
ಹುಬ್ಬಳ್ಳಿ: ನಗರದ ಉಣಕಲ್ ಕೆರೆಯು ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಸುಮಾರು 240 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿರುವ ಈ ಕೆರೆಯ ದಡ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಂತರಗಂಗೆ ಕಳೆ ಯಥೇಚ್ಛವಾಗಿ ಬೆಳೆದಿದೆ. ಇದರಿಂದ ಕೆರೆಯ ಅಂದವೇ ಹಾಳಾಗುತ್ತಿದೆ.
ಜನರನ್ನು ಆಕರ್ಷಿಸುವುದಕ್ಕಾಗಿಯೇ ಪಾಲಿಕೆಯು ಈಚೆಗೆ ಬೋಟಿಂಗ್ ವ್ಯವಸ್ಥೆಯನ್ನೂ ಮಾಡಿದೆ. ಆದರೆ, ಕೆರೆಯಲ್ಲಿನ ಕೊಳಚೆ ನೀರಿನ ವಾಸನೆ, ಕೆರೆಯ ದಡ ಸೇರಿದಂತೆ ಸುತ್ತಮುತ್ತಲೂ ಬೆಳೆದಿರುವ ಜಲಕಳೆಯಿಂದಾಗಿ ಬೋಟಿಂಗ್ ಹೋಗುವವರ ಸಂಖ್ಯೆ ಕಡಿಮೆಯಾಗಿದೆ.
ಉಣಕಲ್ ಕೆರೆಯ ಆವರಣದಲ್ಲಿ ಸೂರ್ಯಾಸ್ತವನ್ನು ವೀಕ್ಷಿಸಲು ಈ ಹಿಂದೆ ಹೆಚ್ಚು ಜನರು ಸೇರುತ್ತಿದ್ದರು. ಆದರೆ, ನೀರಿನ ವಾಸನೆಯಿಂದಾಗಿ ಅವರ ಸಂಖ್ಯೆಯೂ ಕಡಿಮೆಯಾಗಿದೆ ಎನ್ನುತ್ತಾರೆ ಇಲ್ಲಿನ ಕೆಲ ಸ್ಥಳೀಯರು.
ಕೊಳಚೆ ನೀರು ಸೇರ್ಪಡೆ: ಕೆರೆಯು ಸುತ್ತಮುತ್ತಲಿನ ಗಾಮನಗಟ್ಟಿ, ರಾಯಾಪುರ, ಅಮರಗೋಳ ಹಾಗೂ ಸುತಗಟ್ಟಿ ಗ್ರಾಮಗಳಿಂದ ಉಣಕಲ್ ಕೆರೆಗೆ ನಿತ್ಯ ಕೊಳಚೆ ನೀರು ಬಂದು ಸೇರುತ್ತಿದೆ. ಇದರಿಂದಾಗಿ ಜಲಕಳೆ ನಿರಂತರವಾಗಿ ಬೆಳೆಯುತ್ತಲೇ ಇದೆ. ಕಳೆ ನಿರ್ಮೂಲನೆ ಹಾಗೂ ಕೆರೆ ಸ್ವಚ್ಛತೆ ನಿರ್ವಹಣೆಗಾಗಿ ಈ ಹಿಂದೆ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಸಾಕಷ್ಟು ಹಣ ಖರ್ಚು ಮಾಡಿ, ಕೆರೆಯ ನೀರಿನ ಸ್ವಚ್ಛತೆ ಹಾಗೂ ವೈಜ್ಞಾನಿಕವಾಗಿ ಕಳೆ ತೆಗೆಯಲಾಯಿತು. ಆದರೂ ಇಂದಿಗೂ ಕಳೆ ಬೆಳೆಯುವುದು ಕಡಿಮೆಯಾಗಿಲ್ಲ. ಕೆರೆಗೆ ಸೇರುವ ಕೊಳಚೆ ನೀರನ್ನು ನಿಲ್ಲಿಸಿದರೆ ಸಹಜವಾಗಿ ಜಲಕಳೆ ಬೆಳೆಯುವುದು ಕಡಿಮೆಯಾಗುತ್ತದೆ ಎನ್ನುತ್ತಾರೆ ಇಲ್ಲಿನ ಉಣಕಲ್ ಗ್ರಾಮದ ಕೆಲ ಹಿರಿಯರು.
