ADVERTISEMENT

‘ತ್ರಿಪದಿ’ ಸುಲಭವಾಗಿ ಅರ್ಥೈಸುವ ಸಾಹಿತ್ಯ: ಶಾಕೀರ್ ಸನದಿ

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 4:11 IST
Last Updated 21 ಫೆಬ್ರುವರಿ 2026, 4:11 IST
ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಏರ್ಪಡಿಸಿದ್ದ ಜಯಂತ್ಯುತ್ಸವದಲ್ಲಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಶಾಕೀರ್ ಸನದಿ ಪುಷ್ಪಾರ್ಚನೆ ಮಾಡಿದರು 
ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ಏರ್ಪಡಿಸಿದ್ದ ಜಯಂತ್ಯುತ್ಸವದಲ್ಲಿ ಸರ್ವಜ್ಞ ಅವರ ಭಾವಚಿತ್ರಕ್ಕೆ ಶಾಕೀರ್ ಸನದಿ ಪುಷ್ಪಾರ್ಚನೆ ಮಾಡಿದರು    

ಧಾರವಾಡ: ‘ಸರ್ವಜ್ಞ ಅವರ ವಚನಗಳು ಜನರಲ್ಲಿ ಜಾಗೃತಿ ಮೂಡಿಸುತ್ತವೆ. ಅವರ ತ್ರಿಪದಿಗಳು ಸತ್ಯ ಮತ್ತು ನೀತಿಯ ಮಾರ್ಗವನ್ನು ತೋರಿಸಿವೆ’ ಎಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ವಜ್ಞ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಸರ್ವಜ್ಞ ಅವರ ತ್ರಿಪದಿಯಲ್ಲಿ ಆಳವಾದ ತತ್ವ, ವ್ಯಂಗ್ಯ ಭರಿತ ಹಾಸ್ಯ ಹಾಗೂ ಜೀವನ ಪಾಠ ಇದೆ. ತ್ರಿಪದಿಗಳು ಸುಲಭವಾಗಿ ಮನನವಾಗುವಂತೆ ರಚಿಸಲ್ಪಟ್ಟಿರುವುದರಿಂದ ಸಾಮಾನ್ಯ ಜನರು ಸಹ ಅರ್ಥೈಸಿಕೊಳ್ಳಲು ಅನುಕೂಲವಾಗುತ್ತದೆ’ ಎಂದರು.

ADVERTISEMENT

‘ಸರ್ವಜ್ಞ ಅವರು ಸಮಾಜ ಸೇವೆಯೇ ನಿಜವಾದ ಸಾಧನೆ ಎಂಬ ಸಂದೇಶ ಸಾರಿದರು. ಯುವಕರು ಮಹಾನುಭಾವರ ಆದರ್ಶಗಳನ್ನು ಅನುಸರಿಸಬೇಕು. ಕಾಯಕದಲ್ಲಿ ಸಮರ್ಪಣೆ ಇದ್ದರೆ, ವ್ಯಕ್ತಿ ಹಾಗೂ ರಾಷ್ಟ್ರ ಅಭಿವೃದ್ಧಿ ಹೊಂದುತ್ತದೆ’ ಎಂದು ಹೇಳಿದರು.

‘ಜನಸಾಮಾನ್ಯರ ಜೀವನಕ್ಕೆ ಹತ್ತಿರವಾದ ತ್ರಿಪದಿ ಸಾಹಿತ್ಯದ ಮೂಲಕ ಸಂತಕವಿ ಸರ್ವಜ್ಞರು, ನೈತಿಕ ಮೌಲ್ಯಗಳು, ದಾನ, ಧರ್ಮ, ಶ್ರಮ ಮತ್ತು ಸತ್ಯದ ಮಹತ್ವವನ್ನು ಬೋಧಿಸಿದರು. ಸರ್ವಜ್ಞರು ಒಂದೇ ಜಾತಿಗೆ ಸೀಮಿತರಾಗದೇ ಸಮಾಜದ ಎಲ್ಲ ವರ್ಗಗಳನ್ನೂ ಸಮನಾಗಿ ನೋಡಿದ ಜ್ಞಾನಿ’ ಎಂದರು.

ಮಾಜಿ ಸಂಸದ ಪ್ರೊ. ಐ.ಜಿ.ಸನದಿ ಮಾತನಾಡಿ, ‘ಸಂತಕವಿ ಸರ್ವಜ್ಞ ಅವರ ತ್ರಿಪದಿಗಳನ್ನು ಸ್ಮರಿಸಿ ಅವುಗಳ ಅರ್ಥವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರ್ವಜ್ಞರ ವಚನಗಳು ಮಾನವ ಜೀವನದ ಸತ್ಯಗಳನ್ನು ಸ್ಪಷ್ಟವಾಗಿ ತಿಳಿಸುವ ದಾರಿ ದೀಪಗಳಾಗಿವೆ’ ಎಂದು ಹೇಳಿದರು.

ಪ್ರೊ ನಂದೀಶ ಕಾಖಂಡಕಿ ಸರ್ವಜ್ಞ ಅವರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಜಿಲ್ಲಾ ಕರ್ನಾಟಕ ಪ್ರದೇಶ ಕುಂಬಾರ ಸಂಘದ ಅಧ್ಯಕ್ಷ ಬಸವಂತಪ್ಪ ಬಿ. ಚಕ್ರಸಾಲಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ.ಎಂ. ಕುಂಬಾರ, ಎಂ.ಪಿ. ಕುಂಬಾರ, ಶಂಕರ ಕುಂಬಾರ, ಕಿರಣ ಆಚಾರ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.