ADVERTISEMENT

ಸಾಧನಾ ಸಮಾವೇಶವಲ್ಲ; ಅದು ಅವಾಂತರಗಳ ಸಮಾವೇಶ: ಸಿ.ಸಿ.ಪಾಟೀಲ ಟೀಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 5:32 IST
Last Updated 15 ಫೆಬ್ರುವರಿ 2026, 5:32 IST
ಸಿ.ಸಿ.ಪಾಟೀಲ
ಸಿ.ಸಿ.ಪಾಟೀಲ   

ಗದಗ: ‘ರಾಜ್ಯ ಸರ್ಕಾರ ಶನಿವಾರ ಹಾವೇರಿಯಲ್ಲಿ ನಡೆಸಿದ್ದು ಸಾವಿರ ದಿನಗಳ ಸಾಧನಾ ಸಮಾವೇಶ ಅಲ್ಲ. ಬದಲಾಗಿ, ಅದು ಸರ್ಕಾರದ ಸಾವಿರ ಅವಾಂತರಗಳ ಸಮಾವೇಶ ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ಟೀಕಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಆಡಳಿತ ಚುಕ್ಕಾಣಿ ಹಿಡಿದು ಎರಡೂವರೆ ವರ್ಷಗಳಾಗಿವೆ. ಸಾವಿರ ದಿನಗಳಲ್ಲಿ ಅಭಿವೃದ್ಧಿ ಮಾತ್ರ ಶೂನ್ಯ. ಹೀಗಿದ್ದಾಗ, ಅವರು ಯಾವ ಪುರುಷಾರ್ಥಕ್ಕಾಗಿ ಸಮಾವೇಶ ಮಾಡಿದರು?’ ಎಂದು ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ಧ ಆರೋಪಗಳು ಕೇಳಿ ಬಂದ ಬಳಿಕ 14 ನಿವೇಶನಗಳನ್ನು ಮುಡಾಕ್ಕೆ ವಾಪಸ್‌ ಮಾಡಿದರು. ಎಸ್‌ಟಿ ಅಭಿವೃದ್ಧಿ ನಿಗಮದಲ್ಲಿ ₹178 ದುರ್ಬಳಕೆ ಮಾಡಿದ ಆರೋಪದ ಮೇಲೆ ಸಚಿವ ನಾಗೇಂದ್ರ ರಾಜೀನಾಮೆ ನೀಡಿದರು. ನಂತರ, ವಕ್ಫ್‌ ಮಂಡಳಿ ಹಗರಣ, ಅಬಕಾರಿ ಇಲಾಖೆಯಲ್ಲಿ ಲಂಚಗುಳಿತನ, ಭ್ರಷ್ಟಾಚಾರ ಮಿತಿಮೀರಿದೆ. ಭೋವಿ ಅಭಿವೃದ್ಧಿ ನಿಗಮದಲ್ಲಿ ₹60 ಕೋಟಿ ಗೋಲ್‌ಮಾಲ್‌ ನಡೆಯಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ₹11 ಸಾವಿರ ಕೋಟಿ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ್ದೇ ಇವರ ದೊಡ್ಡ ಸಾಧನೆಯಾಗಿದೆ’ ಎಂದು ಟೀಕಿಸಿದರು.

ADVERTISEMENT

‘ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ 15 ಮೀಸಲಿಡುವ ಮೂಲಕ ತುಷ್ಟೀಕರಣ, ವಿಧಾನಸೌಧದಲ್ಲಿಯೇ ಪಾಕಿಸ್ತಾನ ಪರ ಘೋಷಣೆ ಕೂಗಿದವರ ರಕ್ಷಣೆ, ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾವಿನ ಪ್ರಕರಣದ ಎಸ್‍ಐಟಿ ತನಿಖೆ ವರದಿ ಬಹಿರಂಗಪಡಿಸದ್ದು, ತಪ್ಪಿತಸ್ಥರನ್ನು ಬಂಧಿಸದಿರುವುದು, ಮಹಿಳಾ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದೇ ಇವರ ಸಾಧನೆಗಳು’ ಎಂದು ಹರಿಹಾಯ್ದರು.

