
ಧಾರವಾಡ: ‘ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಆಗಿವೆ, ಗೊಂದಲ ಸೃಷ್ಟಿಸಬಾರದು. ಎಲ್ಲರೂ ಒಂದಾಗಿ ಮುಂದುವರಿಯಬೇಕು’ ಎಂದು ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ 
ಹೇಳಿದರು.
ನಗರದ ಸರಸ್ವತಿನಿಕೇತನದ ಸಭಾಂಗಣದಲ್ಲಿ ಚಿಕ್ಕೋಡಿ ತಾಲ್ಲೂಕು ಯಡೂರು ಕ್ಷೇತ್ರದ ವೀರಭದ್ರ ದೇವರ ಭಕ್ತರ ಸಂಘಟನಾ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಸಮಾಜ ಆದಿಯಿಂದಲೂ ಒಂದಾಗಿದೆ, ಮುಂದೆಯೂ ಒಂದಾಗಿರುತ್ತದೆ. ವೀರಶೈವ ಲಿಂಗಾಯತ ಸಮಾಜದ ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಬೆಳವಣಿಗೆಗಾಗಿ ಎಲ್ಲರೂ ಶ್ರಮಿಸಬೇಕು’ ಎಂದರು.
‘ಯಡೂರು ದೇವಸ್ಥಾನಕ್ಕೆ ಭೇಟಿ ನಿಡುವ ಭಕ್ತರಿಗಾಗಿ ಅಲ್ಲಿ ಮೂಲಸೌಕರ್ಯ ಕಲ್ಪಿಸಲಾಗಿದೆ. ದೇಗುಲದ ಜೀರ್ಣೋದ್ಧಾರಕ್ಕೆ ಆದ್ಯತೆ ನೀಡಲಾಗಿದೆ. ಜನವರಿ 14 ರಿಂದ ಯಡೂರು ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗಾವಿಯಲ್ಲಿ ಜನವರಿ 20 ರಂದು ಧರ್ಮ ಜಾಗೃತಿ ಯಾತ್ರೆಗೆ ಚಾಲನೆ ನೀಡಲಾಗುವುದು’ ಎಂದರು.
ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ನಿವೃತ್ತ ಪ್ರಾಧ್ಯಾಪಕ ಸಿ.ಜಿ.ಮಠಪತಿ, ಮಂಜುನಾಥ ಮಕ್ಕಳಗೇರಿ ಮಾತನಾಡಿದರು.
ರೇಣುಕ ದೇವರು, ಯಡೂರ ಮಠದ ವ್ಯವಸ್ಥಾಪಕ ಅಡವಯ್ಯ ಅರಳಿಕಟ್ಟಿಮಠ, ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಸ್ವಾಮೀಜಿ, ಅಮ್ಮಿನಭಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಸ್ವಾಮೀಜಿ, ಅಂಬಿಕಾನಗರದ ಈಶ್ವರ ಪಂಡಿತಾರಾಧ್ಯ ಸ್ವಾಮೀಜಿ, ಬ್ಯಾಹಟ್ಟಿ ಹಿರೇಮಠದ ಮುರಳಸಿದ್ದ ಸ್ವಾಮೀಜಿ, ಬೇರುಗಂಡಿ ಬ್ರಹ್ಮನ್ಮಠದ ರೇಣುಕಾ ಸ್ವಾಮೀಜಿ, ಮೊರಬದ ಜಡಿಮಠದ ಮಹೇಶ್ವರ ಸ್ವಾಮಿಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.