ADVERTISEMENT

ವಾಹನಗಳ ದಟ್ಟಣೆ: ಸಂಚಾರಕ್ಕೆ ಪರದಾಟ

​ಪ್ರಜಾವಾಣಿ ವಾರ್ತೆ
Published 22 ಜೂನ್ 2018, 16:57 IST
Last Updated 22 ಜೂನ್ 2018, 16:57 IST
ಹುಬ್ಬಳ್ಳಿಯ ನೀಲಿಜಿನ್‌ ರಸ್ತೆಯಲ್ಲಿ ವಾಹನಗಳ ನಡುವೆಯೇ ರಸ್ತೆ ದಾಟುತ್ತಿರುವ ಪ್ರಯಾಣಿಕರು
ಹುಬ್ಬಳ್ಳಿಯ ನೀಲಿಜಿನ್‌ ರಸ್ತೆಯಲ್ಲಿ ವಾಹನಗಳ ನಡುವೆಯೇ ರಸ್ತೆ ದಾಟುತ್ತಿರುವ ಪ್ರಯಾಣಿಕರು   

ಹುಬ್ಬಳ್ಳಿ: ಹಳೇ ಬಸ್‌ ನಿಲ್ದಾಣ ಮುಂದೆ ನಿರ್ಮಾಣ ಮಾಡುತ್ತಿರುವ ಬಿಆರ್‌ಟಿಎಸ್‌ ಬಸ್ ನಿಲ್ದಾಣ ಕಾಮಗಾರಿಯಿಂದಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಗಿವೆ.

ವಾಹನಗಳ ದಟ್ಟಣೆ ತಗ್ಗಿಸಲು ಪೊಲೀಸರು, ಲಾರಿ, ಬಸ್‌ಗಳನ್ನು ಬಸವ ವನ ಕಡೆಯಿಂದ ಚನ್ನಮ್ಮ ವೃತ್ತಕ್ಕೆ ಬರುವುದನ್ನು ನಿಷೇಧಿಸಲಾಗಿದ್ದರೂ, ದಟ್ಟಣೆ ತಪ್ಪಿಲ್ಲ. ಆಗಾಗ ವಾಹನಗಳ ನಡುವೆ ಅಪಘಾತಗಳು ಆಗುತ್ತಲೇ ಇವೆ. ಇದರಿಂದಾಗಿ ಮಾಲೀಕರುಗಳ ನಡುವೆ ವಾಗ್ವಾದ ಸಾಮಾನ್ಯ ಎನ್ನುವಂತಾಗಿದೆ.

ಅಲ್ಲಿ ರಸ್ತೆ ತಗ್ಗಾಗಿರುವುದರ ಜತೆಗೆ ಹಾಳಾಗಿ ಹೋಗಿದೆ. ಹಾಗಾಗಿ, ಸ್ವಲ್ಪ ಮಳೆಯಾದರೂ ಸಾಕು ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ ಕೆಸರು ಮೈಮೇಲೆ ಬೀಳುತ್ತದೆ. ರಸ್ತೆ ಪಕ್ಕದ ಚರಂಡಿ ಮುಚ್ಚಿ ಹೋಗಿದೆ.

ADVERTISEMENT

ಬಸ್‌ ನಿಲ್ದಾಣ ಎದುರಗಡೆ ಕೆಲವು ಮಳಿಗೆಗಳ ಮುಂದೆ ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಜತೆಗೆ ಹೋಟೆಲ್‌ಗಳ ಮುಂದೆ ರಸ್ತೆಯಲ್ಲಿಯೇ ವಾಹನಗಳು ನಿಂತಿರುತ್ತವೆ. ಹಾಗಾಗಿ, ವಾಹನಗಳು ಮುಂದೆ ಸಾಗುವುದೇ ಇಲ್ಲ.

