ADVERTISEMENT

ಕಥೆಯಲ್ಲಿ ಸಾರ್ವಕಾಲಿಕತೆ ಮುಖ್ಯ: ಬಸು

ಗೋವಿಂದರಾಜುಗೆ ‘ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಬಹುಮಾನ ಪ್ರದಾನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 13:50 IST
Last Updated 3 ಅಕ್ಟೋಬರ್ 2021, 13:50 IST
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತುಮಕೂರಿನ ಗೋವಿಂದರಾಜು ಎಂ. ಕಲ್ಲೂರು ಅವರಿಗೆ ‘ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಬಹುಮಾನ’ ಪ್ರದಾನ ಮಾಡಲಾಯಿತು. ಸಾಹಿತಿ ಮಹಾಂತಪ್ಪ ನಂದೂರ, ರೂಪಾ ಜೋಶಿ, ಎಂ.ಬಿ. ಆಡ್ನೂರ, ಸುನಂದಾ ಕಡಮೆ, ಚನ್ನಪ್ಪ ಅಂಗಡಿ, ಡಾ. ಬಸು ಬೇವಿನಗಿಡದ, ಡಾ. ರಾಮಲಿಂಗಪ್ಪ ಅಂಟರತಾನಿ, ವಿಜಯಾ ಅಗಸನಕಟ್ಟೆ, ನಿರ್ಮಲಾ ಶೆಟ್ಟರ್, ವಿರೂಪಾಕ್ಷ ಕಟ್ಟೀಮನಿ, ಸಿ.ಎಂ. ಮುನಿಸ್ವಾಮಿ ಇದ್ದಾರೆ
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತುಮಕೂರಿನ ಗೋವಿಂದರಾಜು ಎಂ. ಕಲ್ಲೂರು ಅವರಿಗೆ ‘ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಬಹುಮಾನ’ ಪ್ರದಾನ ಮಾಡಲಾಯಿತು. ಸಾಹಿತಿ ಮಹಾಂತಪ್ಪ ನಂದೂರ, ರೂಪಾ ಜೋಶಿ, ಎಂ.ಬಿ. ಆಡ್ನೂರ, ಸುನಂದಾ ಕಡಮೆ, ಚನ್ನಪ್ಪ ಅಂಗಡಿ, ಡಾ. ಬಸು ಬೇವಿನಗಿಡದ, ಡಾ. ರಾಮಲಿಂಗಪ್ಪ ಅಂಟರತಾನಿ, ವಿಜಯಾ ಅಗಸನಕಟ್ಟೆ, ನಿರ್ಮಲಾ ಶೆಟ್ಟರ್, ವಿರೂಪಾಕ್ಷ ಕಟ್ಟೀಮನಿ, ಸಿ.ಎಂ. ಮುನಿಸ್ವಾಮಿ ಇದ್ದಾರೆ   

ಹುಬ್ಬಳ್ಳಿ: ‘ಕಥೆಗಳಲ್ಲಿ ಸಾರ್ವಕಾಲಿಕತೆ ಇರಬೇಕು. ಕಥೆಗಾರ ಸಮಕಾಲೀನತೆಗೆ ಮುಖಾಮುಖಿಯಾದಾಗ, ಆತನ ಬರಹಕ್ಕೆ ಸಾರ್ವಕಾಲಿಕತೆಯ ಗುಣ ಬರುತ್ತದೆ’ ಎಂದು ಕಥೆಗಾರ ಡಾ. ಬಸು ಬೇವಿನಗಿಡದ ಅಭಿಪ್ರಾಯಪಟ್ಟರು.

ಅಕ್ಷರ ಸಾಹಿತ್ಯ ವೇದಿಕೆ ಮತ್ತು ಕಿಮ್ಸ್ ಸಹಯೋಗದಲ್ಲಿ ಭಾನುವಾರನಗರದಲ್ಲಿ ನಡೆದ 2020-21ನೇ ಸಾಲಿನ ‘ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಬಹುಮಾನ’ ಪ್ರದಾನ ಸಮಾರಂಭದಲ್ಲಿ,ತುಮಕೂರು ವಿಶ್ವವಿದ್ಯಾಲಯದ ಗೋವಿಂದರಾಜು ಎ‌ಂ. ಕಲ್ಲೂರು ಅವರಿಗೆ ಬಹುಮಾನ ಪ್ರದಾನ ಮಾಡಿ ಅವರು ಮಾತನಾಡಿದರು. ‘ಕನ್ನಡದ ಕಥಾ ಪರಂಪರೆಯ ಮುಂದುವರಿಕೆಯ ಭಾಗವಾಗಿ ಗೋವಿಂದರಾಜು ಮತ್ತು ಅಜಯ ವರ್ಮಾ ಅಲ್ಲೂರಿ ಅವರ ಕಥೆಗಳು ಕಾಣುತ್ತವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಪ್ರಹ್ಲಾದ ಅವರು ಶ್ರೇಷ್ಠ ಕಥೆಗಾರ. ಜೀವನದ ನಶ್ವರತೆಯನ್ನು ಹೇಳುವ ಅವರ ಕಥೆಗಳು ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತವೆ. ಜೀವನ ಮತ್ತು ನೈತಿಕತೆಯ ಸಂಘರ್ಷವನ್ನು ಕಟ್ಟಿ‌ ಕೊಡುತ್ತಲೇ, ಓದುಗನಿಗೆ ಗುಂಗು ಹಿಡಿಸುತ್ತವೆ. ಅವರಿಗೆ ಸಾಹಿತ್ಯ ಲೋಕದಲ್ಲಿ ಮತ್ತಷ್ಟು ಮನ್ನಣೆ ಸಿಗಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಗೋವಿಂದರಾಜು ಅವರ ಕಥೆ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕುರಿತು ಮಾತನಾಡಿದ ಸಾಹಿತಿ ಚನ್ನಪ್ಪ ಅಂಗಡಿ, ‘ತಳವರ್ಗದ ಬದುಕಿನ ಈ ಕಥೆಯು ಹಲವು ನಿಗೂಢತೆಗಳನ್ನು ಹುದುಗಿಸಿಟ್ಟುಕೊಂಡಿದೆ. ವಿನಾಶದಂಚಿನಲ್ಲಿ ಜೀವದ ಪುನರುತ್ಥಾನವಾಗುವಂತೆ, ಶೋಷಿತರಿಗೂ ಬಿಡುಗಡೆ ಇದೆ ಎಂಬ ಆಶಾಭಾವವನ್ನು ಕಥೆ ಮೂಡಿಸುತ್ತದೆ’ ಎಂದು ಓರೆಗೆ ಹಚ್ಚಿದರು.

