
ಗದಗ: ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಇಲ್ಲಿನ ಬಿಂಕದಕಟ್ಟಿ ಮೃಗಾಲಯಕ್ಕೆ ದೇಸಿ ಸ್ಪರ್ಶ ನೀಡಲಾಗಿದ್ದು, ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾಗಿದೆ. ಮೃಗಾಲಯದ ಆವರಣದಲ್ಲಿ ಹಾಕಿರುವ ‘ಸಂಕ್ರಾಂತಿ ಸೆಟ್’, ಸೆಲ್ಫಿ ಪಾಯಿಂಟ್‌ಗಳು ಜನಾಕರ್ಷಣೆಯ ಕೇಂದ್ರವಾಗಿವೆ.
ಮೃಗಾಲಯದಲ್ಲಿ ಸಂಕ್ರಾಂತಿ ಆಚರಿಸಲು ಬರುವ ಪ್ರವಾಸಿಗರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ, ಪಾರ್ಕಿಂಗ್ ಸೌಲಭ್ಯ ಸೇರಿದಂತೆ ವಿವಿಧ ಸೌಕರ್ಯ ಕಲ್ಪಿಸಿರುವುದಾಗಿ ಮೃಗಾಲಯದ ಆರ್‌ಎಫ್‌ಒ ಸ್ನೇಹಾ ಕೊಪ್ಪಳ ತಿಳಿಸಿದ್ದಾರೆ.
ಗದಗ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಜನರು ಸಂಕ್ರಾಂತಿ ಆಚರಣೆಗೆ ಮೃಗಾಲಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ, ಇಲ್ಲಿ ಹಬ್ಬದ ವಾತಾವರಣ ಸೃಷ್ಟಿಸಲಾಗಿದೆ. ಕಬ್ಬು, ಭತ್ತದ ತೆನೆ, ಹೂವು ಸೇರಿದಂತೆ ವಿವಿಧ ವಸ್ತು ಬಳಸಿ ಜಾನಪದ ಶೈಲಿಯಲ್ಲಿ ಸಂಕ್ರಾಂತಿ ಸೆಟ್ ಹಾಕಲಾಗಿದೆ. ಜತೆಗೆ ಅಲ್ಲಲ್ಲಿ ಸೆಲ್ಫಿ ಪಾಯಿಂಟ್ ಮಾಡಲಾಗಿದೆ. ಪ್ರಾಣಿಗಳಿರುವ ಆವರಣಕ್ಕೆ ಹೊಸ ಬಣ್ಣ ಬಳಿಯಲಾಗಿದ್ದು, ಹಬ್ಬದ ಕಳೆ ಬಂದಿದೆ.
ಸಂಕ್ರಾಂತಿ ಆಚರಣೆಗೆ ಬರುವ ಪ್ರವಾಸಿಗರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಡಸ್ಟ್‌ಬಿನ್ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
₹5 ಲಕ್ಷ ಶುಲ್ಕ ಸಂಗ್ರಹದ ನಿರೀಕ್ಷೆ: ಸಂಕ್ರಾಂತಿ ಆಚರಣೆಗೆ ಈ ವರ್ಷ 5 ಸಾವಿರಕ್ಕೂ ಹೆಚ್ಚು ಮಂದಿ ಮೃಗಾಲಯಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಆರ್‌ಎಫ್‌ಒ ಸ್ನೇಹಾ ತಿಳಿಸಿದ್ದಾರೆ.
ಕಳೆದ ವರ್ಷ ಕೊಪ್ಪಳ ಜಾತ್ರೆ ಮತ್ತು ಸಂಕ್ರಾಂತಿ ಒಂದೇ ದಿನ ಬಂದಿದ್ದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಕಳೆದ ವರ್ಷ ಸಂಕ್ರಾಂತಿಯಲ್ಲಿ ₹3.50 ಲಕ್ಷ ಸಂಗ್ರಹವಾಗಿತ್ತು. ಈ ವರ್ಷ ₹5 ಲಕ್ಷ ಶುಲ್ಕ ಸಂಗ್ರಹವಾಗುವ ನಿರೀಕ್ಷೆ ಇದೆ.