‘ರಾಜ್ಯದಲ್ಲಿ ಆಡಳಿತ ಪಕ್ಷದಲ್ಲಿ 136 ಜನ ಶಾಸಕರಿದ್ದಾರೆ. ಆದರೆ, ನಿಗಮ ಮಂಡಳಿ ಸೇರಿ 149 ಜನರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಿದ್ದಾರೆ. ಸರ್ಕಾರದ ದುಡ್ಡನ್ನು ಹೀಗೆ ಪೋಲು ಮಾಡುತ್ತಿದ್ದಾರೆ. ಹಾವೇರಿಯಲ್ಲಿ ನಡೆದ ಸಮಾವೇಶಕ್ಕೆ ಜನ ಸೇರುವುದಿಲ್ಲ ಎಂದು ಅರಿತಿದ್ದ ಸರ್ಕಾರ, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ಗಳ ಮೇಲೆ ಒತ್ತಡ ಹಾಕಿ, ಸಾರಿಗೆ ಬಸ್‍ಗಳನ್ನು ಕಡ್ಡಾಯ ಮಾಡಿಸಿ, ಜನರನ್ನು ಕಳುಹಿಸಿದ್ದಾರೆ’ ಎಂದು ದೂರಿದರು.

ಹೀಗೆ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರಗಳು, ಅವಾಂತರಗಳ ಪಟ್ಟಿಯನ್ನು ಎಲ್ಲಿಂದ ಪ್ರಾರಂಭಿಸಬೇಕು; ಎಲ್ಲಿಗೆ ಅಂತ್ಯಗೊಳಿಸಬೇಕು ಎಂಬುದು ಯಾರಿಗೂ ತಿಳಿಯದಾಗಿದೆ ಎಂದು ತಿವಿದರು.

ಬಿಜೆಪಿ ಜಿಲ್ಲಾ ವಕ್ತಾರ ಎಂ.ಎಂ.ಹಿರೇಮಠ, ಗದಗ ಶಹರ ಬಿಜೆಪಿ ಅಧ್ಯಕ್ಷ ಸುರೇಶ ಮರಳಪ್ಪನವರ, ಹಿರಿಯರಾದ ಎಂ.ಎಸ್. ಕರಿಗೌಡ್ರ, ಜಗನ್ನಾಥಸಾ ಭಾಂಡಗೆ, ಶ್ರೀಪತಿ ಉಡುಪಿ, ಈಶಣ್ಣ ಮುನವಳ್ಳಿ, ವಸಂತ ಮೇಟಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನಿರ್ಮಲಾ ಕೊಳ್ಳಿ, ಬಿ.ಎಚ್. ಲದ್ವಾ, ಯುವ ಮುಖಂಡ ಉಮೇಶಗೌಡ ಸಿ. ಪಾಟೀಲ, ಪ್ರಶಾಂತ ನಾಯ್ಕರ ಇದ್ದರು.

ಸಾಧನಾ ಸಮಾವೇಶದಲ್ಲಿ ಸಿಎಂ ಮತ್ತು ಡಿಸಿಎಂ ಅಕ್ಕಪಕ್ಕದಲ್ಲಿ ಕುಳಿತಿದ್ದರೂ ಪರಸ್ಪರ ಮಾತನಾಡಲಿಲ್ಲ. ಸಿಎಂ ಭಾಷಣ ಶುರುವಾಗುತ್ತಿದ್ದಂತೆ ಡಿಕೆಶಿ ವೇದಿಕೆಯಿಂದ ಹೊರನಡೆದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಇದು ಅವರ ನಡುವಿನ ಅಸಮಾಧಾನಕ್ಕೆ ಸಾಕ್ಷಿ.
ಸಿ.ಸಿ.ಪಾಟೀಲ ಶಾಸಕ
ರಾಜ್ಯ ಸರ್ಕಾರದ 43 ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿಯಿವೆ. ಅದರಲ್ಲಿ 45 ಸಾವಿರದಷ್ಟು ಶಿಕ್ಷಕರ ಹುದ್ದೆಗಳೇ ಖಾಲಿಯಿವೆ. ಈ ಸರ್ಕಾರ ಎರಡೂವರೆ ವರ್ಷ ಕಳೆದರೂ ಒಂದೇ ಒಂದು ಹುದ್ದೆ ತುಂಬಿಲ್ಲ. ಇದೇ ಇವರ ಸಾಧನೆ
ಎಸ್.ವಿ. ಸಂಕನೂರ ವಿಧಾನ ಪರಿಷತ್ ಸದಸ್ಯ