
ಗಜೇಂದ್ರಗಡ: ‘ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಜಾರಿಗೆ ತಂದಿದೆ. ಇದರ ಲಾಭ ರಾಜ್ಯದ ಎಲ್ಲ ಜನರಿಗೆ ತಲುಪುತ್ತಿದೆʼ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ತಾಲ್ಲೂಕಿನ ನಾಗರಸಕೊಪ್ಪ ಗ್ರಾಮದಲ್ಲಿ ಗುರುವಾರ 2025-26ನೇ ಸಾಲಿನ ಮಳೆ ಪರಿಹಾರ ಕಾರ್ಯಕ್ರಮದ ಲೆಕ್ಕ ಶೀರ್ಷಿಕೆ 5054ರ ಅಡಿ ₹40 ಲಕ್ಷ ವೆಚ್ಚದಲ್ಲಿ ಹುಲಿಗೆಮ್ಮನ ಗುಡಿ ಹತ್ತಿರ ಸಿ.ಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರದ ಬಳಿ ಹಣವಿಲ್ಲದಂತಾಗಿದೆ ಎಂದು ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಸಿಸಿ ರಸ್ತೆ, ರಸ್ತೆಗಳ ಅಭಿವೃದ್ಧಿ, ಸಮುದಾಯ ಭವನಗಳು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಹಾಗಾದರೆ ವಿರೋಧ ಪಕ್ಷದವರ ಆರೋಪದಂತೆ ರಾಜ್ಯ ಸರ್ಕಾರದ ಬಳಿ ಹಣವಿಲ್ಲದಿದ್ದರೆ ಇದೆಲ್ಲ ಹೇಗೆ ಸಾಧ್ಯವಾಗುತ್ತದೆ. ಹೀಗಾಗಿ ವಿರೋಧ ಪಕ್ಷದವರ ಮಾತುಗಳಿಗೆ ಜನರು ಕಿವಿಗೊಡಬಾರದುʼ ಎಂದು ಹೇಳಿದರು.
ʼಈಗಾಗಲೇ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ, ಸಿಸಿ ರಸ್ತೆಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದ್ದು, ಮಾರ್ಚ್ ತಿಂಗಳ ಬಳಿಕ ವಿವಿಧ ದೇವಸ್ಥಾನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲಾಗುವುದು. ನನಗೆ ನಿಮ್ಮೆಲ್ಲರ ಸಹಕಾರ ಅಗತ್ಯʼ ಎಂದರು.
ಇದಕ್ಕೂ ಮೊದಲು ಬೆಣಸಮಟ್ಟಿ ಗ್ರಾಮದಲ್ಲಿ ₹20 ಲಕ್ಷ ವೆಚ್ಚದಲ್ಲಿ ಜಮೀನುಗಳಿಗೆ ಸಂಪರ್ಕಿಸುವ ರಸ್ತೆಯಲ್ಲಿ ಸಿ.ಡಿ ನಿರ್ಮಾಣ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಕಾರ್ಯಕ್ರಮದಲ್ಲಿ ₹10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ನಾಗರಸಕೊಪ್ಪ ತಾಂಡಾದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ₹5 ಲಕ್ಷ ವೆಚ್ಚದಲ್ಲಿ ಮಿಠುಲಾಲ್ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
ಅಶೋಕ ಬಾಗಮಾರ, ಶರಣಪ್ಪ ಬೆಟಗೇರಿ, ಶಿವರಾಜ ಘೋರ್ಪಡೆ, ಶ್ರೀಧರ ಬಿದರಳ್ಳಿ, ತಾರಾಸಿಂಗ್ ರಾಠೋಡ, ಶ್ರೀಧರ ಗಂಜಿಗೌಡ್ರ, ಸಿದ್ದು ಗೊಂಗಡಶೇಟ್ಟಿಮಠ, ಷಣ್ಮುಖಪ್ಪ ಕರಡಿ, ತಿರುಪತಿ ರಾಠೋಡ, ಮುತ್ತಣ್ಣ ಲ್ಯಾವಕ್ಕಿ, ಮೌನೇಶ ಬಡಿಗೇರಿ, ಹೊಳಿಯಪ್ಪ ದಮ್ಮೂರ, ಶರಣಪ್ಪ ಬುಜ್ಜಲ್, ಸುರೇಶ ಪಾಟೀಲ, ಬಾಳಪ್ಪ ಬಿಸನಾಳ, ಈರಣ್ಣ ಸಬರದ, ತಾಲ್ಲೂಕು ಪಂಚಾಯ್ತಿ ಇಓ ಚಂದ್ರಶೇಖರ ಕಂದಕೂರ, ಗೋಗೇರಿ ಗ್ರಾಮ ಪಂಚಾಯಿತಿ ಪಿಡಿಓ ಶರಣಪ್ಪ ನರೇಗಲ್ಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.