30 ಎಕರೆಯಲ್ಲಿ ಬೆಳೆದ ಕಳೆ: ‘ಕೆರೆಯ ದಡ ಸೇರಿದಂತೆ ಸುತ್ತಮುತ್ತ ಸುಮಾರು 30 ಎಕರೆಯಲ್ಲಿ ಜಲಕಳೆ ಬೆಳೆದಿದೆ. ಇದನ್ನು ತೆಗೆಯಲು ಹಾಗೂ ನೀರಿನ ಗುಣಮಟ್ಟ ನಿರ್ವಹಣೆಗಾಗಿ ಈ ಬಾರಿ ನಮಗೆ ಟೆಂಡರ್ ಆಗಿದ್ದು, ಕೆಲ ದಿನಗಳಿಂದ ಜಲಕಳೆ ತೆಗೆಯುವ ಕಾರ್ಯ ಮಾಡುತ್ತಿದ್ದೇವೆ. ಇದಕ್ಕಾಗಿಯೇ ಪ್ರಸ್ತುತ 9 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಟೆಂಡರ್‌ನಲ್ಲಿ 6 ಜನ ಮಾತ್ರ ನಮೂದಿಸಲಾಗಿದೆ. ಆದರೆ, ಕೆರೆಯಲ್ಲಿ ಯಥೇಚ್ಛವಾಗಿ ಕಳೆ ಬೆಳೆದಿರುವ ಕಾರಣ, ಬೇಗನೆ ಕಳೆ ತೆಗೆದು ಕೆರೆ ಸ್ವಚ್ಛ ಮಾಡಬೇಕು ಎನ್ನುವ ಕಾರಣ, ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ‘ ಎನ್ನುತ್ತಾರೆ ಜೆಎಂಎಸ್ ಬಯೋ ಟೆಕ್‌ನ ನವೀನ್ ಎಸ್.ದೊಡ್ಡಮನಿ.
‘ಕೆರೆಯ ಹಿಂಬದಿಯ ದಡದಲ್ಲಿ ಹೆಚ್ಚು ಕಳೆ ಬೆಳೆದಿದೆ. ಮೊದಲು ಅಲ್ಲಿಂದ ಕಳೆ ತೆಗೆಯುವ ಕಾರ್ಯ ನಡೆಯುತ್ತಿದೆ. ಎಲ್ಲಾ ಕಳೆಯನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ‘ ಎನ್ನುತ್ತಾರೆ ಅವರು.
ಜಲಕಳೆ ತೆಗೆಯಲು ಹಾಗೂ ಇಲ್ಲಿನ ನೀರಿನ ಗುಣಮಟ್ಟ ಕಾಪಾಡಲು ಪಾಲಿಕೆಯಿಂದ ಲಕ್ಷಾಂತರ ಹಣ ಖರ್ಚು ಮಾಡಲಾಗುತ್ತಿದೆ. ಮೊದಲು ಕೆರೆಗೆ ಸೇರುವ ಕೊಳಚೆ ನೀರಿಗೆ ಕಡಿವಾಣ ಹಾಕಬೇಕು.ರಾಮಣ್ಣ ಉಣಕಲ್ ಗ್ರಾಮದ ನಿವಾಸಿ
ಕಳೆ ತೆಗೆದು ಕೆರೆಯ ದಡದಲ್ಲಿಯೇ ಹಾಕುತ್ತಾರೆ. ಇದರಿಂದ ಮತ್ತೆ ಅದು ಬೆಳೆಯುವ ಸಾಧ್ಯತೆ ಇರುತ್ತದೆ. ತೆಗೆದ ಕೂಡಲೇ ಅದನ್ನು ವಿಲೇವಾರಿ ಮಾಡಬೇಕು.ಮಹದೇವಪ್ಪ ಉಣಕಲ್ ಗ್ರಾಮದ ನಿವಾಸಿ
ಉಣಕಲ್ ಕೆರೆಯಲ್ಲಿ ಬೆಳೆಯುವ ಕಳೆಯನ್ನು ತೆಗೆಯಲು ಹಾಗೂ ನೀರಿನ ಗುಣಮಟ್ಟ ಕಾಪಾಡಲು ಈಚೆಗೆ ಜೆಎಂಎಸ್ ಬಯೋಟೆಕ್ ಅವರಿಗೆ ₹42.30 ಲಕ್ಷ ಟೆಂಡರ್ ಆಗಿದ್ದು ಕಳೆ ತೆಗೆಯುತ್ತಿದ್ದಾರೆ. ಕಾಮಗಾರಿ ಪ್ರಗತಿಯಲ್ಲಿದೆ ವಿಠ್ಠಲ ತುಬಾಕಿ.ಪಾಲಿಕೆಯ ಉತ್ತರ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.