ADVERTISEMENT

ಮೇಕೆದಾಟು: ಡಿಕೆಶಿ ಶಕ್ತಿ ಪ್ರದರ್ಶನಕ್ಕಷ್ಟೇ ಸೀಮಿತ ಎಂದ ಸಚಿವ ಬಿ.ಸಿ.ಪಾಟೀಲ

ಕಾಂಗ್ರೆಸ್ ನಾಯಕರ ಪಾದಯಾತ್ರೆ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಲೇವಡಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 5:15 IST
Last Updated 1 ಮಾರ್ಚ್ 2022, 5:15 IST
ಬಿ.ಸಿ.ಪಾಟೀಲ, ಕೃಷಿ ಸಚಿವ
ಬಿ.ಸಿ.ಪಾಟೀಲ, ಕೃಷಿ ಸಚಿವ   

ಗದಗ: ‘ಕಾಂಗ್ರೆಸ್‌ ಶಾಸಕರು ಮೂರು ದಿವಸ ವಿಧಾನಸೌಧದಲ್ಲೇ ಮಲಗಿದ್ದರು. ಅವರಿಗಿನ್ನೂ ಎಚ್ಚರ ಆಗಿಲ್ಲ. ಆರು ದಿವಸಗಳ ಕಲಾಪವನ್ನು ಯಾವ ಪುರುಷಾರ್ಥಕ್ಕಾಗಿ ಹಾಳು ಮಾಡಿ, ಏನು ಸಾಧನೆ ಮಾಡಿದರೋ ಗೊತ್ತಿಲ್ಲ. ಅದನ್ನು ಮುಚ್ಚಿ ಹಾಕಿ, ಜನರ ಗಮನ ಸೆಳೆಯಲು ಮೇಕೆದಾಟು 2.0 ಆರಂಭಿಸಿದ್ದಾರೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಲೇವಡಿ
ಮಾಡಿದರು.

ಗದುಗಿನಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತು ಕೂಡ ಕಾಳಜಿ ಇಲ್ಲದ ಕಾಂಗ್ರೆಸ್‌ಗೆ ಜನರು ಛೀ...ಥೂ ಎನ್ನುತ್ತಿದ್ದಾರೆ. ತಿರಸ್ಕಾರದಿಂದ ನೋಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕ
ರು ಮತ್ತೊಮ್ಮೆ ಪಾದಯಾತ್ರೆ ಆರಂಭಿಸಿದ್ದು ಇದೇ ಕಾರಣಕ್ಕೆ. ಮೇಕೆದಾಟು ಯೋಜನೆಗೆ ಯಾರ ವಿರೋಧವೂ ಇಲ್ಲ. ಯಾರ ವಿರುದ್ಧ ಈ ಹೋರಾಟವೆಂದು ತಿಳಿಸಬೇಕಿದೆ’ ಎಂದು ಅವರು ಮಾತಿನಲ್ಲೇ ತಿವಿದರು.

‘ಮೇಕೆದಾಟು ಯೋಜನೆಗೆ ಬಿಜೆಪಿ ಸರ್ಕಾರದ ವಿರೋಧ ಇಲ್ಲ. ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದು, ಕ್ಲಿಯರೆನ್ಸ್‌ ಬಂದ ನಂತರ
ಕೆಲಸ ಆರಂಭವಾಗಲಿದೆ. ‘ನಮ್ಮ ನೀರು ನಮ್ಮ ಹಕ್ಕು’ ಅಂದರೆ, ಅದು ಕಾಂಗ್ರೆಸ್‌ನವರಿಗಷ್ಟೇ ನೀರಾ? ಉಳಿದವರಿಗೆ ಸಂಬಂಧವಿಲ್ಲವೇ? ಇಷ್ಟು ವರ್ಷಗಳು ಯಾಕೆ ಈ ಬಗ್ಗೆ ಚಿಂತನೆ ನಡೆಸಲಿಲ್ಲ. ಕಾಂಗ್ರೆಸ್‌ನವರು ತಾವು ಬದುಕಿದ್ದೇವೆ ಎಂಬುದನ್ನು ತೋರಿಸಿಕೊಳ್ಳಲಿಕ್ಕಷ್ಟೇ ಪಾದಯಾತ್ರೆ ಆರಂಭಿಸಿದ್ದಾರೆ’ ಎಂದು ಅವರು ಕಿಡಿಕಾರಿದರು.

ADVERTISEMENT

‘ಮೇಕೆದಾಟು ಪಾದಯಾತ್ರೆ ಡಿ.ಕೆ.ಶಿವಕುಮಾರ್‌ ಅವರ ಸ್ವಪ್ರತಿಷ್ಠೆ, ಶಕ್ತಿ ಪ್ರದರ್ಶನ ಹಾಗೂ ನಾನೆಷ್ಟು ಬಲಿಷ್ಠ ಎಂಬುದನ್ನು ತೋರಿಸಲಿಕ್ಕಷ್ಟೇ ಸೀಮಿತವಾಗಿದೆ. ಜನರನ್ನು ಕರೆತಂದು ಪಾದಯಾತ್ರೆ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ. ಇದೊಂದು ರಾಜಕೀಯ ಗಿಮಿಕ್‌’ ಎಂದು ಅವರು ವ್ಯಂಗ್ಯವಾಡಿದರು.

ವಿಧಾನ ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ ಇದ್ದರು.

ಆತಂಕ ಪಡುವ ಅಗತ್ಯವಿಲ್ಲ

ಉಕ್ರೇನ್ ದೇಶದಲ್ಲಿ ಕನ್ನಡಿಗರು ಸಿಲುಕಿರುವ ವಿಚಾರ‌ದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ.ಪಾಟೀಲ, 'ಉಕ್ರೇನ್ ದೇಶದಲ್ಲಿ ಸಿಲುಕಿದ ಪ್ರತಿಯೊಬ್ಬ ಭಾರತೀಯರನ್ನು ಕರೆತರುವ ವ್ಯವಸ್ಥೆ ಆಗುತ್ತಿದೆ’ ಎಂದು ಹೇಳಿದರು.

‘ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿದವರನ್ನು ರಕ್ಷಿಸಲು ರಾಜ್ಯದಿಂದಲೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಮಾಹಿತಿ ಪಡೆದು ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆದಿದ್ದು, ಇದಕ್ಕೆ ರಾಜ್ಯ, ಕೇಂದ್ರ ಸರ್ಕಾರ ಬದ್ಧವಾಗಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ' ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಾರಿ ಉತ್ತಮ ಬಜೆಟ್ ಮಂಡಿಸಲಿದ್ದಾರೆ. ರಾಜ್ಯದ ಎಲ್ಲ ಭಾಗಗಳಿಗೆ ಒಪ್ಪಿತ ಬಜೆಟ್ ಬರಲಿದ್ದು, ಉತ್ತರ ಕರ್ನಾಟಕಕ್ಕೆ ಉತ್ತಮ ಸೌಲಭ್ಯ ಸಿಗಲಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.