ADVERTISEMENT

ಇ ಕಾಮರ್ಸ್‌ನಲ್ಲಿ ದೀಪಾಲಿ ಬೆಳಕು

ಮಹಿಳಾ ದಿನ ವಿಶೇಷ

ಬಸವರಾಜ ಹವಾಲ್ದಾರ
Published 6 ಮಾರ್ಚ್ 2020, 19:45 IST
Last Updated 6 ಮಾರ್ಚ್ 2020, 19:45 IST
ದೀಪಾಲಿ ಘೊಟಡಕೆ
ದೀಪಾಲಿ ಘೊಟಡಕೆ   

ನಿಮಗೆ ಹತ್ತಿರದವರ ಜನ್ಮದಿನವಿದೆಯೇ? ಮದುವೆ ವಾರ್ಷಿಕೋತ್ಸವವಿದೆಯೇ? ಅವರಿಗೊಂದು ಹೂಗುಚ್ಛ ನೀಡಿ ಶುಭಕೋರಲು ನೀವು ಊರಲ್ಲಿ ಇಲ್ಲವೇ?

ಹಾಗಿದ್ದರೆ, ಚಿಂತೆಬೇಡ. ClickHubli.com‌ಗೆ‌ ಹೋಗಿ ನಿಮಗೆ ಬೇಕಾದವರ‌‌ ವಿಳಾಸ‌ ತಿಳಿಸಿ ಕೇಕ್, ಹೂಗುಚ್ಚ, ಚಾಕೋಲೆಟ್ ಆರ್ಡರ್ ನೀಡಿ; ನಿಮ್ಮ ಪರವಾಗಿ ಅವರಿಗೆ ತಲುಪಿಸಿ ಅವರ ಮುಖದಲ್ಲಿ ಅಚ್ಚರಿ ಮೂಡಿಸುವ ಮೂಲಕ ಸಂಬಂಧಗಳ ಕೊಂಡಿಗೆ ಬಿಡಿಸಲಾಗದ ಬೆಸುಗೆ ಹಾಕುತ್ತಾರೆ.

2000ನೇ ಇಸ್ವಿಯಲ್ಲಿ ಜನರು ಇನ್ನೂ ಇ- ಕಾಮರ್ಸ್ ಬಗ್ಗೆ ಯೋಚಿಸುತ್ತಿದ್ದರು. ಆಗ ಉತ್ತರ ಕರ್ನಾಟಕದಲ್ಲಿ ದೀಪಾಲಿ ಘೊಟಡಕೆ ಅವರು ಕ್ಲಿಕ್ ಹುಬ್ಬಳ್ಳಿ. ಕಾಮ್ ಕಂಪನಿ ಆರಂಭಿಸಿದ್ದರು.ಈ ಕಂಪನಿ ಬೆಳಗಾವಿ, ಮೈಸೂರು, ದಾವಣಗೆರೆ, ಕೊಲ್ಲಾಪುರ ಸೇರಿದಂತೆ ವಿವಿಧೆಡೆ 12 ವೆಬ್ ಪೋರ್ಟಲ್‌ಗಳನ್ನು ಆರಂಭಿಸಿದೆ. ದೇಶದ 300 ನಗರಗಳಲ್ಲಿ ಸೇವೆ ಒದಗಿಸುತ್ತಿದೆ.

ADVERTISEMENT

ಸೀರೆಗಳಿಗೆ‌ ಕಸೂತಿ ಮಾಡುವುದು,ಹಳೆಯ ಹಾಗೂ ಹೊಸ ಸೀರೆಗಳಿಗೆ ಕಸೂತಿ ಮಾಡುವ ಮೂಲಕ ಅಂದಗೊಳಿಸುವುದನ್ನು ಮಾಡುತ್ತಾರೆ.3000 ಬಗೆಯ ವಿನ್ಯಾಸಗಳಿವೆ. ವಿನ್ಯಾಸಗಳನ್ನು ವೆಬ್ ಮೂಲಕನೀವೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ನೂರಾರು ಕೈಗಳಿಗೆ ಕೆಲಸ‌ ಸಿಕ್ಕಿದೆ.

ಯಶ್ ರಾಜ್ ಸಂಸ್ಥೆ ಇತ್ತೀಚೆಗೆ ನಿರ್ಮಿಸಿದ ಸೂಯಿ ದಾಗ್ ಚಲನಚಿತ್ರಕ್ಕೆ ಇವರು ಡಿಸೈನ್ ಮಾಡಿದ ಕಸೂತಿಯನ್ನು ಲೋಗೊದಲ್ಲಿ ಬಳಸಿಕೊಂಡಿದ್ದಾರೆ.2008ರಲ್ಲಿ ದೀಪಾಲಿ ಅವರು ವೆಬ್ ಡ್ರೀಮ್ಸ್ ಎಂಬ ವೆಬ್ ಡಿಸೈನಿಂಗ್ ಕಂಪನಿ ಆರಂಭಿಸಿದ್ದಾರೆ.

ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ನೈರುತ್ಯ ರೈಲ್ವೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ 400ಕ್ಕೂ ಹೆಚ್ಚು ಸಂಸ್ಥೆಗಳಿಗೆ ವೆಬ್ ಡಿಸೈನ್ ಮಾಡಿಕೊಡಲಾಗಿದೆ.‌ ಹುಬ್ಬಳ್ಳಿ ಪೊಲೀಸರಿಗೆ ಸೈಬರ್ ಕ್ರೈಂ ಪತ್ತೆ ಹಚ್ಚುವಲ್ಲಿಯೂ ಈ ಸಂಸ್ಥೆ ನೆರವಾಗಿದೆ. 2018ರಲ್ಲಿ ಇವರ ಸಂಸ್ಥೆ ಯುನೈಟೆಡ್ ಕಿಂಗ್‌ಡಮ್‌ನ ಗೋಲ್ಡ್ ಮನ್ ಸಾಚ್‌ ಆ್ಯಂಡ್ ಲೀಡ್ ಕಂಪನಿಗೆ ಕೇಸ್ ಸ್ಟಡಿಗೆ ಆಯ್ಕೆಯಾಗಿತ್ತು. ಆ ಸಂಸ್ಥೆ ಸಾಕ್ಷ್ಯಚಿತ್ರ ಚಿತ್ರೀಕರಿಸಿದ್ದು, ಅಲ್ಲಿನ ವಿದ್ಯಾರ್ಥಿಗಳಿಗೆ ಪ್ರದರ್ಶಿಸಲಾಗುತ್ತಿದೆ.

ದೀಪಾಲಿ ಅವರುಇ ಕಾಮರ್ಸ್ ಬಗ್ಗೆ 500ಕ್ಕೂ ಹೆಚ್ಚು ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. ಯುನೈಟೆಡ್ ನೇಷನ್ಸ್ ವತಿಯಿಂದ ನೀಡುವ ಇ ಕಾಮರ್ಸ್ ಕುರಿತುತರಬೇತಿ ಕೊಡಲು ಆಯ್ಕೆಯಾಗಿದ್ದಾರೆ. ದಕ್ಷಿಣ ಏಷ್ಯಾದ ನೇಪಾಳ, ಅಫಘಾನಿಸ್ತಾನ, ಬಾಂಗ್ಲಾ ಹಾಗೂ ಭೂತಾನ್ ದೇಶಗಳ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ‌ ನೀಡುವ ಅತ್ಯುತ್ತಮ ಮಹಿಳಾ‌ ಮಾಹಿತಿ ತಂತ್ರಜ್ಞಾನ ಉದ್ಯಮಿ ಜತೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಉದ್ಯಮಿ ಮಾತ್ರವಲ್ಲದೇ ಟೇಬಲ್‌ ಟೆನಿಸ್ ಕ್ರೀಡಾಪಟುವಾಗಿಯೂ ಗಮನ‌ ಸೆಳೆದಿದ್ದಾರೆ. ಕೊಲಂಬೊದಲ್ಲಿ ನಡೆದ ದಕ್ಷಿಣ ಏಷ್ಯಾದ 40 ವರ್ಷ ಮೇಲ್ಪಟ್ಟ ಮಹಿಳೆಯರ‌ ವಿಭಾಗದಲ್ಲಿ ಮೂರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

‘2000ನೇ ಇಸ್ವಿಯಲ್ಲಿ ಅಮೆರಿಕಕ್ಕೆ ಹೋಗಿದ್ದೆ. ಅಲ್ಲಿನ ಇ ಕಾಮರ್ಸ್ ವಹಿವಾಟು ನೋಡಿ ನಮ್ಮಲ್ಲಿಯೂ ಆರಂಭಿಸಿದೆ. ಹೆಚ್ಚಿನ ಬಂಡವಾಳ ಬೇಕಿಲ್ಲ. ಕಚೇರಿಯೂ ಬೇಕಿಲ್ಲ. ಒಂದು ಕಂಪ್ಯೂಟರ್ ಇದ್ದರೆ ಸಾಕು‌‌’ ಎನ್ನುತ್ತಾರೆ ದೀಪಾಲಿ.

ಬಸವರಾಜ ಹವಾಲ್ದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.