ADVERTISEMENT

ನರೇಗಲ್ | ಅಧಿಕಾರಿಗಳ ನಿರ್ಲಕ್ಷ್ಯ: ‌ಜನರಿಗೆ ಉಪಯೋಗವಾಗದ ತಂಗುದಾಣ

ಬಸ್‌ ಶೆಲ್ಟರ್‌ನಲ್ಲಿ ತುಂಬಿದೆ ಮೇವು, ಕಟ್ಟಿಗೆ, ಕುಂಟೆ, ಕಸ..

​ಪ್ರಜಾವಾಣಿ ವಾರ್ತೆ
ಪ್ರಜಾವಾಣಿ ವಿಶೇಷ
Published 15 ಡಿಸೆಂಬರ್ 2025, 4:44 IST
Last Updated 15 ಡಿಸೆಂಬರ್ 2025, 4:44 IST
ನರೇಗಲ್‌ ಪಟ್ಟಣದಿಂದ ಗದಗ ಮಾರ್ಗದ ಕಡೆಗೆ ಹೋಗುವಾಗ ಪೊಲೀಸ್‌ ಠಾಣೆ ಸಮೀಪದಲ್ಲಿ ಹಳ್ಳಿ ಮಾರ್ಟ್‌ ಎದುರಲ್ಲಿರುವ ಬಸ್‌ ತಂಗುದಾಣ ಮೇವು, ಕುಂಟೆ, ಕಟ್ಟಿಗೆ ಹಾಗೂ ಇತರೆ ವಸ್ತುಗಳಿಂದ ತುಂಬಿರುವುದು
ನರೇಗಲ್‌ ಪಟ್ಟಣದಿಂದ ಗದಗ ಮಾರ್ಗದ ಕಡೆಗೆ ಹೋಗುವಾಗ ಪೊಲೀಸ್‌ ಠಾಣೆ ಸಮೀಪದಲ್ಲಿ ಹಳ್ಳಿ ಮಾರ್ಟ್‌ ಎದುರಲ್ಲಿರುವ ಬಸ್‌ ತಂಗುದಾಣ ಮೇವು, ಕುಂಟೆ, ಕಟ್ಟಿಗೆ ಹಾಗೂ ಇತರೆ ವಸ್ತುಗಳಿಂದ ತುಂಬಿರುವುದು   

ನರೇಗಲ್:‌ ‌ಪಟ್ಟಣದಿಂದ ವಿವಿಧ ಗ್ರಾಮಗಳಿಗೆ ಸಂಚಾರ ಮಾಡುವ ಪ್ರಯಾಣಿಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ವಿವಿಧೆಡೆ ನಿರ್ಮಾಣ ಮಾಡಲಾಗಿರುವ ಬಸ್‌ ತಂಗುದಾಣಗಳು (ಬಸ್‌ ಶೆಲ್ಟರ್) ಜನರಿಗೆ ಉಪಯೋಗವಾಗದೆ ಮೇವು, ಕಟ್ಟಿಗೆ, ಕಸ ಹಾಗೂ ಇತರೆ ವಸ್ತುಗಳನ್ನು ಇಡಲು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಖಾಸಗಿ ವ್ಯಕ್ತಿಗಳು ವೈಯಕ್ತಿಕವಾಗಿ ಬಳಕೆ ಮಾಡಿಕೊಳ್ಳಲು, ಕುಡುಕರು ಮಲಗಲು ಉಪಯೋಗವಾಗುತ್ತಿವೆ. ಆದರೆ, ಈ ಸಮಸ್ಯೆ ಸರಿಪಡಿಸಲು ಇಂದಿಗೂ ಸಂಬಂಧಪಟ್ಟ ಇಲಾಖೆಯವರು ಮುಂದಾಗಿಲ್ಲ ಎನ್ನುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನರೇಗಲ್‌ ಪಟ್ಟಣದಿಂದ ಗದಗ ಮಾರ್ಗದ ಕಡೆಗೆ ಹೋಗುವಾಗ ಪೊಲೀಸ್‌ ಠಾಣೆ ಸಮೀಪದಲ್ಲಿ ಹಳ್ಳಿ ಮಾರ್ಟ್‌ ಎದುರಲ್ಲಿರುವ ತಂಗುದಾಣವು ಮೇವು, ಕುಂಟೆ, ಕಟ್ಟಿಗೆ ಹಾಗೂ ಇತರೆ ವಸ್ತುಗಳಿಂದ ತುಂಬಿರುತ್ತದೆ. ಅದರ ಮುಂಭಾಗದಲ್ಲಿ ಹಾಗೂ ಮೇಲ್ಮೈಯಲ್ಲಿ ಬಳ್ಳಿ ಗಿಡಗಳು ಬೆಳೆದು ನಿಂತಿವೆ. ಆದಕಾರಣದಿಂದ ಗದಗ, ಕೋಟುಮಚಗಿ ಕಡೆಗೆ ಪ್ರಯಾಣ ಮಾಡುವ ಮಹಿಳೆಯರು, ವಿದ್ಯಾರ್ಥಿಗಳು, ಮಕ್ಕಳು, ಹಿರಿಯರು ಇದನ್ನು ಉಪಯೋಗಿಸದಂತಾಗಿದೆ.

