ADVERTISEMENT

ಹುಬ್ಬಳ್ಳಿ– ಧಾರವಾಡ | ಸ್ವಚ್ಛ ನಗರಿ: ಜಾಲತಾಣದಲ್ಲಿ ಟೀಕೆ

ಹು–ಧಾ ಮಹಾನಗರ ಪಾಲಿಕೆಯ ಅಧಿಕಾರಿಗಳ ಕಾಲೆಳೆದ ನೆಟ್ಟಿಗರು

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 5:17 IST
Last Updated 20 ಜುಲೈ 2025, 5:17 IST
ಹು–ಧಾ ಮಹಾನಗರ ಪಾಲಿಕೆಯ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದ ನೆಟ್ಟಿಗರು
ಹು–ಧಾ ಮಹಾನಗರ ಪಾಲಿಕೆಯ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದ ನೆಟ್ಟಿಗರು   

ಹುಬ್ಬಳ್ಳಿ: ಕೇಂದ್ರ ಸರ್ಕಾರದ ‘ಸ್ವಚ್ಛ ಸರ್ವೇಕ್ಷಣ– 2025 ಸಮೀಕ್ಷೆಯಲ್ಲಿ ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ದೇಶ ಮಟ್ಟದಲ್ಲಿ 34ನೇ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ ಪಡೆದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ–ಟಿಪ್ಪಣಿಗೆ ಒಳಗಾಗುತ್ತಿದೆ.

ನಗರದ ತುಂಬೆಲ್ಲ ತ್ಯಾಜ್ಯ, ಕಸದ ರಾಶಿ ಬಿದ್ದಿವೆ. ಪಾದಚಾರಿ ಮಾರ್ಗವನ್ನು ಸಹ ಅತಿಕ್ರಮಿಸಿ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಅರ್ಧಮರ್ಧ ಮೇಲ್ಸೇತುವೆ ಕಾಮಗಾರಿಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ರಾಜಕಾಲುವೆ ಗಬ್ಬೆದ್ದು ನಾರುತ್ತಿದೆ, ಹೀಗಿದ್ದಾಗ, ಅದ್ಯಾವ ಮಾನದಂಡದ ಮೇಲೆ ಪಾಲಿಕೆ ಸ್ವಚ್ಛ ನಗರಿ ಸ್ಥಾನ ಪಡೆದಿದೆ ಎಂದು ನೆಟ್ಟಿಗರು ಹುಬ್ಬೇರಿಸಿದ್ದಾರೆ.

ಪಾಲಿಕೆ ಬಿಡುಗಡೆ ಮಾಡಿರುವ ‘ಸ್ವಚ್ಛತೆಯಲ್ಲಿ ಅವಳಿನಗರಕ್ಕೆ ಎರಡನೇ ಸ್ಥಾನ’ ಪೋಸ್ಟರ್‌ ಅನ್ನು ‘ಚೋಟಾ ಮುಂಬೈ ಹುಬ್ಬಳ್ಳಿ’ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೆಯಾಗಿದ್ದು, ತೆಗ್ಗು–ಗುಂಡಿಗಳ ಚಿತ್ರಗಳನ್ನು ಅದಕ್ಕೆ ಜೋಡಿಸಿದ್ದಾರೆ. ಸುಮಾರು ನಲವತ್ತ ಮಂದಿ ಅಭಿಪ್ರಾಯ ವ್ಯಕ್ತಪಡಿಸಿ ವ್ಯಂಗ್ಯವಾಡಿದ್ದಾರೆ.

ADVERTISEMENT

‘ಬೆಳಗಾವಿ, ಉಡುಪಿ, ಶಿವಮೊಗ್ಗ ಶಹರ ನೋಡಿದರೆ, ಹುಬ್ಬಳ್ಳಿ ಈಗಲೂ ಹಳ್ಳಿಯ ಹಾಗೆಯೇ ಇದೆ. ಸಮೀಕ್ಷೆ ಮಾಡಲು ಬಂದವರಿಗೆ ಸಾವಜಿ ಹೋಟೆಲ್‌ನಲ್ಲಿ ಮಟನ್ ಊಟ ಮಾಡಿಸಿರಬೇಕು, ದಸರಾ ಸಮಯದಲ್ಲಿ ಕೊಡುವಂಥ ರಾಜ್ಯ ಪ್ರಶಸ್ತಿ ಇದಾಗಿದೆ, ಸಮೀಕ್ಷೆ ಮಾಡಿದವರನ್ನು ದುರ್ಗದಬೈಲ್‌ನಲ್ಲಿ ಹಾರ–ತುರಾಯಿ ಹಾಕಿ ಸನ್ಮಾನ ಮಾಡಬೇಕು’ ಎಂದು ವಿ. ಕಮ್ಮಾರ ಎನ್ನುವವರು ಟೀಕಿಸಿದ್ದಾರೆ.