‘ಜ.14ರಂದು 1,248 ಪ್ರವಾಸಿಗರು ಮೃಗಾಲಯಕ್ಕೆ ಭೇಟಿ ನೀಡಿದ್ದು, ₹65 ಸಾವಿರ ಸಂಗ್ರಹವಾಗಿದೆ. ಜ.15ರಂದು ₹4 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗುವ ನಿರೀಕ್ಷೆ ಇದೆ. ವಯಸ್ಕರಿಗೆ ₹50, ಹನ್ನೆರೆಡು ವರ್ಷದೊಳಗಿನ ಮಕ್ಕಳಿಗೆ ₹30 ಶುಲ್ಕ ಇದೆ. ಪಾರ್ಕಿಂಗ್ ಶುಲ್ಕ ಪ್ರತ್ಯೇಕ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಸಿಬ್ಬಂದಿ ನಿಯೋಜನೆ: ಪ್ರವಾಸಿಗರ ದಟ್ಟಣೆ ನಿಯಂತ್ರಣಕ್ಕಾಗಿ ಸಂಕ್ರಾಂತಿಯಂದು ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಪ್ರಾಣಿ ಪಾಲಕರ ಜತೆಗೆ ಮುಂಡರಗಿ, ರೋಣ, ನರಗುಂದ ಸೇರಿದಂತೆ ವಿವಿಧ ವಲಯದ ಡಿಆರ್‌ಎಫ್‌ಒಗಳು, ಗಾರ್ಡ್‌ಗಳನ್ನು ದಟ್ಟಣೆ ನಿರ್ವಹಣೆಗೆ ನಿಯೋಜಿಸಲಾಗಿದೆ. ಪೊಲೀಸ್ ಇಲಾಖೆಯಿಂದ 30 ಮಂದಿ ಪೊಲೀಸರು ಬಂದೋಬಸ್ತ್ ನೀಡುವರು. ವಾಹನ ದಟ್ಟಣೆ ನಿಯಂತ್ರಣಕ್ಕೆ ಸಂಚಾರ ಪೊಲೀಸರ ಸಹಕಾರ ಕೋರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚುವರಿ ಪಾರ್ಕಿಂಗ್ ಸೌಲಭ್ಯ: ಮೃಗಾಲಯದ ಮುಂದಿರುವ ಪಾರ್ಕಿಂಗ್ ಜಾಗವನ್ನು ಸಂಕ್ರಾಂತಿಯಂದು ಬೈಕ್ ನಿಲುಗಡೆಗೆ ಮೀಸಲಿಡಲಾಗಿದೆ. ಎದುರಿನ ಖಾಲಿ ಜಾಗದಲ್ಲಿ ಬಸ್ಸು, ಕಾರು, ಟೆಂಪೊ, ಟ್ರ್ಯಾಕ್ಟರ್, ಚಕ್ಕಡಿಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಸಂಕ್ರಾಂತಿ ಅಂಗವಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಗಂಟೆಗೊಂದು ಬಸ್ ಸಂಚರಿಸಲಿದೆ. ತುರ್ತು ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸಾ ಪೆಟ್ಟಿಗೆ, ಅಂಗವಿಕಲರಿಗೆ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಕ್ರಾಂತಿ ಆಚರಣೆಗಾಗಿ ಮೃಗಾಲಯಕ್ಕೆ ಹಬ್ಬದ ಮೆರುಗು ನೀಡಲಾಗಿದೆ. ಪ್ರವಾಸಿಗರು ಸ್ನೇಹಿತರು ಕುಟುಂಬದವರ ಜತೆಗೆ ಬಂದು ಇಲ್ಲಿ ಹಬ್ಬ ಆಚರಿಸಿಕೊಂಡರೆ ಅದು ಇನ್ನಷ್ಟು ಸ್ಮರಣೀಯ ಆಗಲಿದೆ.ಸ್ನೇಹಾ ಕೊಪ್ಪಳ ಮೃಗಾಲಯದ ಆರ್‌ಎಫ್‌ಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.