2020ನೇ ಸಾಲಿನ ಬಹುಮಾನ ಪುರಸ್ಕೃತ ಮೈಸೂರಿನ ಅಜಯ ವರ್ಮಾ ಅವರ ‘ಅಲುಮೇಲಮ್ಮ’ ಕಥೆ ಕುರಿತು ಮಾತನಾಡಿದ ಸಾಹಿತಿ ನಿರ್ಮಲಾ ಶೆಟ್ಟರ,‌ ‘ಶೋಷಿತ ವ್ಯವಸ್ಥೆಯ ಭಾಗವಾಗಿದ್ದುಕೊಂಡೇ, ಅದರ ವಿರುದ್ಧ ದನಿ ಎತ್ತುವ ಅಲುಮೇಲಮ್ಮ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತಾಳೆ. ಪಾತ್ರಗಳು ತೆರೆದಿಡುವ ಕ್ರೌರ್ಯ ನಮ್ಮನ್ನು ಕಾಡುತ್ತದೆ’ ಎಂದು ಬಣ್ಣಿಸಿದರು.

ಸಾಹಿತಿ ಸುನಂದಾ ಕಡಮೆ, ‘ಕಥಾ ಸಂಕಲನ, ವಿಮರ್ಶೆ ಸೇರಿದಂತೆ ಹಲವು ಬಗೆಯ ಸಾಹಿತ್ಯ ಕೃಷಿ ಮಾಡಿರುವ ಪ್ರಹ್ಲಾದ ಸರ್, ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಅವರ ನೆನಪಿಗಾಗಿ ಆರಂಭಿಸಿದ ಕಥಾ ಬಹುಮಾನ, ಇದೀಗ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ’ ಎಂದು ಹೇಳಿದರು.

ಕಥೆಗಾರ ಗೋವಿಂದರಾಜು ಎಂ. ಕಲ್ಲೂರು ಮಾತನಾಡಿ, ‘ಬಹುಮಾನದ ಜೊತೆಗೆ, ಪ್ರಹ್ಲಾದ ಅಗಸನಕಟ್ಟೆ ಅವರ ನೆನಪುಗಳನ್ನು ಈ ಕಾರ್ಯಕ್ರಮ ನನಗೆ ಕೊಟ್ಟಿದೆ’ ಎಂದು ಕೃತಜ್ಞತೆ ಸಲ್ಲಿಸಿದರು.

ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ‘ಶೋಷಿತರ ಬವಣೆಗಳು ಯುವ ಕವಿಗಳ ಕಥಾವಸ್ತುವಾಗುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಬೆನ್ನು ತಟ್ಟಿದರು.

ಪ್ರಶಸ್ತಿಯು ₹5 ಸಾವಿರ ನಗದು, ಫಲಕ ಹಾಗೂ ಅಭಿನಂದನಾ ಪತ್ರವನ್ನು ಒಳಗೊಂಡಿದೆ. ಅಜಯ ವರ್ಮಾ ಕಾರ್ಯಕ್ರಮಕ್ಕೆ ಗೈರಾಗಿದ್ದರು.ಪ್ರಹ್ಲಾದ ಅವರ ಸ್ನೇಹಿತ ಈರಯ್ಯ ಕಿಲ್ಲೇದಾರ ಅವರನ್ನು ಸನ್ಮಾನಿಸಲಾಯಿತು.ವೇದಿಕೆ ಅಧ್ಯಕ್ಷ ಎಂ.ವಿ. ಅಡ್ನೂರು ಅಧ್ಯಕ್ಷತೆ ವಹಿಸಿದ್ದರು. ಮಹಾಂತಪ್ಪ ನಂದೂರ ನಿರೂಪಣೆ ಮಾಡಿದರು. ವಿರೂಪಾಕ್ಷ ಕಟ್ಟೀಮನಿ ವಂದಿಸಿದರು. ಪ್ರಹ್ಲಾದ ಅಗಸನಕಟ್ಟೆ ಅವರ ಪತ್ನಿ ವಿಜಯಾ ಅಗಸನಕಟ್ಟೆ, ಪುತ್ರಿ ಅಕ್ಷತಾ, ಪುತ್ರ ಹರ್ಷ, ಸಿ.ಎಂ. ಮುನಿಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.