
ಧಾರವಾಡ: ‘ಯುವಜನರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನ ಮಂತ್ರವಾಗಿಸಿಕೊಳ್ಳಬೇಕು. ಆತ್ಮವಿಶ್ವಾಸ, ಸೇವಾ ಮನೋಭಾವ ಮೈಗೂಡಿಸಿಕೊಂಡು ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ರಾಜ್ಯಪಾಲ ಥಾವರಚಂದ ಗೆಹಲೋತ್ ಹೇಳಿದರು.
ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮ ವತಿಯಿಂದ ಲಿಂಗಾಯತ ಭವನದಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಮಕೃಷ್ಣ– ವಿವೇಕಾನಂದ ಭಾವಪ್ರಚಾರ ಪರಿಷತ್ತಿನ 11ನೇ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸ್ವಾಮಿ ವಿವೇಕಾನಂದರು ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ. ಚಿಕಾಗೊದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಅವರು ಮಾಡಿದ ಭಾಷಣವು ಜಗತ್ತಿಗೆ ಭಾರತದ ಶ್ರೇಷ್ಠತೆಯನ್ನು ತಿಳಿಸಿತು, ಜೀವನದ ನಿಜವಾದ ಮಾರ್ಗವನ್ನು ತೋರಿಸಿತು’ ಎಂದರು.
‘ಶಿಕ್ಷಣದ ಉದ್ದೇಶವು ಜ್ಞಾನ ಗಳಿಸುವುದಷ್ಟೇ ಅಲ್ಲ, ಮಾನವೀಯತೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವುದು. ‘ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ’ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಯುವಜನರು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಶಿಸ್ತು ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ಭೌತಿಕ ಪ್ರಗತಿಯ ಜತೆಗೆ ಮಾನಸಿಕ ಅಶಾಂತಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಹನೀಯರ ಸಂದೇಶಗಳು ಮಾರ್ಗದರ್ಶನ ನೀಡುತ್ತವೆ’ ಎಂದು ಹೇಳಿದರು.
‘ಸಂತ ಕಬೀರ, ಗುರುನಾನಕ್, ತುಳಸೀದಾಸ, ಮೀರಾಬಾಯಿ, ಬಸವೇಶ್ವರ, ಪುರಂದರ ದಾಸ, ಕನಕದಾಸ ಮತ್ತು ಅಕ್ಕ ಮಹಾದೇವಿಯಂಥ ಮಹನೀಯರು ಸಮಾಜದಲ್ಲಿ ಪ್ರೀತಿ, ಸಮಾನತೆ ಮತ್ತು ಏಕತೆಯ ಸಂದೇಶ ಹರಡಿದರು. ಪ್ರೇಮ, ಕರುಣೆ ಮತ್ತು ಸತ್ಯ ಸರ್ವಧರ್ಮಗಳ ಸಾರವಾಗಿದೆ’ ಎಂದರು.
‘ಈ ಸಮ್ಮೇಳನವು ಆಧುನಿಕ ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಜೀವನಕ್ಕೆ ಹೊಸ ದಿಕ್ಕನ್ನು ನೀಡಿದ ರಾಮಕೃಷ್ಣ ಪರಮಹಂಸ, ಶಾರದಾ ದೇವಿ ಮತ್ತು ಸ್ವಾಮಿ ವಿವೇಕಾನಂದ ಅವರ ಆದರ್ಶಗಳಿಗೆ ಸಮರ್ಪಿತವಾಗಿದೆ. ಸಮ್ಮೇಳನಗಳ ಈ ಮಹನೀಯರ ಜೀವನ, ಚಿಂತನೆಗಳು ಮತ್ತು ಆದರ್ಶಗಳನ್ನು ಪ್ರಚಾರ ಮಾಡುತ್ತಿರುವುದು ಒಳ್ಳೆಯದು’ ಎಂದರು.
ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮೀಜಿ, ರಾಣೆಬೆನ್ನೂರಿನ ಆಶ್ರಮದ ಅಧ್ಯಕ್ಷ ಪ್ರಕಾಶಾನಂದ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಅನುಪಮಾನಂದ ಸ್ವಾಮೀಜಿ, ತ್ಯಾಗೀಶ್ವರಾನಂದ ಸ್ವಾಮೀಜಿ, ಗದಗ ಶಾಸಕ ಡಿ.ಆರ್.ಪಾಟೀಲ, ಮೇಯರ್ ಜ್ಯೋತಿಪಾಟೀಲ, ಕೇಂದ್ರ ಗಾಂಧೀ ಸ್ಮಾರಕ ನಿಧಿ ಟ್ರಸ್ಟಿ ಡಬ್ಲ್ಯು.ಪಿ.ಕೃಷ್ಣ ಇದ್ದರು.
ಭವಿಷ್ಯ ಸುಂದರವಾಗಬೇಕಾದರೆ ವರ್ತಮಾನದ ಎಚ್ಚರ ಇರಬೇಕು. ನಮ್ಮ ದಿಕ್ಕು ಮತ್ತು ಹೆಜ್ಜೆಗಳ ಪ್ರಜ್ಞೆ ಇರಬೇಕು. ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು-ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಅಧ್ಯಕ್ಷ ರಾಮಕೃಷ್ಣ ವಿವೇಕಾನಂದ ಆಶ್ರಮ ಗದಗ–ವಿಜಯಪುರ
ರಾಮಕೃಷ್ಣ– ವಿವೇಕಾನಂದ ಭಾವಪ್ರಚಾರ ಪರಿಷತ್ತು ಸಮಾಜ ಪರಿವರ್ತನೆಗೆ ರಾಮಕೃಷ್ಣ ವಿವೇಕಾನಂದ ಅವರ ಜೀವನ ಸಂದೇಶಗಳನ್ನು ಜನಮನದಲ್ಲಿ ಬಿತ್ತುವ ಕೆಲಸ ಮಾಡುತ್ತಿದೆ. ಉತ್ತಮ ಚಾರಿತ್ರ್ಯ ಬೆಳೆಸುವ ಶಿಕ್ಷಣ ನೀಡಬೇಕು. ಧರ್ಮ ಕರ್ಮಗಳ ಅಂತರ ಹೋಗಲಾಡಿಸಬೇಕು.-ಮುಕ್ತಿದಾನಂದ ಸ್ವಾಮೀಜಿ, ಅಧ್ಯಕ್ಷ ರಾಮಕೃಷ್ಣ ಆಶ್ರಮ ಮೈಸೂರು
ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಅಧ್ಯಾತ್ಮ ಸಹಕಾರಿ. ಮನಸ್ಸು ಶಕ್ತಿಯನ್ನು ಜಾಗೃತಗೊಳಿಸಿ ಸನ್ಮಾನಗದಲ್ಲಿ ನಡೆಯಬೇಕು. ರಾಮಕೃಷ್ಣ ವಿವೇಕಾನಂದ ಆಶ್ರಮದ ಯಾತ್ರಿ ಭವನ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ₹10 ಲಕ್ಷ ಒದಗಿಸುತ್ತೇನೆ-ಅರವಿಂದ ಬೆಲ್ಲದ, ಶಾಸಕ
ರಾಮಕೃಷ್ಣ ಪರಮಹಂಸ ಅವರಿಗೆ ಅಧ್ಯಾತ್ಮದ ಬಗ್ಗೆ ಅಪಾರ ಒಲವು ಇತ್ತು. ಅವರು ಸ್ವಾಮಿ ವಿವೇಕಾನಂದರ ಮೂಲಕ ಜಗತ್ತಿಗೆ ಅಧ್ಯಾತ್ಮದ ಶಕ್ತಿ ಪಸರಿಸುವ ಕಾಯಕ ಮಾಡಿದರು. ಧರ್ಮ ಎಂದರೆ ಪೂಜಾ ಪದ್ಧತಿ ಅಲ್ಲ ಎಂದು ನಿರೂಪಿಸಿದವರು ಸ್ವಾಮಿ ವಿವೇಕಾನಂದರು-ಪ್ರಲ್ಹಾದ ಜೋಶಿ, ಕೇಂದ್ರ ಆಹಾರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.