ADVERTISEMENT

ಖರ್ಗೆ ಸಂದೇಶ ಯಾಕೆ ಪಸರಿಸುತ್ತಿಲ್ಲ: ಕಾಂಗ್ರೆಸ್ ಮುಖಂಡರಿಗೆ ಜೋಶಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 20:45 IST
Last Updated 22 ಜನವರಿ 2023, 20:45 IST
   

ಹುಬ್ಬಳ್ಳಿ: ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಸಂದೇಶ ದೇಶದಾದ್ಯಂತ ಪಸರಿಸುವ ಕಾಂಗ್ರೆಸ್‌ ಮುಖಂಡರು, ಅವರದ್ದೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಂದೇಶವನ್ನು ಯಾಕೆ ಪಸರಿಸುತ್ತಿಲ್ಲ? ಕುಟುಂಬ ರಾಜಕಾರಣ ಮತ್ತು ಸರ್ವಾಧಿಕಾರ ಅವರಲ್ಲಿ ತುಂಬಿ ತುಳುಕುತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಛೇಡಿಸಿದರು.

ಉಡುಪಿಯಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್‌ಗೆ ಹೋಲಿಕೆ ಮಾಡಿ ಮಾತನಾಡಿದ ಸಿದ್ದರಾಮಯ್ಯ ಅವರ ಹೇಳಿಕೆಗೆ ಭಾನುವಾರ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ನರೇಂದ್ರ ಮೋದಿ ಚುನಾಯಿತ ಪ್ರತಿನಿಧಿ. ದೇಶದ ನಾಯಕ. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿಲ್ಲವೆ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ಡಿಎನ್‌ಎಯಲ್ಲಿ ನಿವೃತ್ತಿ ಮತ್ತು ಪ್ರಾಮಾಣಿಕತೆ ಎನ್ನುವುದೇ ಇಲ್ಲ. ಮಧ್ಯಪ್ರದೇಶ, ಛತ್ತೀಸಗಡ ಮತ್ತು ರಾಜಸ್ತಾನದಲ್ಲಿ ಆಡಳಿತ ನಡೆಸಿರುವ ಅವರು, ಕೊಟ್ಟ ಮಾತು ಈಡೇರಿಸಿದ್ದಾರೆಯೇ? ಕೊಟ್ಟ ಮಾತು ಈಡೇರಿಸಿಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜನ ಸಿದ್ದರಾಮಯ್ಯ ಅವರನ್ನು ಅಲ್ಲಿಂದ ಓಡಿಸಿದ್ದಾರೆ. ಮೈಸೂರಿನಲ್ಲಿ ಸ್ಪರ್ಧಿಸಲು ಸಾಧ್ಯವಾಗದ ‌ಅವರು, ರಾಜ್ಯದಾದ್ಯಂತ ಸಂಚರಿಸುತ್ತಿದ್ದಾರೆ. ಹಾಗಾಗಿ, ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಕೊಡುತ್ತೇನೆ, ಸಾಧ್ಯವಾಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾರದರ್ಶಕ ಆಡಳಿತ ನೀಡುತ್ತಿದ್ದಾರೆ. ಅದರಿಂದ ಕಾಂಗ್ರೆಸ್‌ನವರಿಗೆ ದುಡ್ಡು ಹೊಡೆಯಲು ಆಗುತ್ತಿಲ್ಲ. ತಮ್ಮ ಅವ್ಯವಹಾರಕ್ಕೆ ಲೋಕಾಯುಕ್ತ ವ್ಯವಸ್ಥೆ ಹಾಳು ಮಾಡಿದಂತೆ, ಮುಂದೆ ಅಧಿಕಾರಕ್ಕೆ ಬಂದರೆ ಆಡಳಿತ ವ್ಯವಸ್ಥೆ ಹಾಳು ಮಾಡುವ ಯೋಜನೆ ಅವರದ್ದಾಗಿದೆ. ಸಿದ್ದರಾಮಯ್ಯ ಭ್ರಷ್ಟಾಚಾರ ರಾಜಕಾರಣಿ ಎನ್ನುವುದು ಸಾಬೀತಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.