ADVERTISEMENT

ನರೇಗಲ್‌ ಮಜರೆ ಕೋಡಿಕೊಪ್ಪದಲ್ಲಿ ಶಾಲಾ ಮಕ್ಕಳಿಗೆ ಹಾಗೂ ಪ್ರಯಾಣಿಕರಿಗೆ ವಯೋವೃದ್ದರಿಗೆ ಮಹಿಳೆಯರಿಗೆ ಅನುಕೂಲವಾಗಲೆಂದು ನಿರ್ಮಿಸಿದ್ದ ತಂಗುದಾಣ ದನದ ಸಗಣಿ, ಮೇವಿನಿಂದ ತುಂಬಿದೆ. ಇದೇ ಮಾರ್ಗದಲ್ಲಿರುವ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆ, ಸರ್ಕಾರಿ ಶಾಲಾ ಕಾಲೇಜಿಗೆ ದಿನವೂ ಅಂದಾಜು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ ಅವರಿಗೆ ಹಾಗೂ ಪ್ರಯಾಣಿಕರಿಗೆ ಯಾರುಗೂ ಉಪಯೋಗವಾಗುತ್ತಿಲ್ಲ.

ಇದೇ ರೀತಿ ಕೋಚಲಾಪುರ ಕ್ರಾಸ್ ಬಳಿ ನಿರ್ಮಿಸಿದ್ದ ತಂಗುದಾಣ ಅನಾಥರ ಮನೆಯಂತಾಗಿದೆ. ಅಲ್ಲಿ ಯಾವ ಪ್ರಯಾಣಿಕರು ಕೂರಲು ಪೂರಕ ವಾತಾವರಣ ಇಲ್ಲವಾದ್ದರಿಂದ ಇಲ್ಲಿಯೂ ಜನ ರಸ್ತೆಯಲ್ಲಿಯೇ ನಿಂತು ಬಸ್‌ಗೆ ಕಾಯುವಂತಾಗಿದೆ. ಇದರ ಒಳಭಾಗದ ಗೋಡೆಗಳು ಕೆಲವು ಕಂಪನಿಗಳ ಜಾಹೀರಾತುಗಳ ಪ್ರಚಾರದ ಜತೆಗೆ ಪ್ರೇಮಿಗಳ ಹೆಸರನ್ನು ಬರೆದಿರುವ ಸ್ಥಳವಾಗಿದೆ.

