ನರೇಗಲ್: ‘ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಮಸ್ಯೆಗಳಿಗೆ ಸಂಘಟನೆ ಹೋರಾಟವೇ ಪರಿಹಾರವಾಗಿದೆ. ಮಾಧ್ಯಮಿಕ ಶಾಲಾ ನೌಕರರ ಸಂಘಟನೆ ಹಿಂದಿನಿಂದಲೂ ತನ್ನ ಸಮಸ್ಯೆಗಳಿಗೆ ಹೋರಾಟದ ಮೂಲಕವೇ ಪರಿಹಾರ ಕಂಡುಕೊಳ್ಳುತ್ತ ಬಂದಿದ್ದು, ಎಲ್ಲರೂ ಸಂಘಟನೆಯೊಂದಿಗೆ ಕೈಜೋಡಿಸುವ ಅವಶ್ಯಕತೆಯಿದೆ’ ಎಂದು ರಾಜ್ಯ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಪಟ್ಟಣದ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಅನ್ನದಾನೇಶ್ವರ ಅಂಗ ಸಂಸ್ಥೆಗಳ ನೌಕರರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ನನ್ನ ರಾಜಕೀಯ ಸೇವೆಗೆ ಶಿಕ್ಷಕರ ಕೊಡುಗೆ ಅಪಾರ. ಅನುದಾನಿತ ಶಾಲಾ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಶ್ರಮ ವಹಿಸಿದ್ದೇನೆ’ ಎಂದರು.
ಪಟ್ಟಣದ ಕಿವುಡ ಮಕ್ಕಳ ವಸತಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ನೌಕರರ ಅನುದಾನ ₹37 ಲಕ್ಷ ಬಾಕಿ ಉಳಿದಿದ್ದನ್ನು ತಿಳಿದ ಹೊರಟ್ಟಿಯವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಆಯುಕ್ತರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅನುದಾನ ಬಿಡುಗಡೆ ಮಾಡುವಂತೆ ಹೇಳಿದರು.
ನೂತನ ಎಲ್‌ಬಿಎ ಪರೀಕ್ಷಾ ಪದ್ದತಿಯ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ ಹೊರಟ್ಟಿಯವರು ಈ ಹಿಂದಿನ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಲು ಸಾಧ್ಯವಿದೆಯೆ? ಎಂಬುದನ್ನು ಗಮನಿಸಲು ತಿಳಿಸಿದರು. ಪಿಯು ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಕುರಿತು ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು. ಅನ್ನದಾನೇಶ್ವರ ಬಾಲಕಿಯರ ಪ್ರೌಢಶಾಲೆ ಕಟ್ಟಡಕ್ಕೆ ₹10 ಲಕ್ಷ ಅನುದಾನ ಬಿಡುಗಡೆಗೊಳಿಸಿದರು.
ಅನ್ನದಾನೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ ಪ್ರಾಚಾರ್ಯ ವೈ.ಸಿ. ಪಾಟೀಲ ಸಭಾಪತಿ ಹೊರಟ್ಟಿ ಅವರನ್ನು ಸನ್ಮಾನಿಸಿದರು. ಆಡಳಿತ ಮಂಡಳಿ ಚೇರ್ಮನ್ ಎಸ್.ಎ. ಪಾಟೀಲ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್. ಬುರಡಿ, ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎಂ.ಕೆ. ಲಮಾಣಿ, ಮುಖ್ಯ ಶಿಕ್ಷಕ ಎಂ.ಬಿ. ಸಜ್ಜನ, ಅರುಣ ಕುಲಕರ್ಣಿ, ಮುಖ್ಯ ಶಿಕ್ಷಕ ಸಂಗಮೇಶ ಹೂಲಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.