ADVERTISEMENT

ನರಗುಂದ: ಅಧ್ಯಕ್ಷೆ, ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ

ನರಗುಂದ ಪುರಸಭೆ ಚುನಾವಣೆ ಇಂದು: ಬಿಜೆಪಿ ಮೇಲುಗೈ ಸಾಧ್ಯತೆ

ಬಸವರಾಜ ಹಲಕುರ್ಕಿ
Published 19 ಆಗಸ್ಟ್ 2024, 5:04 IST
Last Updated 19 ಆಗಸ್ಟ್ 2024, 5:04 IST
ನರಗುಂದ ಪುರಸಭೆ
ನರಗುಂದ ಪುರಸಭೆ   

ನರಗುಂದ: ಕಳೆದೊಂದು ವರ್ಷದಿಂದ ಖಾಲಿಯಿದ್ದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಸೋಮವಾರ ಚುನಾವಣೆ ನಡೆಯಲಿದೆ.

ಕಳೆದ ಅವಧಿಯ ಮೀಸಲಾತಿ ಮುಂದುವರಿದಿದ್ದು, ಮತ್ತೊಮ್ಮೆ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿದೆ. 

23 ಸದಸ್ಯರನ್ನೊಳಗೊಂಡ ಪುರಸಭೆಯಲ್ಲಿ ಬಿಜೆಪಿಯ 17 ಸದಸ್ಯರು ಹಾಗೂ ಕಾಂಗ್ರೆಸ್‌ನ ಆರು ಸದಸ್ಯರಿದ್ದಾರೆ. ಜೊತೆಗೆ ಬಿಜೆಪಿಯವರಿಗೆ ಶಾಸಕ, ಸಂಸದ, ವಿಧಾನ ಪರಿಷತ್ ಸದಸ್ಯರ ಬೆಂಬಲ ಇದೆ. ಇದರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಯಾವುದೇ ಅಡೆತಡೆಯಿಲ್ಲದೆ ಬಿಜೆಪಿ ಪಾಲಾಗುವುದು ಖಚಿತ ಎನ್ನಲಾಗಿದೆ.‌

ADVERTISEMENT

ಆಕಾಂಕ್ಷಿಗಳಲ್ಲಿ ಪೈಪೋಟಿ: ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, 20ನೇ ವಾರ್ಡಿನ ಕಾಶವ್ವ ಮಳಗಿ, 15ನೇ ವಾರ್ಡಿನ ಬಸವಣ್ಣೆವ್ವ ಪವಾಡೆಪ್ಪ ವಡ್ಡಿಗೇರಿ, 2ನೇ ವಾರ್ಡಿನ ಮಂಜುಳಾ ಪ್ರಕಾಶ ಪಟ್ಟಣಶೆಟ್ಟಿ ತೀವ್ರ ಪೈಪೋಟಿ ನಡೆಸಿದ್ದಾರೆ.

ಹಿಂದುಳಿದ ‘ಅ’ ವರ್ಗದಡಿ ಆಯ್ಕೆಯಾದ ಕುರುಬ ಸಮಾಜದ ಕಾಶವ್ವ ಮಳಗಿ, ಗಾಣಿಗ ಸಮಾಜದ ಬಸವಣ್ಣೆವ್ವ ಪವಾಡೆಪ್ಪ ವಡ್ಡಿಗೇರಿ ಇವರಲ್ಲಿ ಒಬ್ಬರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಬಹುತೇಕ ಸದಸ್ಯರಿಂದ ಕೇಳಿಬರುತ್ತಿವೆ. ಆದರೆ ಸಾಮಾನ್ಯ ವರ್ಗದ ಮಂಜುಳಾ ಪಟ್ಟಣಶೆಟ್ಟಿ, ‘ಮೀಸಲಾತಿ ನಮಗೆ ಇದೆ, ಅವಕಾಶ ನನಗೇ ಕೊಡಬೇಕು’ ಎಂದು ಬಿಜೆಪಿ ನಾಯಕರ ಬಳಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಗೌಡ ಪಾಟೀಲ, ರಾಚನಗೌಡ ಪಾಟೀಲ, ಪ್ರಕಾಶ ಹಾದಿಮನಿ, ಹಸನ ಗೊಟೂರ ಸೇರಿದಂತೆ ಇನ್ನೂ ಕೆಲವರ ಹೆಸರುಗಳು ಕೇಳಿಬರುತ್ತಿವೆ. 

ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ಪಂಚಮಸಾಲಿ ಸಮಾಜದ ಭಾವನಾ ಪಾಟೀಲ, ಮರಾಠಾ ಸಮಾಜದ ರಾಜೇಶ್ವರಿ ಹವಾಲ್ದಾರ್ ಅಧ್ಯಕ್ಷರಾದರೆ, ಬ್ರಾಹ್ಮಣ ಸಮಾಜದ ಪ್ರಶಾಂತ ಜೋಶಿ, ಪಂಚಮಸಾಲಿ ಸಮಾಜದ ಅನ್ನಪೂರ್ಣ ಯಲಿಗಾರ ಉಪಾಧ್ಯಕ್ಷರಾಗಿದ್ದರು. ಈಗ ಆ ಸಮಾಜದ ಸದಸ್ಯರನ್ನು ಹೊರತುಪಡಿಸಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಈವರೆಗೆ 30ಕ್ಕೂ ಹೆಚ್ಚು ಅಧ್ಯಕ್ಷ, ಉಪಾಧ್ಯಕ್ಷರನ್ನು ಕಂಡ ಈ ಪುರಸಭೆಗೆ, ಈ ಬಾರಿ ಯಾರು ಅಧಿಕಾರದ ಗದ್ದುಗೆ ಹಿಡಿಯಲಿದ್ದಾರೆ ಎಂಬ ಕೂತೂಹಲ ಮನೆಮಾಡಿದೆ. ಆದರೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ಶಾಸಕ ಸಿ.ಸಿ.ಪಾಟೀಲ ಅವರ ತೀರ್ಮಾಣವೇ ಅಂತಿಮ ಎನ್ನಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.