ಬಸ್ ನಿಲ್ದಾಣದ ಮುಂದೆ ಆಟೊಗಳ ನಿಲುಗಡೆಗೆ ನಿಲ್ದಾಣವಿದೆ. ಆದರೂ, ಕೆಲವೊಮ್ಮೆ ಆಟೊಗಳು ರಸ್ತೆಯಲ್ಲಿಯೂ ನಿಂತಿರುತ್ತವೆ. ಜತೆಗೆ ನಿಲ್ದಾಣಕ್ಕೆ ಸಾರ್ವಜನಿಕರನ್ನು ಕಳುಹಿಸಲು, ಕರೆದುಕೊಂಡು ಹೋಗಲು ಬರುವವರೂ ವಾಹನಗಳನ್ನು ನಿಲ್ಲಿಸಿರುತ್ತಾರೆ. ಪಾದಚಾರಿಗಳು ಹೋಗಲು ಮಾರ್ಗವೇ ಇಲ್ಲದಂತಾಗಿದೆ ಎಂದು ದೂರುತ್ತಾರೆ ಸಾರ್ವಜನಿಕರು.

ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ಚನ್ನಮ್ಮ ವೃತ್ತದಲ್ಲಿನ ಟ್ರಾಫಿಕ್‌ ಸಿಗ್ನಲ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನೀಲಿಜಿನ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಳವಡಿಸಿರುವ ಟ್ರಾಫಿಕ್‌ ಸಿಗ್ನಲ್‌ ಬಂದ್ ಆಗಿದೆ. ಬಸವ ವನ ಬಳಿ ಇರುವ ಟ್ರಾಫಿಕ್‌ ಸಿಗ್ನಲ್‌ ಕೂಡ ಕಾರ್ಯ ನಿರ್ವಹಿಸುತ್ತಿಲ್ಲ.

ಸಾರ್ವಜನಿಕರು ಮತ್ತು ಪಾದಚಾರಿಗಳು ರಸ್ತೆ ದಾಟಲು ಹಳೇ ಬಸ್ ನಿಲ್ದಾಣದ ಎದುರಿಗೆ ಮೇಲ್ಸೇತುವೆ ಇತ್ತು. ಬಸ್‌ ನಿಲ್ದಾಣ ಸಂದರ್ಭದಲ್ಲಿ ಅದನ್ನು ಕೆಡವಲಾಗಿದೆ. ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಹಾಗಾಗಿ ರಸ್ತೆ ದಾಟುವವರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ದಾಟಬೇಕಾಗಿದೆ.

ಬಿಆರ್‌ಟಿಎಸ್‌ ನಿಲ್ದಾಣ ಕಾಮಗಾರಿಯನ್ನು ಶೀಘ್ರವೇ ಮುಗಿಸಬೇಕು. ಅಲ್ಲಿಯವರೆಗೆ ಸಂಚಾರ ದಟ್ಟಣೆಯನ್ನು ನಿಭಾಯಿಸಬೇಕು ಎಂಬುದು ಜನರ ಆಗ್ರಹ

ಬಸ್‌ ಸಂಚಾರ ಹೆಚ್ಚಿರುವುದರಿಂದ ದೂಳು ಜಾಸ್ತಿಯಾಗಿದೆ. ಪಾದಚಾರಿ ಮಾರ್ಗದಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಕಾಮಗಾರಿ ಬೇಗನೆ ಪೂರ್ಣಗೊಳಿಸಬೇಕು.
- ಶಂಕರ, ವ್ಯಾಪಾರಿ

ಬಿಆರ್‌ಟಿಎಸ್‌ ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿಯಿಂದ ತೊಂದರೆಯಾಗುತ್ತಿದೆ. ಜನರ ತೊಂದರೆ ನಿವಾರಿಸಲು ಕ್ರಮಕೈಗೊಳ್ಳಬೇಕು
- ಧರ್ಮರಾಜ ಗಡಗಿ, ವ್ಯಾಪಾರಿ.

ನಾಗಪ್ಪ.ಕೆ.ಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.