿರೂರು, ಅರಸಿಕೆರೆ, ಸಂಪಿಗೆ ರೋಡ್, ತುಮಕೂರು, ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ಮಧ್ಯೆ ಡಿಸೆಂಬರ್ 8ರಿಂದ ಸಂಚರಿಸಲಿದೆ.
ರೈಲು ಸಂಚಾರ ಆರಂಭಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದರು.
ಜೋಶಿ ಟ್ವಿಟ್
ಬೆಂಗಳೂರು: ಹುಬ್ಬಳ್ಳಿ- ಬೆಂಗಳೂರು ಮಾರ್ಗದ ವಿಶೇಷ ಸೂಪರ್ ಫಾಸ್ಟ್ ರೈಲನ್ನು ಡಿಸೆಂಬರ್ 8 ರಿಂದ ಪ್ರತಿನಿತ್ಯ ಸಂಚರಿಸಲು ರೇಲ್ವೆ ಇಲಾಖೆ ನಮ್ಮ ಒತ್ತಾಯದಂತೆ ಅನುಮೋದನೆ ನೀಡಿದೆ. ಈ ಕುರಿತು ನಾನು ಕೇಂದ್ರ ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಮನವಿ ಸಲ್ಲಿಸಿದ್ದೆ. ಈಗ ನಮ್ಮ ಮನವಿಗೆ ಸ್ಪಂದಿಸಿ ಸಚಿವರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ದೈನಂದಿನ ರೈಲು ಸಂಚಾರಕ್ಕೆ ಅನುಮೋದನೆ ನೀಡಿದ್ದಾರೆ.
ರೈಲು ಸಂಖ್ಯೆ: 20687 UBL ( ಹುಬ್ಬಳ್ಳಿ) - 20688 SBC (ಬೆಂಗಳೂರು) ಮಾರ್ಗದಲ್ಲಿ ಸಂಚರಿಸಲಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ರಾಜ್ಯದ ರಾಜಧಾನಿ ಬೆಂಗಳೂರಿಗೆ ಸಂಪರ್ಕಿಸುವ ಈ ಹೊಸ ರೈಲು ಸಮಸ್ತ ಉತ್ತರ ಕರ್ನಾಟಕದ ಅಭಿವೃದ್ದಿಯ ಜೊತೆಗೆ ವಾಣಿಜ್ಯೋದ್ಯಮಕ್ಕೂ ಅನುಕೂಲವಾಗಲಿದೆ.
ಸಮಸ್ತ ಉತ್ತರ ಕರ್ನಾಟಕದ ಜನತೆಯ ಪರವಾಗಿ ನಮ್ಮ ಮನವಿಗೆ ಸ್ಪಂದಿಸುತ್ತ ಈ ಭಾಗದ ರೈಲ್ವೆ ಅಭಿವೃದ್ಧಿಗೆ ಮೋದಿ ಅವರು ಸ್ಪಂದಿಸಿದ್ದಾರೆ ಎಂದು ಧಾರವಾಡ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಸದ್ಯ ಈ ರೈಲಿನ ಪ್ರಯಾಣ ದರ ಹುಬ್ಬಳ್ಳಿ –ಬೆಂಗಳೂರು ₹405 ಇತ್ತು. ಇನ್ಮುಂದೆ ಅದು ಶೇ 30 ಕಡಿಮೆ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.