
ಅಣ್ಣಿಗೇರಿ: ‘ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಾಗುವದಿಲ್ಲ. ತಾವು ಕಲಿಸಿದ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಬೆಳೆಯುವದನ್ನು ಕಂಡು ಸಂತೋಷ ಪಡುವ ವ್ಯಕ್ತಿಯೇ ಗುರು’ ಎಂದು ಕೊಪ್ಪಳದ ಗವಿ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಶಲವಡಿ ಗ್ರಾಮದ ಶ್ರೀ ಗುರುಶಾಂತೇಶ್ವರ ಪ್ರೌಢಶಾಲೆಯಲ್ಲಿ ಭಾನುವಾರ ಹಳೆಯ ವಿದ್ಯಾರ್ಥಿಗಳ ಸಂಘದ 1995-96ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಹುಟ್ಟು ಮತ್ತು ಸಾವು ನಮ್ಮಿಚ್ಚೆಯಂತೆ ನಡೆಯುವದಿಲ್ಲ, ಆದರೆ ಬದುಕು ಮಾತ್ರ ನಮ್ಮ ಕೈಯಲ್ಲಿದೆ. ಹೀಗಾಗಿ ನಾವೆಲ್ಲರೂ ಉತ್ತಮ ಬದುಕನ್ನು ಸಾಗಿಸಲು ಪ್ರಯತ್ನಿಸಬೇಕು ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ನಮಗೆ ಶಿಕ್ಷಣ ನೀಡಿದ ಶಿಕ್ಷಕರನ್ನು ಸದಾ ನೆನಪಿನಲ್ಲಿಟ್ಟುಕೊಂಡು ಅವರಿಗೆ ಗುರುವಂದನೆ ಮಾಡುತ್ತಿರುವ ಕಾರ್ಯ ಉತ್ತಮವಾದುದು ಎಂದರು.
ಈ ಕಾರ್ಯಕ್ರಮದಲ್ಲಿ ಶಲವಡಿಯ ವಿರಕ್ತಮಠದ ಗುರುಶಾಂತೇಶ್ವರ ಸ್ವಾಮೀಜಿ, ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಶಿಕ್ಷಕರು ಮತ್ತು 1995-96 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಸಂಘದ ಸರ್ವ ಸದಸ್ಯರು, ಗ್ರಾಮದ ಗುರು-ಹಿರಿಯರು ಯುವಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.