ADVERTISEMENT

ಲಕ್ಷ್ಮೇಶ್ವರ: 32 ಸಾವಿರ ಹೆಕ್ಟೇರ್‌ಗೂ ಹೆಚ್ಚು ಕಡಲೆ ಬಿತ್ತನೆ

ಕಡಲೆ: ಖರೀದಿ ಕೇಂದ್ರಕ್ಕೆ ಆಗ್ರಹ

ನಾಗರಾಜ ಎಸ್‌.ಹಣಗಿ
Published 5 ಫೆಬ್ರುವರಿ 2026, 2:33 IST
Last Updated 5 ಫೆಬ್ರುವರಿ 2026, 2:33 IST
ಲಕ್ಷ್ಮೇಶ್ವರ ಭಾಗದಲ್ಲಿ ರೈತರು ಕಡಲೆ ಒಕ್ಕಣೆ ಕಾರ್ಯದಲ್ಲಿ ನಿರತರಾಗಿದ್ದಾರೆ
ಲಕ್ಷ್ಮೇಶ್ವರ ಭಾಗದಲ್ಲಿ ರೈತರು ಕಡಲೆ ಒಕ್ಕಣೆ ಕಾರ್ಯದಲ್ಲಿ ನಿರತರಾಗಿದ್ದಾರೆ   

ಲಕ್ಷ್ಮೇಶ್ವರ: ಸದ್ಯ ತಾಲ್ಲೂಕಿನಾದ್ಯಂತ ಕಡಲೆ ಒಕ್ಕಣಿ ಜೋರಾಗಿ ನಡೆದಿದೆ. ರೈತರು ಹಗಲೂ, ರಾತ್ರಿ ಎನ್ನದೆ ಒಕ್ಕಣೆ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾತ್ರಿ ವೇಳೆ ಕಡಲೆ ಗಿಡ ಕೀಳಲು ಕೃಷಿ ಕೂಲಿಕಾರರೊಂದಿಗೆ ಹೊಲಗಳಿಗೆ ತೆರಳುವ ರೈತರು ಹಗಲು ಹೊತ್ತು ಕಿತ್ತ ಕಡಲೆಯನ್ನು ಕಣದಲ್ಲಿ ಒಣ ಹಾಕಿ ಯಂತ್ರದ ಸಹಾಯದೊಂದಿಗೆ ಒಕ್ಕಣೆ ಮಾಡುತ್ತಿದ್ದಾರೆ.

ಪ್ರಸ್ತುತ ವರ್ಷ ತಾಲ್ಲೂಕಿನಲ್ಲಿ 32 ಸಾವಿರ ಹೆಕ್ಟೇರ್‌ಗೂ ಹೆಚ್ಚು ಭೂಮಿಯಲ್ಲಿ ಕಡಲೆ ಬಿತ್ತನೆ ಆಗಿದ್ದು ಇಳುವರಿ ಹೆಚ್ಚು ಬರುವ ನಿರೀಕ್ಷೆ ಇದೆ. ಸದ್ಯ ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಕಡಲೆ ಮಾರಾಟಕ್ಕೆ ಬರುತ್ತಿದ್ದು, ಪ್ರತಿ ಕ್ವಿಂಟಲ್ ಕಡಲೆ ₹5,695ರಂತೆ ಮಾರಾಟ ಆಗುತ್ತಿದೆ. ಕೇಂದ್ರ ಸರ್ಕಾರ ಈಗಾಗಲೇ ಕ್ವಿಂಟಲ್‍ ಕಡಲೆ ಬೆಳೆಗೆ ₹5,875 ಬೆಂಬಲ ಬೆಲೆ ಘೋಷಣೆ ಮಾಡಿದೆಯಾದರೂ, ಖರೀದಿ ಕೇಂದ್ರ ಇನ್ನೂ ಆರಂಭ ಆಗಿಲ್ಲ.

ತಾಲ್ಲೂಕಿನ ಯಳವತ್ತಿ, ಗೊಜನೂರು, ಅಡರಕಟ್ಟಿ ಮತ್ತು ಲಕ್ಷ್ಮೇಶ್ವರದಲ್ಲಿ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ಮಾರಾಟ ಮಹಾಮಂಡಳ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಇದೆ. ಶೀಘ್ರ ಕೇಂದ್ರ ಆರಂಭಗೊಂಡರೆ ಮಾತ್ರ ಬೆಳೆಗಾರರಿಗೆ ಲಾಭ ಆಗುತ್ತದೆ. ಈ ವರ್ಷ ಮೆಕ್ಕೆಜೋಳ ಖರೀದಿ ಕೇಂದ್ರಕ್ಕಾಗಿ ತಾಲ್ಲೂಕಿನಲ್ಲಿ ನಡೆದ ಗಲಾಟೆ, ಗೊಂದಲ ಈಗಲೂ ಹಸಿರಾಗಿದೆ. ಕಾರಣ ಜಿಲ್ಲಾಡಳಿತ ತಡಮಾಡದೆ ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕು. ಇದಕ್ಕಾಗಿ ಬೆಳೆಗಾರರ ನೋಂದಣಿ ಕಾರ್ಯ ಶೀಘ್ರ ಆರಂಭಿಸಬೇಕಾದ ಅಗತ್ಯ ಇದೆ.

ADVERTISEMENT

‘ರೈತರು ಖಾಸಗಿ ವ್ಯಾಪಾರಸ್ಥರಿಗೆ ಕಡಲೆ ಮಾರಾಟ ಮಾಡುವ ಮೊದಲೆ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕು. ಅಂದಾಗ ಮಾತ್ರ ಬೆಳೆಗಾರರಿಗೆ ಅನುಕೂಲ ಆಗುತ್ತದೆ’ ಎಂದು ಲಕ್ಷ್ಮೇಶ್ವರದ ರೈತ ಟಾಕಪ್ಪ ಸಾತಪುತೆ ಆಗ್ರಹಿಸಿದರು.

ಈ ವರ್ಷ ರೈತರು ಸಾಕಷ್ಟು ಪ್ರಮಾಣದಲ್ಲಿ ಕಡಲೆ ಬೆಳೆದಿದ್ದಾರೆ. ಇದರಿಂದ ಅವರಿಗೆ ಲಾಭ ಆಗಬೇಕಾದರೆ ಬೆಂಬಲ ಖರೀದಿ ಕೇಂದ್ರ ಶೀಘ್ರ ಆರಂಭವಾಗಬೇಕು
ಪರಶುರಾಮ ಲಕ್ಕಣ್ಣವರ ಕಡಲೆ ಬೆಳೆಗಾರ ರಾಮಗೇರಿ
ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಯೂಸರ್ ಐಡಿ ಬಂದ ತಕ್ಷಣ ಖರೀದಿ ಆರಂಭಿಸಲಾಗುವುದು. ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ನಾಲ್ಕು ಕೇಂದ್ರ ತೆರೆಯಲಾಗುವುದು
ಡಿ.ಬಿ. ಡೊಂಕಣ್ಣವರ, ಶಾಖಾ ವ್ಯವಸ್ಥಾಪಕ, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳ ಗದಗ