ADVERTISEMENT

ಉಪ್ಪಿನಬೆಟಗೇರಿ: ಕಡಲೆ ಖರೀದಿ ಕೇಂದ್ರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 4:13 IST
Last Updated 21 ಫೆಬ್ರುವರಿ 2026, 4:13 IST
ಉಪ್ಪಿನಬೆಟಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ಖರೀದಿ ಕೇಂದ್ರಕ್ಕೆ ರೈತರು ಟ್ರ‍್ಯಾಕ್ಟರ್‌ಗಳಲ್ಲಿ ಕಡಲೆ ಕಾಳು ತಂದಿದ್ದರು
ಉಪ್ಪಿನಬೆಟಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ಖರೀದಿ ಕೇಂದ್ರಕ್ಕೆ ರೈತರು ಟ್ರ‍್ಯಾಕ್ಟರ್‌ಗಳಲ್ಲಿ ಕಡಲೆ ಕಾಳು ತಂದಿದ್ದರು   

ಉಪ್ಪಿನಬೆಟಗೇರಿ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರೆಯಲಾದ ಕಡಲೆ ಖರೀದಿ ಕೇಂದ್ರದಲ್ಲಿ ಹಿಂಗಾರು ಹಂಗಾಮಿನ ಕಡಲೆ ಕಾಳು ಮಾರಾಟ ಮಾಡಲು ರೈತರಿಗೆ ಅವಕಾಶ ಕಲ್ಪಿಸಲಾಗಿದೆ.

ಅಧಿಕೃತವಾಗಿ ಕಡಲೆ ಖರೀದಿ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಸರ್ಕಾರದ ಆದೇಶದನ್ವಯ ಏ.28ರವರೆಗೆ ರೈತರು ಮಾರಾಟ ಮಾಡಬಹುದಾಗಿದೆ. ನೋಂದಣಿ ಆರಂಭವಾಗಿ 15ದಿನ ಕಳೆದಿದ್ದು, ಇಲ್ಲಿಯವರೆಗೆ 1 ಸಾವಿರ ರೈತರು ನೋಂದಣಿ ಮಾಡಿಸಿದ್ದಾರೆ. ಏ.20 ನೋಂದಣಿಗೆ ಕೊನೆಯ ದಿನವಾಗಿದೆ.

’ಎಕರೆಗೆ 4 ಕ್ವಿಂಟಲ್‌ನಂತೆ ಗರಿಷ್ಠ 40 ಕ್ವಿಂಟಲ್‌ ಮಾರಾಟ ಮಾಡಬಹುದಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಒಂದು ಕ್ವಿಂಟಲ್ ಕಡಲೆಗೆ ₹5875 ದರ ನಿಗದಿಪಡಿಸಲಾಗಿದೆ. ಎಫ್‌ಎಕ್ಯೂ ಗುಣಮಟ್ಟದ ಆಧಾರದ ಮೇಲೆ ಖರೀದಿ ಮಾಡಲಾಗುತ್ತದೆ. ಸರ್ಕಾರದ ನಿಯಮಾನುಸಾರ ನೋಂದಣಿ ಮಾಡಿದ ಕಡಲೆ ಖರೀದಿ ಮಾಡಲಾಗುತ್ತದೆ’ ಎಂದು ಪಿಕೆಪಿಎಸ್ ಸಂಘದ ಸದಸ್ಯ ಈರಣ್ಣ ಮಡಿವಾಳರ ತಿಳಿಸಿದರು.

ADVERTISEMENT

’ಹಿಂಗಾರಿನ ಬೆಳೆ ಕಡಲೆ ಬೆಳೆಯ ಕೀಟ ನಿಯಂತ್ರಣಕ್ಕೆ ಎರಡರಿಂದ ಮೂರು ಬಾರಿ ಔಷಧಿ ಸಿಂಪರಣೆ, ಕಳೆ ನಾಶಕ್ಕೆ ಎಡೆ ಹೊಡೆಯುವುದು ಸೇರಿ ಕೂಲಿ ಆಳುಗಳು ದುಡಿದಿದ್ದಾರೆ. ಅಲ್ಲದೇ ಕಡಲೆ ಕೀಳಿಸುವುದು, ಮಷಿನ್‌ಗೆ ಹಾಕಿಸುವುದು, ಬಿತ್ತನೆಗೆ ಟ್ರ‍್ಯಾಕ್ಟರ್ ಬಾಡಿಗೆಗೆ ಹಣ ವ್ಯಯಿಸಲಾಗಿದ್ದು, ಆರ್ಥಿಕ ಹೊರೆಯಾಗಿದೆ. ಈಗಾಗಲೇ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ₹5875 ದರ ನಿಗದಿ ಪಡಿಸಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇನ್ನಷ್ಟು ದರ ಹೆಚ್ಚಿಸಿ ರೈತರ ಹಿತ ಕಾಪಾಡಬೇಕು’ ಎಂದು ಹನುಮನಕೊಪ್ಪ ಗ್ರಾಮದ ರೈತ ಚಂದ್ರಪ್ಪ ಛಬ್ಬಿ ಆಗ್ರಹ ಮಾಡಿದರು.

’ಕಡಲೆ ಮಾರಲು ನೋಂದಣಿ ಮಾಡಿಸಿದ ರೈತರಿಗೆ ಮೊಬೈಲ್ ಮೂಲಕ ಕರೆ ಮಾಡಿ ತಿಳಿಸಲಾಗುತ್ತದೆ. ಅಂದೇ ಖರೀದಿ ಕೇಂದ್ರದ ಮುಂದೆ ಸರತಿ ಸಾಲಲ್ಲಿ ನಿಲ್ಲಬೇಕು. ಕೆಂಪು ಕಡಲೆ ಕಾಳು ಮಾರಾಟಕ್ಕೆ ಮಾತ್ರ ಅವಕಾಶವಿದೆ’ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ಸಲೀಂ ಅಹ್ಮದ್ ಖತೀಬ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.