ADVERTISEMENT

ಹುಬ್ಬಳ್ಳಿ: ಬೈಕ್‌ನಲ್ಲಿ 25 ಸಾವಿರ ಕಿ.ಮೀ ಸುತ್ತಿದ ತಹಶೀಲ್ದಾರ್‌

‘ಬಿ ಎಜುಕೇಟ್‌, ಬಿ ಎಂಪವರ್‌’ ಧ್ಯೇಯ; 109 ದಿನಗಳ ಬೈಕ್‌ ರೈಡ್ ಸಂಪನ್ನ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 12:09 IST
Last Updated 9 ಡಿಸೆಂಬರ್ 2022, 12:09 IST
109 ದಿನಗಳ ಬೈಕ್‌ ರೈಡ್‌ ಮುಗಿಸಿದ ಹುಬ್ಬಳ್ಳಿಯ ಶಹರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರಿಗೆ ಗುರುವಾರ ನಗರದ ಚನ್ನಮ್ಮ ವೃತ್ತದಲ್ಲಿ ಸ್ವಾಗತ ಕೋರಲಾಯಿತು
109 ದಿನಗಳ ಬೈಕ್‌ ರೈಡ್‌ ಮುಗಿಸಿದ ಹುಬ್ಬಳ್ಳಿಯ ಶಹರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರಿಗೆ ಗುರುವಾರ ನಗರದ ಚನ್ನಮ್ಮ ವೃತ್ತದಲ್ಲಿ ಸ್ವಾಗತ ಕೋರಲಾಯಿತು   

ಹುಬ್ಬಳ್ಳಿ: ‘ಬಿ ಎಜುಕೇಟ್‌, ಬಿ ಎಂಪವರ್‌’ ಎಂಬ ಧ್ಯೇಯದೊಂದಿಗೆ 109 ದಿನಗಳ ಬೈಕ್ ರೈಡ್‌ ಮುಗಿಸಿ ಗುರುವಾರ ಸಂಜೆ ನಗರಕ್ಕೆ ಮರಳಿದ ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರಿಗೆ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಶಶಿಧರ ಅವರು ಚನ್ನಮ್ಮ ವೃತ್ತ ತಲುಪುತ್ತಿದ್ದಂತೆ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ, ಸಾರ್ವಜನಿಕರು ಮತ್ತು ಕುಟುಂಬದವರು ಹೂವು ನೀಡಿ, ಸಿಹಿ ತಿನ್ನಿಸಿದರು. ಅಭಿಮಾನಿಗಳು ಫೋಟೊ ತೆಗೆಸಿಕೊಂಡು, ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದರು.

‘ಆ.21ರಂದು ಬೈಕ್‌ ರೈಡ್‌ ಆರಂಭಿಸಿದ್ದೆ. ಇಡೀ ದೇಶ ಸುತ್ತಿ, ಶಿಕ್ಷಣದ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸುವುದು ನನ್ನ ಉದ್ದೇಶವಾಗಿತ್ತು’ ಎಂದು ಮಾಡ್ಯಾಳ ಹೇಳಿದರು.

ADVERTISEMENT

‘27 ರಾಜ್ಯಗಳನ್ನು ಸುತ್ತಿ, 25 ಸಾವಿರ ಕಿ.ಮೀ ಸಂಚರಿಸಿದ್ದೇನೆ. 14 ಪದ್ಮಶ್ರೀ ಪುರಸ್ಕೃತರನ್ನು ಭೇಟಿ ಮಾಡಿದ್ದೇನೆ. ದೇಶದ ಕೊನೆಯ 21 ಗ್ರಾಮಗಳು, 14 ಶಾಲೆಗಳಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿದ್ದೇನೆ. ನನ್ನ ರೈಡ್‌ಗೆ ಸ್ನೇಹಿತರು, ಕುಟುಂಬದರು, ಸಿಬ್ಬಂದಿ, ಮೇಲಧಿಕಾರಿಗಳು ಸಹಕಾರ, ಪ್ರೋತ್ಸಾಹ ನೀಡಿದ್ದಾರೆ’ ಎಂದರು.

‘ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಮ್ಮ ಕುಟುಂಬದ ಮಾಡ್ಯಾಳ ಎಜುಕೇಷನ್‌ ಅಸೋಸಿಯೇಷನ್‌ನಿಂದ ಪ್ರೋತ್ಸಾಹ ನೀಡುವ ಕೆಲಸಮಾಡಲಾಗುತ್ತಿದೆ. ಇದೇ ಕೆಲಸವನ್ನುತಾಲ್ಲೂಕು ಆಡಳಿತದಿಂದಲೂ ಹಮ್ಮಿಕೊಳ್ಳಲಾಗುತ್ತಿದೆ. ಯುವಕರಿಗೆ ಮಾರ್ಗದರ್ಶನ ನೀಡುವ, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಲಾಗುವುದು’ ಎಂದು ಹೇಳಿದರು.

ರೈಡ್‌ನಲ್ಲಿ ಆದ ಅನುಭವಗಳು, ಅಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ತರಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ವಿಶ್ವ ತಡಸೂರು ಅವರು ಶಶಿಧರ ಮಾಡ್ಯಾಳ ಅವರೊಂದಿಗೆ ಬೈಕ್‌ ರೈಡ್‌ನಲ್ಲಿ ಜತೆಯಾಗಿದ್ದರು. ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಬಿ., ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.