ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಬುಧವಾರ ಮಹಾನವಮಿ ಹಾಗೂ ಗುರುವಾರ ವಿಜಯದಶಮಿಯನ್ನು ಜನರು ಸಂಭ್ರಮದಿಂದ ಆಚರಿಸಿದರು. ದೇವಿಯನ್ನು ಭಕ್ತಿಯಿಂದ ಆರಾಧಿಸಿ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ಹಬ್ಬದ ಮುನ್ನಾ ದಿನವೇ ನಗರದ ದುರ್ಗದಬೈಲ್, ಜನತಾಬಜಾರ್, ಮೊದಲಾದ ಮಾರುಕಟ್ಟೆಗಳಲ್ಲಿ ಪೂಜಾ ಸಾಮಗ್ರಿಗಳು, ಹೂ–ಹಣ್ಣು, ದಿನಸಿ ವಸ್ತುಗಳನ್ನು ಖರೀದಿಸಿದರು. ಗ್ರಾಹಕರ ಸೆಳೆಯಲು ವಿವಿಧ ಮಳಿಗೆಗಳು ವಿದ್ಯುದ್ದೀಪಗಳಿಂದ ಝಗಮಗಿಸಿದ್ದಲ್ಲದೆ, ವಿಶೇಷ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದ್ದವು.
ಆಯುಧಪೂಜೆ ಪ್ರಯುಕ್ತ ಆಬಾಲವೃದ್ಧರಾದಿಯಾಗಿ ಎಲ್ಲರೂ ಬೆಳಿಗ್ಗೆ ಅಭ್ಯಂಜನ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಮನೆಗಳನ್ನು ತಳಿರು ತೋರಣದಿಂದ ಸಿಂಗರಿಸಿದರು. ಪುರಾತನ ಕಾಲದ ಆಯುಧಗಳು, ವೃತ್ತಿ ಆಧಾರಿತ ಸಾಮಗ್ರಿಗಳು, ವಾಹನಗಳನ್ನು ಸ್ವಚ್ಛಗೊಳಿಸಿ, ಕುಂಕುಮ–ವಿಭೂತಿ ಹಾಗೂ ಹೂಗಳಿಂದ ಸಿಂಗರಿಸಿ, ಪೂಜೆ ಸಲ್ಲಿಸಿದರು. ಅಲಂಕೃತ ವಾಹನಗಳಲ್ಲಿ ಯುವಕರು ಊರ ಪ್ರದಕ್ಷಿಣೆ ಹಾಕಿದರು.
ತರಹೇವಾರಿ ಭಕ್ಷ್ಯಗಳನ್ನು ತಯಾರಿಸಿ, ದೇವರಿಗೆ ನೈವೇದ್ಯ ಅರ್ಪಿಸಲಾಯಿತು. ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಕುಳಿತು ಭೋಜನ ಸವಿದರು. ವಿವಿಧ ದೇವಸ್ಥಾನಗಳಿಗೆ ತೆರಳಿ, ದೇವರ ದರ್ಶನ ಪಡೆದರು. ಹಬ್ಬದ ವಿಶೇಷ ಕೊಡುಗೆಯಿದ್ದ ಕಾರಣ ಅಗತ್ಯ ವಸ್ತುಗಳು ಹಾಗೂ ವಾಹನಗಳನ್ನು ಖರೀದಿಸುವವರ ಸಂಖ್ಯೆಯೂ ಹೆಚ್ಚಿತ್ತು.
ಬನ್ನಿ ವಿನಿಮಯ: ವಿಜಯದಶಮಿ ಪ್ರಯುಕ್ತ ಬನ್ನಿ ವಿನಿಮಯ ಮಾಡಿಕೊಂಡು, ‘ಬದುಕು ಬಂಗಾರವಾಗಲಿ’ ಎಂದು ಪರಸ್ಪರರು ಹಾರೈಸಿದರು.
ತುಳಜಾಭವಾನಿ ದೇವಸ್ಥಾನದ ಎಸ್‌ಎಸ್‌ಕೆ ಸಮಾಜದಿಂದ ಪಲ್ಲಕ್ಕಿ ಉತ್ಸವ ಸಡಗರದಿಂದ ಜರುಗಿತು. ದಾಜಿಬಾನಪೇಟೆಯಲ್ಲಿರುವ ದುರ್ಗಾದೇವಿ ದೇವಸ್ಥಾನ, ಹಳೇಹುಬ್ಬಳ್ಳಿಯ ಬನ್ನಿ ಮಹಾಕಾಳಿ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ಗೋಕುಲರಸ್ತೆಯ ರಾಜಧಾನಿ ಕಾಲೊನಿ ಸೇರಿದಂತೆ ವಿವಿಧೆಡೆ ಪ್ರತಿಷ್ಠಾಪಿಸಿದ್ದ ದುರ್ಗಾ ದೇವಿ ಮೂರ್ತಿಯನ್ನು ಮೆರವಣಿಗೆ ಕೊಂಡೊಯ್ದು, ಉಣಕಲ್ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಒಂಬತ್ತು ದಿನಗಳ ಹಿಂದೆ ಪ್ರತಿಷ್ಠಾಪಿಸಿ, ನಿತ್ಯ ಪೂಜಿಸಿದ್ದ ಘಟವನ್ನು ಕೆರೆಗಳಲ್ಲಿ ವಿಸರ್ಜಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.