ನಾಗರಕೆರೆ ಹತ್ತಿರ ಹಾಗೂ ಮಲ್ಲಾಪುರದಲ್ಲಿರುವ ತಂಗುದಾಣಗಳು ಗಿಡಗಳಿಂದ ಮುಚ್ಚಿಕೊಂಡಿದ್ದು ವಿಷ ಜಂತುಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಹೀಗೆ ಒಟ್ಟು 6 ತಂಗುದಾಣಗಳ ದಿಕ್ಕಿಲ್ಲದಂತಾಗಿವೆ. ಇನ್ನಾದರು ಸ್ವಚ್ಛಗೊಳಿಸಿ ಜನರ ಉಪಯೋಗಕ್ಕೆ ನೀಡುವಂತಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

‘ಜನರು, ವಿದ್ಯಾರ್ಥಿಗಳು ಮಳೆ ಬಂದಾಗ, ಬಿಸಿಲು ಬಂದಾಗ ಆಸರೆ ನೀಡಬೇಕಿದ್ದ ತಂಗುದಾಣಗಳು ಯಾವಾಗಲೂ ಕಸದಿಂದ, ಇತರೆ ವಸ್ತುಗಳಿಂದ ತುಂಬಿರುತ್ತವೆ. ಶೆಲ್ಟರ್‌ಗಳನ್ನು ನಿರ್ಮಿಸಿ ಕೈತೊಳೆದುಕೊಂಡ ಇಲಾಖೆಯು ಅದನ್ನು ನಿರ್ವಹಣೆ ಮಾಡುತ್ತಿಲ್ಲ. ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಅದರಲ್ಲೂ ವೃದ್ಧರು, ಗರ್ಭಿಣಿಯರು, ಚಿಕ್ಕ ಮಗುವಿನ ಸಮೇತ ಪ್ರಯಾಣಿಸುವ ತಾಯಂದಿರು ಅನಿವಾರ್ಯವಾಗಿ ರಸ್ತೆಯ ಪಕ್ಕದಲ್ಲಿ, ಗಿಡದ ನೆರಳಿನಲ್ಲಿ ಕುಳಿತುಕೊಂಡು ಆಶ್ರಯ ಪಡೆಯುವಂತಾಗಿದೆ. ಸಮಸ್ಯೆಯನ್ನು ಅರಿತು ಸ್ವಚ್ಛಗೊಳಿಸಿ, ತಂಗುದಾಣವನ್ನು ಸಾರ್ವಜನಿಕರ ಉಪಯೋಗಕ್ಕೆ ಲಭ್ಯಗೊಳಿಸಬೇಕು’ ಎಂದು ದಲಿತ ಮುಖಂಡ ಸೋಮಪ್ಪ ಹನಮಸಾಗರ ಆಗ್ರಹಿಸಿದರು.

ನರೇಗಲ್‌ ಪಟ್ಟಣದಿಂದ ಗದಗ ಮಾರ್ಗದ ಕಡೆಗೆ ಹೋಗುವಾಗ ಪೊಲೀಸ್‌ ಠಾಣೆ ಸಮೀಪದಲ್ಲಿ ಹಳ್ಳಿ ಮಾರ್ಟ್‌ ಎದುರಲ್ಲಿರುವ ಬಸ್‌ ತಂಗುದಾಣ ಮೇವು ಕುಂಟೆ ಕಟ್ಟಿಗೆ ಹಾಗೂ ಇತರೆ ವಸ್ತುಗಳಿಂದ ತುಂಬಿರುವುದು
ನರೇಗಲ್‌ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಬಸ್‌ ತಂಗುದಾಣಗಳನ್ನು ಶೀಘ್ರವೇ ಸ್ವಚ್ಛಗೊಳಿಸಿ ಜನರ ಉಪಯೋಗಕ್ಕೆ ಅನಕೂಲವಾಗುವಂತೆ ಮಾಡಿಕೊಡಲಾಗುವುದು.
–ಮಹೇಶ ಬಿ. ನಿಡಶೇಶಿ, ಮುಖ್ಯಾಧಿಕಾರಿ ನರೇಗಲ್‌ ಪಟ್ಟಣ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.