ADVERTISEMENT

ಶಿರಹಟ್ಟಿ ಕ್ಷೇತ್ರ: ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಪೈಪೋಟಿ

ಶಿರಹಟ್ಟಿ ವಿಧಾನಸಭಾ ಕ್ಷೇತ್ರ; ಕಾಂಗ್ರೆಸ್‌ನಿಂದ 14 ಮಂದಿ ಅರ್ಜಿ ಸಲ್ಲಿಕೆ

ಸತೀಶ ಬೆಳ್ಳಕ್ಕಿ
Published 29 ಮಾರ್ಚ್ 2023, 6:54 IST
Last Updated 29 ಮಾರ್ಚ್ 2023, 6:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗದಗ: ಲಂಬಾಣಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಕುರುಬ ಮತ್ತು ಲಿಂಗಾಯತ ಸಮುದಾಯದ ಮತದಾರರ ಸಂಖ್ಯೆ ಹೆಚ್ಚು ಕಡಿಮೆ ಸಮಾನವಾಗಿರುವ ಶಿರಹಟ್ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಬಯಸಿ ಈ ಬಾರಿ ಕಾಂಗ್ರೆಸ್‌ನಿಂದ ಬರೋಬ್ಬರಿ 14 ಮಂದಿ ಆಕಾಂಕ್ಷಿಗಳು ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಜಿಲ್ಲೆಯ ಇನ್ನುಳಿದ ವಿಧಾನಸಭಾ ಕ್ಷೇತ್ರಗಳಿಗಿಂತ ಇಲ್ಲಿ ಹೆಚ್ಚಿನ ಆಕಾಂಕ್ಷಿಗಳಿರುವುದರಿಂದಲೇ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್‌, ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ.

ಟಿಕೆಟ್‌ ಪಡೆಯಲು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ನಡುವೆ ನೇರ ಪೈಪೋಟಿ ನಡೆದಿದೆ. ಈ ಇಬ್ಬರೂ ನಾಯಕರು ರಾಜ್ಯ ನಾಯಕರ ಜತೆಗೆ ಉತ್ತಮ ಸಂಪರ್ಕ ಹೊಂದಿರುವುದರಿಂದ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ಗ್ಯಾರಂಟಿ ಎನ್ನಲಾಗುತ್ತಿದೆ. ಇವರ ಜತೆಗೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಭರತ್‌ ಪಿ. ಕೂಡ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ADVERTISEMENT

ರಾಮಕೃಷ್ಣ ದೊಡ್ಡಮನಿ ಅವರಿಗೆ ಕ್ಷೇತ್ರದಲ್ಲಿ ಜನರ ಸಂಪರ್ಕ ಚೆನ್ನಾಗಿದೆ. ಅದೇರೀತಿ, ಈ ಹಿಂದೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಗಿದ್ದಾಗಿನಿಂದಲೂ ಸುಜಾತಾ ದೊಡ್ಡಮನಿ ಕ್ಷೇತ್ರದ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಶಿರಹಟ್ಟಿ ಮೀಸಲು ಕ್ಷೇತ್ರವು ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ಒಳಗೊಂಡ ಮೂರು ಬ್ಲಾಕ್‌, 250 ಬೂತ್‌ಗಳನ್ನು ಹೊಂದಿದೆ. 114 ಹಳ್ಳಿಗಳು ಬರುವ ಈ ಕ್ಷೇತ್ರದಲ್ಲಿ 2,21,800 ಮಂದಿ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆನಂತರದಲ್ಲಿ ಕುರುಬ, ಲಂಬಾಣಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಂ ಸಮುದಾಯದ ಮತದಾರರು ಇದ್ದಾರೆ. ಇಲ್ಲಿ ಲಿಂಗಾಯತ ಮತ್ತು ಕುರುಬ ಮತದಾರರೇ ಅಭ್ಯರ್ಥಿಯ ಗೆಲುವಿಗೆ ನಿರ್ಣಾಯಕರಾಗಿದ್ದಾರೆ.

‘ಶಿರಹಟ್ಟಿ ಕ್ಷೇತ್ರದಲ್ಲಿ ಸುಮಾರು 40 ಸಾವಿರ ಮಂದಿ ಮಾದಿಗ ಸಮುದಾಯದ ಮತದಾರರು ಇದ್ದಾರೆ. ಕಳೆದ ಚುನಾವಣೆಯಲ್ಲಿ ನನಗೆ ಟಿಕೆಟ್‌ ಸಿಗಬೇಕಿತ್ತು. ಆದರೆ, ರಾಮಕೃಷ್ಣ ದೊಡ್ಡಮನಿ ಅವರಿಗೆ ಹೈಕಮಾಂಡ್‌ ಟಿಕೆಟ್‌ ನೀಡಿತು. ಬೇಸರಗೊಳ್ಳದೆ ಒಗ್ಗಟ್ಟಿನಿಂದ ದುಡಿದೆವು. ಎಡಗೈ ಮಾದಿಗ ಸಮುದಾಯಕ್ಕೆ 2008ರಿಂದಲೂ ಟಿಕೆಟ್‌ ನೀಡಿಲ್ಲ. ಲಿಂಗಾಯತ, ಕುರುಬ ಸಮುದಾಯದ ವಿಶ್ವಾಸ ಗಳಿಸಲು ಪ್ರಯತ್ನ ನಡೆಸಿದ್ದೇನೆ. ಈ ಬಾರಿ ನನಗೆ ಟಿಕೆಟ್‌ ಸಿಗುವ ವಿಶ್ವಾಸ ಇದೆ. ಪಕ್ಷದ ವರಿಷ್ಠರು ಕೂಡ ಭರವಸೆ ನೀಡಿದ್ದಾರೆ’ ಎನ್ನುತ್ತಾರೆ ಸುಜಾತಾ ದೊಡ್ಡಮನಿ.

