ADVERTISEMENT

ಹುಬ್ಬಳ್ಳಿ ಗಲಭೆ ಆರೋಪಿಗಳ ಕುಟುಂಬದವರಿಗೆ ಕಿಟ್‌: ಜಮೀರ್‌ ನಿರ್ಧಾರಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 3:46 IST
Last Updated 30 ಏಪ್ರಿಲ್ 2022, 3:46 IST
ಹುಬ್ಬಳ್ಳಿ ಶಹರ ಠಾಣೆ ಇನ್‌ಸ್ಪೆಕ್ಟರ್‌ ಆನಂದ ಒನಕುದರಿ ಅವರಿಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಶುಕ್ರವಾರ ಮನವಿ ಸಲ್ಲಿಸಿದರು
ಹುಬ್ಬಳ್ಳಿ ಶಹರ ಠಾಣೆ ಇನ್‌ಸ್ಪೆಕ್ಟರ್‌ ಆನಂದ ಒನಕುದರಿ ಅವರಿಗೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಶುಕ್ರವಾರ ಮನವಿ ಸಲ್ಲಿಸಿದರು   

ಹುಬ್ಬಳ್ಳಿ: ಗಲಭೆ ಪ್ರಕರಣದ ಆರೋಪಿಗಳ ಕುಟುಂಬಗಳಿಗೆ ಆಹಾರ ಕಿಟ್‌ ಹಾಗು ಧನ ಸಹಾಯ ಮಾಡುವ ಶಾಸಕ ಜಮೀರ್‌ ಅಹಮ್ಮದ್‌ ನಿರ್ಧಾರವನ್ನು ಹುಧಾ ಮಹಾನಗರ ಜಿಲ್ಲಾ ಬಿಜೆಪಿ ಘಟಕ ತೀವ್ರವಾಗಿ ಖಂಡಿಸಿದೆ.

ಪೊಲೀಸ್‌ ಕಮಿಷನರ್‌ ಹಾಗೂ ಶಹರ ಠಾಣೆ ಇನ್‌ಸ್ಪೆಕ್ಟರ್‌ಗೆ ಮನವಿ ಸಲ್ಲಿಸಿ, ಕಿಟ್‌ ವಿತರಣೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿತು. ‘ಗಲಭೆಯಲ್ಲಿ ಪಾಲ್ಗೊಂಡವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದೊಂದು ಸೂಕ್ಷ್ಮ ವಿಷಯವಾಗಿದ್ದು, ಇಂತಹ ಸಂದರ್ಭದಲ್ಲಿ ಶಾಸಕ ಜಮೀರ್‌, ಆರೋಪಿಗಳ ಕುಟುಂಬಕ್ಕೆ ನೆರವು ನೀಡಲು ಮುಂದಾಗಿರುವುದು ಖಂಡನೀಯ’ ಎಂದು ಮನವಿಯಲ್ಲಿ ತಿಳಿಸಿದೆ.

ಶೀಘ್ರ ಶಾಂತಿ ಸಭೆ; ಹೈ ಅಲರ್ಟ್: ಗಲಭೆ ಹಾಗೂ ರಂಜಾನ್‌, ಬಸವೇಶ್ವರ ಜಯಂತಿ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಲ್ಲ ಧರ್ಮ ಗುರುಗಳ, ರಾಜಕೀಯ ಮುಖಂಡರ, ಸಂಘ-ಸಂಸ್ಥೆಗಳ ಪದಾಧಿಕಾರಿಗಳ, ಸಾಹಿತಿಗಳ, ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ ಒಂದೆರಡು ದಿನಗಳಲ್ಲಿ ಶಾಂತಿ ಸಭೆ ನಡೆಸಲು ತೀರ್ಮಾನಿಸಿದೆ.

ADVERTISEMENT

ರಂಜಾನ್ ಮತ್ತು ಬಸವೇಶ್ವರ ಜಯಂತಿ ಎರಡೂ ಮೇ‌ 3 ರಂದಿದ್ದು, ನಗರದಾದ್ಯಂತ ಹೈ ಅಲರ್ಟ್ ಘೋಷಿಸಲು ಸಹ ಚಿಂತನೆ ನಡೆಸಿದೆ. ಈದ್ಗಾ ಮೈದಾನ, ಮಸೀದಿ, ದೇವಸ್ಥಾನ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲು ಇಲಾಖೆ ಯೋಜನೆ ರೂಪಿಸಿದೆ.

ಪ್ರಮುಖರ ಬಂಧನಕ್ಕೆ ಸಿದ್ಧತೆ: ಹಳೇ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿ ಪೊಲೀಸರು ಸಿದ್ದಪಡಿಸಿರುವ ಪಟ್ಟಿ ಪ್ರಕಾರ ಇನ್ನೂ 18 ಮಂದಿ ಬಂಧನವಾಗಬೇಕಿದೆ. ಅವರಲ್ಲಿ ಪಾಲಿಕೆ ಸದಸ್ಯ, ಪಾಲಿಕೆ ಮಾಜಿ ಸದಸ್ಯ, ಪಕ್ಷವೊಂದರ ಮೂವರು ಕಾರ್ಯಕರ್ತರು, ಸಂಘಟನೆಯೊಂದರ ರಾಜ್ಯ ಘಟಕದ ಅಧ್ಯಕ್ಷ, ಗುತ್ತಿಗೆದಾರ ಹಾಗೂ ಇತರರು ಇದ್ದಾರೆ. ಸಮುದಾಯದ ಮುಖಂಡತ್ವ, ರಾಜಕೀಯ ಹಿನ್ನೆಲೆ ಹಾಗೂ ಸಹಚರರನ್ನು ಹೊಂದಿರುವ ಇವರನ್ನು ಏಕಾಏಕಿ ಬಂಧಿಸಿದರೆ ಶಾಂತಿ ಕದಡಬಹುದು ಎಂದು ಪೊಲೀಸರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಬಂಧಿಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.