ADVERTISEMENT

ಭಕ್ತರಿಗೆ ದೇವರ ದರ್ಶನ 5ರಿಂದ

ದೇವಸ್ಥಾನಗಳಲ್ಲಿ ಸುರಕ್ಷತಾ ನಿಯಮ ಪಾಲಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 13:06 IST
Last Updated 4 ಜುಲೈ 2021, 13:06 IST
ಹುಬ್ಬಳ್ಳಿಯ ಹಳೇ ಕೋರ್ಟ್ ವೃತ್ತದ ಬಳಿಯ ಸಾಯಿಬಾಬಾ ದೇವಸ್ಥಾನವನ್ನು ಭಾನುವಾರ ಸ್ವಚ್ಛಗೊಳಿಸಲಾಯಿತು
ಹುಬ್ಬಳ್ಳಿಯ ಹಳೇ ಕೋರ್ಟ್ ವೃತ್ತದ ಬಳಿಯ ಸಾಯಿಬಾಬಾ ದೇವಸ್ಥಾನವನ್ನು ಭಾನುವಾರ ಸ್ವಚ್ಛಗೊಳಿಸಲಾಯಿತು   

ಹುಬ್ಬಳ್ಳಿ: ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾದ ಕಾರಣ ಸೋಮವಾರದಿಂದ (ಜು. 5)ದೇವಸ್ಥಾನಗಳನ್ನು ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಅವಳಿ ನಗರಗಳ ಪ್ರಮುಖ ಮಠಗಳು ಹಾಗೂ ದೇವಸ್ಥಾನಗಳು ಭಕ್ತರಿಗೆ ತೆರೆಯಲು ಸಿದ್ಧಗೊಂಡಿವೆ.

ಹುಬ್ಬಳ್ಳಿಯ ಸಿದ್ಧಾರೂಢ ಮಠ ಮತ್ತು ಮೂರು ಸಾವಿರ ಮಠದಲ್ಲಿ ಲಾಕ್‌ಡೌನ್‌ ಹಾಗೂ ನಿರ್ಬಂಧದ ಅವಧಿಯಲ್ಲಿ ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದವು. ಆದರೆ, ಭಕ್ತರಿಗೆ ಅವಕಾಶವಿರಲಿಲ್ಲ. ಈಗ ಅನುಮತಿ ಸಿಕ್ಕಿರುವುದರಿಂದ ಭಾನುವಾರ ಸಿದ್ಧಾರೂಢ ಮಠದ ಮುಂದೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರೆಯಲಾಯಿತು. ಹಳೇ ಕೋರ್ಟ್‌ ವೃತ್ತದಲ್ಲಿರುವ ಸಾಯಿಬಾಬಾ ದೇವಸ್ಥಾನದ ಪ್ರಾಂಗಣ ಶುಚಿಗೊಳಿಸಲಾಯಿತು.

ಧಾರವಾಡದ ಮುರುಘಾಮಠ, ಸಾಧನಕೇರಿಯ ಕರಿಯಮ್ಮ ದೇವಸ್ಥಾನ, ಕೆಸಿಡಿ ವೃತ್ತದ ಗಣಪತಿ ದೇವಸ್ಥಾನ, ಕೆಲಗೇರಿಯ ಕಲ್ಮೇಶ್ವರ ಸೇರಿದಂತೆ ಹಲವೆಡೆ ದೇವಸ್ಥಾನಗಳಿಗೆ ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದರು. ಕೋವಿಡ್‌ ಕಾರಣದಿಂದ ನಿರ್ಬಂಧ ಹೇರಲಾಗಿತ್ತು.

ADVERTISEMENT

ಸಿದ್ಧಾರೂಢ ಮಠದವ್ಯವಸ್ಥಾಪಕ ಈರಣ್ಣ ತುಪ್ಪದ ’ಪ್ರಜಾವಾಣಿ’ ಜೊತೆ ಮಾತನಾಡಿ ’ಸರ್ಕಾರದ ಆದೇಶದಂತೆ ಸೋಮವಾರದಿಂದ ಭಕ್ತರಿಗೆ ಮಠದಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಸದ್ಯಕ್ಕೆ ಗರ್ಭಗುಡಿಯ ಪ್ರವೇಶ ದ್ವಾರದ ತನಕ ಮಾತ್ರ ದರ್ಶನ ವ್ವವಸ್ಥೆ ಇರುತ್ತದೆ. ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 9ರ ವರೆಗೆ ಭಕ್ತರು ದರ್ಶನ ಪಡೆಯಬಹುದು. ಮೂರ್ನಾಲ್ಕು ದಿನಗಳ ತನಕ ದಾಸೋಹದ ವ್ಯವಸ್ಥೆ ಇರುವುದಿಲ್ಲ. ಆಗಿನ ಪರಿಸ್ಥಿತಿ ನೋಡಿಕೊಂಡು ಈ ಕುರಿತು ತೀರ್ಮಾನಿಸಲಾಗುವುದು’ ಎಂದರು.

ಕುಬೇರಪುರಂ ಬಡಾವಣೆಯ ವೆಂಕಟೇಶ ದೇವಸ್ಥಾನ ಮತ್ತು ರಾಘವೇಂದ್ರ ಸ್ವಾಮಿಯ ಮಠದ ಅರ್ಚಕ ಗುರುಚಾರ್ಯ ಪ್ರತಿಕ್ರಿಯಿಸಿ ‘ಆರಂಭದಲ್ಲಿಯೇ ದಿನಪೂರ್ತಿ ದೇವಸ್ಥಾನ ತೆರೆಯುವುದಿಲ್ಲ. ಬೆಳಿಗ್ಗೆ 8 ಗಂಟೆಯಿಂದ 10ರ ವರೆಗೆ ಮತ್ತು ಸಂಜೆ 6ರಿಂದ 7 ಗಂಟೆ ತನಕ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ತೀರ್ಥ ನೀಡುವುದಿಲ್ಲ. ಎಲ್ಲರೂ ಕೋವಿಡ್‌ ನಿಯಮ ಪಾಲಿಸಬೇಕು’ ಎಂದು ಮನವಿ ಮಾಡಿದರು.

ಮಠದಲ್ಲಿ ಸೋಮವಾರದಿಂದಲೇ ಭಕ್ತರಿಗೆ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳಿಗೆ ದಾಸೋಹದ ವ್ಯವಸ್ಥೆ ಇರಲಿದೆ.
ಮಲ್ಲಿಕಾರ್ಜುನ ಸ್ವಾಮೀಜಿ,ಪೀಠಾಧ್ಯಕ್ಷರು, ಮುರುಘಾಮಠ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.