ADVERTISEMENT

ಹುಬ್ಬಳ್ಳಿ | ಪ್ರಜಾಪ್ರಭುತ್ವ ಗಟ್ಟಿಗೊಳಿಸಿದ್ದು ಮೋದಿ ಸರ್ಕಾರ: ಪ್ರಲ್ಹಾದ ಜೋಶಿ

ಬಿಜೆಪಿ ಧಾರವಾಡ, ಬೆಳಗಾವಿ ವಿಭಾಗದ ಜನರೊಂದಿಗೆ ಸಂವಾದ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 12:55 IST
Last Updated 26 ಜೂನ್ 2020, 12:55 IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ನಾವು ಇರುವುದೇ ಭಾರತವನ್ನು ಆಳುವುದಕ್ಕಾಗಿ ಎನ್ನುವ ಮನಸ್ಥಿತಿ ಹೊಂದಿದ್ದ ಇಂದಿರಾಗಾಂಧಿ ಕುಟುಂಬ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಸ್ಥಿರಗೊಳಿಸಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿಜವಾದ ಪ್ರಜಾಪ್ರಭುತ್ವ ಸ್ಥಾಪಿಸಿ ಸಂಪೂರ್ಣ ವ್ಯವಸ್ಥೆಯನ್ನೇ ಗಟ್ಟಿಗೊಳಿಸಿತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

1975-77ರ ನಡುವಿನ ತುರ್ತುಪರಿಸ್ಥಿತಿಯ ಅವಧಿಯನ್ನು ಕರಾಳ ದಿನವನ್ನಾಗಿ ಆಚರಿಸಿದ ಬಿಜೆಪಿಯ ಧಾರವಾಡ ಹಾಗೂ ಬೆಳಗಾವಿ ವಿಭಾಗದ ಜನರೊಂದಿಗೆ ಅವರು ನವದೆಹಲಿಯಿಂದ ವರ್ಚುವಲ್ ಸಂವಾದ ನಡೆಸಿದರು.

‘ತುರ್ತು ಪರಿಸ್ಥಿತಿಯ ಸಮಯದಲ್ಲಿ ನಾನು 7ನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ಸಂಘದಲ್ಲಿ ನಾಗರಾಜ್ ಅವರು ಅತ್ಯಂತ ಕ್ರಿಯಾಶೀಲರಾಗಿದ್ದರು. ಕೃಷ್ಣಪುರ, ಮಂಗೇಶ ಬೇಂಡೆ ಅವರ ಆದೇಶದ ಮೇರೆಗೆ ಸಂಘದ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುತ್ತಿದ್ದೆ. ಆ ಸಮಯದಲ್ಲಿ ತುರ್ತು ಪರಿಸ್ಥಿತಿ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಬಳಿಕ ಓದಿ ತಿಳಿದುಕೊಂಡೆ’ ಎಂದರು.

ADVERTISEMENT

‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇಶದ 1.40 ಲಕ್ಷಕ್ಕೂ ಹೆಚ್ಚು ಭಾರತೀಯರು ಯಾವುದೇ ವಿಚಾರಣೆ ಇಲ್ಲದೆ ಜೈಲುವಾಸ ಅನುಭವಿಸಬೇಕಾಯಿತು. 22 ತಿಂಗಳು ಜೈಲುವಾಸಿಯಾದರೂ ದೇಶಕ್ಕೆ ಗೊತ್ತಾಗದಂತೆ ಗಾಂಧಿ ಕುಟುಂಬದವರು ವ್ಯವಸ್ಥೆ ಮಾಡಿದ್ದರು. ಮಾಧ್ಯಮಗಳ ಮೇಲೆಯೂ ನಿರ್ಬಂಧ ಹೇರಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದರು’ ಎಂದು ಆರೋಪಿಸಿದರು. ದೇಶದ ಭವಿಷ್ಯ ಸುಭದ್ರವಾಗಿರಬೇಕಾದರೆ ಆ ಕರಾಳ ದಿನಗಳನ್ನು ಮತ್ತೆ ನೆನಪು ಮಾಡಿಕೊಳ್ಳದಿರುವುದೇ ಒಳಿತು ಎಂದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಚಿವ ಬಿ.ಸಿ. ಪಾಟೀಲ, ನಾಗಾರಾಜ್ ಜೀ, ಲಿಂಗರಾಜ ಪಾಟೀಲ, ದತ್ತಮೂರ್ತಿ ಕುಲಕರ್ಣಿ ಹಾಗೂ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.