
ಧಾರವಾಡ: ‘ಯುವಜನರಲ್ಲಿ ಅಗಾಧ ಸಾಮರ್ಥ್ಯ ಇದೆ. ಅದನ್ನು ಸರಿಯಾಗಿ ಬಳಸಿಕೊಂಡು ವ್ಯಕ್ತಿತ್ವ ರೂಪಿಸಿಕೊಂಡು ಸಾಧನೆ ಮಾಡಿದವರು ಅಸಾಮಾನ್ಯರಾಗುತ್ತಾರೆ’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ರಾಮಕೃಷ ವಿವೇಕಾನಂದ ಆಶ್ರಮದ ವಾರ್ಷಿಕೋತ್ಸವದ ಅಂಗವಾಗಿ ಸರ್ಕಾರಿ ನೌಕರರ ಭವನದಲ್ಲಿ ಶುಕ್ರವಾರ ನಡೆದ ಯುವ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಏಕಾಗ್ರತೆ, ಸಚ್ಚಾರಿತ್ರ್ಯ, ಆತ್ಮವಿಶ್ವಾಸ ಮತ್ತು ಸಮಯಪ್ರಜ್ಞೆಯನ್ನು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಬೇಕು. ಸ್ವಾಮಿ ವಿವೇಕಾನಂದ ಅವರ ಆದರ್ಶ ಮತ್ತು ಚಿಂತನೆಗಳನ್ನು ತಿಳಿದುಕೊಳ್ಳಬೇಕು’ ಎಂದರು.
ಉದ್ಯಮಿ ಎಂ.ವಿ.ಕರಮರಿ ಮಾತನಾಡಿ, ‘ಶಂಕರಾಚಾರ್ಯ, ಸ್ವಾಮಿವಿವೇಕಾನಂದ ಮೊದಲಾದ ಮಹನೀಯರು ಅಧ್ಯಾತ್ಮ, ರಾಷ್ಟ್ರ ಪ್ರೇಮದ ಮಹತ್ವವನ್ನು ಪ್ರಪಂಚಕ್ಕೆ ತೋರಿಸಿಕೊಟ್ಟವರು. ಅವರ ಚಿಂತನೆಗಳನ್ನು ಯುವಜನರು ಪಾಲಿಸಬೇಕು’ ಎಂದರು.
ಮನೋಭಾವ ತರಬೇತುದಾರ ಮಹೇಶ ಮಾಶಾಳ ಮಾತನಾಡಿ, ‘ನಿಮ್ಮ ವ್ಯಕ್ತಿತ್ವ ನಿರ್ಮಾಣ ನಿಮ್ಮ ಕೈಯಲ್ಲೇ ಇದೆ. ಏಕಾಗ್ರತೆ, ಸಂಕಲ್ಪಶಕ್ತಿ ಮತ್ತು ಇಚ್ಚಾಶಕ್ತಿ ಇದ್ದರೆ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು’ ಎಂದರು.
ಬುದ್ಧಿಯೋಗಾನಂದ ಸ್ವಾಮೀಜಿ, ಕ್ಲಾಸಿಕ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಲಕ್ಷ್ಮಣ ಉಪ್ಪಾರ, ಪಿ.ಎಚ್.ನೀರಲಕೇರಿ, ವಿದ್ಯಾನಂದ ಸ್ಥಾವರಮಠ, ಅರುಣ್ ಅಮರಗೋಳ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.