‌ಸುಜಾತಾ ದೊಡ್ಡಮನಿ ಹಾಗೂ ರಾಮಕೃಷ್ಣ ದೊಡ್ಡಮನಿ ಇಬ್ಬರೂ ಮನೆ ಮನೆ ಸಂಪರ್ಕಿಸಿ, ತಮಗೆ ಆಶೀರ್ವದಿಸುವಂತೆ ಕೋರುತ್ತಿದ್ದಾರೆ. ಗೃಹಿಣಿಯರಿಗೆ ಪ್ರತಿ ತಿಂಗಳು ₹2 ಸಾವಿರ, ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌, ಪದವೀಧರರಿಗೆ ನಿರುದ್ಯೋಗ ಭತ್ಯೆ, 10 ಕೆ.ಜಿ. ಅಕ್ಕಿ ಸೇರಿದಂತೆ ಕಾಂಗ್ರೆಸ್‌ ಪಕ್ಷದ ಈ ಸಲದ ಜನಪ್ರಿಯ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.

ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆಯಲು ತೀವ್ರ ಪೈಪೋಟಿ ನಡೆಸಿರುವ ರಾಮಕೃಷ್ಣ ದೊಡ್ಡಮನಿ ಮತ್ತು ಸುಜಾತಾ ದೊಡ್ಡಮನಿ ಅವರಲ್ಲಿ ಹೈಕಮಾಂಡ್‌ ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು ತಿಳಿಯಲು ಇನ್ನು ನಾಲ್ಕೈದು ದಿನಗಳು ಕಾಯಬೇಕಷ್ಟೇ.

ಪ್ಲೇಕಾರ್ಡ್‌ ಹಿಡಿದ ತಕ್ಷಣ ಟಿಕೆಟ್‌ ಕೊಡಲ್ಲ: ಗುಡುಗು

ಶಿರಹಟ್ಟಿ ಮೀಸಲು ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದು ವರಿಷ್ಠರಿಗೆ ಚಿಂತೆ ತರಿಸಿದೆ. ಒಬ್ಬರಿಗೆ ಟಿಕೆಟ್‌ ಕೊಟ್ಟರೆ ಅವರ ಗೆಲುವಿಗೆ ಉಳಿದವರು ಶ್ರಮಿಸುತ್ತಾರೆಯೇ ಎಂಬ ಅನುಮಾನ ಇದೆ. ಈಚೆಗೆ ಶಿರಹಟ್ಟಿ ಕ್ಷೇತ್ರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೂಡ ಇದೇ ಮಾತು ಹೇಳಿದ್ದರು.

‘ಟಿಕೆಟ್‌ ಆಕಾಂಕ್ಷಿಗಳ ಬೆಂಬಲಿಗರು ನನ್ನ ಮುಂದೆ ಪ್ಲೇ ಕಾರ್ಡ್‌ ಹಿಡಿದ ತಕ್ಷಣ ಅವರಿಗೆ ಟಿಕೆಟ್‌ ಸಿಗಲ್ಲ. ಎಲ್ಲರೂ ಪ್ಲೇಕಾರ್ಡ್‌ ಕೆಳಗಿಸಿ’ ಎಂದು ಗುಡುಗಿದ್ದರು.

‘ಶಿರಹಟ್ಟಿ ಮೀಸಲು ಕ್ಷೇತ್ರದಿಂದ 14 ಮಂದಿ ಆಕಾಂಕ್ಷಿಗಳಿದ್ದಾರೆ. ವೇದಿಕೆಯಲ್ಲಿ ಒಬ್ಬರಿಗೆ ಮಾತನಾಡಲು ಅವಕಾಶ ಕೊಟ್ಟರೆ, ಉಳಿದವರಿಗೆ ಬೇಜಾರಾಗುತ್ತದೆ. ಹಾಗಾಗಿ, ಯಾರಿಗೂ ಮಾತನಾಡಲು ಅವಕಾಶ ಮಾಡಿಕೊಟ್ಟಿಲ್ಲ. ಆಂತರಿಕ ಸಮೀಕ್ಷೆ ನಡೆಸಿ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ಕೊಡಲಾಗುವುದು. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರೂ ಟಿಕೆಟ್‌ ಸಿಗುವುದು ಒಬ್ಬರಿಗೆ ಮಾತ್ರ. ಹಾಗಾಗಿ, ಪಕ್ಷ ಟಿಕೆಟ್‌ ನೀಡಿದ ವ್ಯಕ್ತಿಯ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು’ ಎಂದು ಕಿವಿಮಾತು ಹೇಳಿದ್ದರು.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು

* ರಾಮಕೃಷ್ಣ ದೊಡ್ಡಮನಿ
* ಸುಜಾತಾ ದೊಡ್ಡಮನಿ
* ಗೂಳಪ್ಪ ಹಳ್ಳಿಗೇರಿ
* ಭರತ್‌ ಪಿ.
* ಜಯಕ್ಕ
* ಗುರಪ್ಪ ದೇನಪ್ಪ
* ದೀಪಕ್‌ ಗುರಪ್ಪ
* ದೇವಪ್ಪ ನಾಗಪ್ಪ ಲಮಾಣಿ
* ರಾಮಣ್ಣ ಶೀರಪ್ಪ ಲಮಾಣಿ
* ಸುಶೀಲವ್ವ
* ಡಾ. ಬಿ.ತಿಪ್ಪೇಸ್ವಾಮಿ
* ಕವಿತಾ ಮಾರಯ್ಯ
* ರಾಜು ದೊಡ್ಡಹನುಮಪ್ಪ ದಾವಣೆಗೆರೆ
* ಕೋಲೆಪ್ಪ ಸಿದ್ದಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.