‘ಸ್ವಚ್ಛ ಮಾಡಿಸಬೇಕಾದ ನಗರಗಳಲ್ಲಿ ಎರಡನೇ ಶಹರ ಇರಬೇಕು’ ಎಂದು ಬಸವರಾಜ ಗೌಡರ್‌ ಕಾಲೆಳೆದಿದ್ದರೆ, ‘ಜೋಕ್‌ ಆಫ್‌ ದಿ ಯೀಯರ್‌’ ಎಂದು ಶಂಕರ ಹಿರೇಮಠ ಛಾಟಿ ಬೀಸಿದ್ದಾರೆ. ಅದರ ಜೊತೆಗೆ ‘ಫುಟ್‌ಪಾತ್‌ ಇಲ್ಲದ ರಸ್ತೆಗಳು, ಗಬ್ಬೆದ್ದು ನಾರುತ್ತಿರುವ ಗಟಾರಗಳು, ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು’ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ದೂಳು, ಹೊಂಡ ತುಂಬಿದ ರಸ್ತೆಯ ನಗರ ಅದ್ಹೇಗೆ ಉತ್ತಮ ಸ್ಥಾನ ಪಡೆದಯಿತು’ ಎಂದು ಪ್ರಶ್ನಿಸಿದವರೂ ಇದ್ದಾರೆ.

ಮಹಾನಗರ ಪಾಲಿಕೆ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೆ ಮಾಡಿರುವ ಪೋಸ್ಟ್‌ಗೆ ಎವೈಶೆಟ್ಟಿ16 ಎಂಬ ಖಾತೆಯಿಂದ ‘ಅದು ಯಾರೂ ಮರ‍್ರೆ, ಟಾಯ್ಲೆಟ್ ಇಲ್ಲದ ಊರಿಗೆ ಸ್ವಚ್ಛ ಊರು ಕೊಟ್ಟಿದ್ದು? ನಿನ್ ಮೇಲೆ ಕೇಸ್ ಹಾಕ್ಬೇಕು ಸುಳ್ಳು ಸುದ್ದಿ ಹಬ್ಬಿಸುತಿದ್ದಿ’ ಎಂದು ವ್ಯಂಗ್ಯವಾಡಿದ್ದಾರೆ. ರಾಯಲ್ ವಂಡರ್‌ ಖಾಸಿಮ್‌ ಎನ್ನುವ ಖಾತೆಯಿಂದ ‘ಸಮೀಕ್ಷೆ ಮಾಡಿದವರು ಏರೋಪ್ಲೇನ್‌ನಲ್ಲಿ ಬಂದು ಏರ್‌ಪೋರ್ಟ್‌ ಮಾತ್ರ ನೋಡಿ ಹೋಗಿರಬಹುದು. ಹುಬ್ಬಳ್ಳಿ ಗಲ್ಲಿಗಲ್ಲಿ ನೋಡಿದರೆ ಗೊತ್ತಾಗುತ್ತೆ ಎಷ್ಟು ಕ್ಲೀನ್ ಇದೆ ಅಂತಾ’ ಎಂದು ಆಕ್ರೋಶ ವ್ಯಕ್ತವಾಗಿದೆ.

ಕಳೆದ ವರ್ಷ 87ನೇ ಸ್ಥಾನ:

ಹು–ಧಾ ಮಹಾನಗರ ಪಾಲಿಕೆ 3 ಲಕ್ಷದಿಂದ 10 ಲಕ್ಷ ಜನಸಂಖ್ಯೆ ಇರುವ ದೇಶದ 101 ನಗರಗಳ ಪೈಕಿ 34 ಸ್ಥಾನ ಹಾಗೂ ರಾಜ್ಯದಲ್ಲಿ 2ನೇ ಸ್ಥಾನ ಗಳಿಸಿದೆ. 2024ರಲ್ಲಿ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು 87ನೇ ಸ್ಥಾನ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.