
ಗದಗ: ಇಲ್ಲಿನ ಗದಗ ಬೆಟಗೇರಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನ ನಿಗದಿಯಾಗಿದ್ದು, ಮಾರ್ಚ್ 3ರಂದು ಮಧ್ಯಾಹ್ನ 2ಕ್ಕೆ ಚುನಾವಣೆ ನಡೆಯಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರಳ ಬಹುಮತದೊಂದಿಗೆ ಗದ್ದುಗೆ ಏರುವುದು ನಿಶ್ಚಿತವಾಗಿದೆ.
ಪ್ರಕರಣದ ಹಿನ್ನೆಲೆ: ಗದಗ ಬೆಟಗೇರಿ ನಗರಸಭೆಗೆ ಸೇರಿದ್ದ 54 ವಕಾರಸಾಲು ಆಸ್ತಿಯನ್ನು ಅಕ್ರಮವಾಗಿ ಗುತ್ತಿಗೆ ನೀಡಲು ನಕಲಿ ಠರಾವು ಸೃಷ್ಟಿಸಿದ ಆರೋಪಕ್ಕೆ ಗುರಿಯಾಗಿದ್ದ ನಗರಸಭೆಯ ಮೂವರು ಬಿಜೆಪಿ ಸದಸ್ಯರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ನೀಡಿದ್ದ ಆದೇಶವನ್ನು ಬೆಂಗಳೂರಿನ ಹೈಕೋರ್ಟ್ ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು. ಜತೆಗೆ ಮುಂದಿನ 45 ದಿನಗಳ ಒಳಗಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆಯೂ ಫೆ.10ರಂದು ಆದೇಶ ನೀಡಿತ್ತು. ಅದರಂತೆ ಚುನಾವಣಾಧಿಕಾರಿ ಗಂಗಪ್ಪ ಎಂ. ಅವರು ಮಾರ್ಚ್ 3ಕ್ಕೆ ದಿನ ನಿಗದಿ ಮಾಡಿದ್ದಾರೆ.
ಹೊಸ ಬೆಳವಣಿಗೆ ಏನು?: ಬೆಂಗಳೂರು ಹೈಕೋರ್ಟ್‌ನ ಏಕಸದಸ್ಯ ಪೀಠದ ನೀಡಿದ ತೀರ್ಪು ಪ್ರಶ್ನಿಸಿ ಬಿಜೆಪಿ ಸದಸ್ಯರು ಮತ್ತೇ ಧಾರವಾಡ ಹೈಕೋರ್ಟ್‌ನ ದ್ವಿ ಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಮತ ಹಕ್ಕು ನೀಡಬೇಕು. ಇಲ್ಲವಾದಲ್ಲಿ, ಚುನಾವಣೆ ಮುಂದೂಡಬೇಕು ಎಂದು ಕೋರಿದ್ದರು. ಆದರೆ, ಈ ಅರ್ಜಿಯನ್ನು ದ್ವಿಸದಸ್ಯ ಪೀಠ ತಳ್ಳಿ ಹಾಕಿದೆ. ಸದ್ಯದ ಪರಿಸ್ಥಿತಿಯಲ್ಲಿ ನಗರಸಭೆ ಗದ್ದುಗೆ ಕಾಂಗ್ರೆಸ್ ಕೈ ವಶ ಆಗುವುದು ನಿಶ್ಚಿತವಾಗಿದೆ.
ಸಂಖ್ಯಾಬಲ ಮತ್ತೇ ಅದಲು ಬದಲು: ನಕಲಿ ಠರಾವು ಸೃಷ್ಟಿ ಪ್ರಕರಣದಲ್ಲಿ ಬಿಜೆಪಿ ಸದಸ್ಯರಾದ ಉಷಾ ದಾಸರ, ಅನಿಲ್ ಅಬ್ಬಿಗೇರಿ ಹಾಗೂ ಮುತ್ತು ಮುಶಿಗೇರಿ ಅವರ ಸದಸ್ಯತ್ವ ರದ್ದಾಗಿದೆ. ಹೀಗಾಗಿ, ನಗರಸಭೆಯಲ್ಲಿ ಬಿಜೆಪಿಯ ಸಂಖ್ಯಾ ಬಲ 18ರಿಂದ 15ಕ್ಕೆ ಕುಸಿದಿದೆ. ಸಂಸದರು ಮತ ಚಲಾಸಿದರೆ ಸಂಖ್ಯಾ ಬಲ 16 ಆಗುತ್ತದೆ. ಆದರೂ ಅಧಿಕಾರ ಹಿಡಿಯಲು ಇನ್ನೂ ಎರಡು ಮತಗಳ ಕೊರತೆ ಆಗಲಿದೆ.
ಇತ್ತ, ಕಾಂಗ್ರೆಸ್‌ನಲ್ಲಿ ನಗರಸಭೆ ಸದಸ್ಯರ ಸಂಖ್ಯೆ 15 ಇತ್ತು. ಇಬ್ಬರು ಪಕ್ಷೇತರರ ಸದಸ್ಯರು ಇವರಿಗೆ ಬೆಂಬಲಿಸಿದ್ದರಿಂದ 17 ಆಗಿದೆ. ಜತೆಗೆ ಚುನಾವಣೆಯಲ್ಲಿ ಸ್ಥಳೀಯ ಶಾಸಕರ ಮತದಾನದ ಹಕ್ಕು ಇರುವುದರಿಂದ ಕಾಂಗ್ರೆಸ್ ಬಲ 18ಕ್ಕೆ ಏರಿಕೆಯಾಗಿದೆ.
ಸದಸ್ಯತ್ವ ಅನರ್ಹಗೊಳಿಸಿದ್ದ ಪ್ರಕರಣಕ್ಕೆ ಮತ್ತೇ ಜೀವ: ಧಾರವಾಡ ಹೈಕೋರ್ಟ್‌ನ ದ್ವಿ ಸದಸ್ಯ ಪೀಠ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ತಡೆ ನೀಡಲು ನಿರಾಕರಿಸಿದೆ. ಆದರೆ, ಮೂವರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿದ್ದ ಪ್ರಕರಣವನ್ನು ಮತ್ತೇ ಕೈಗೆತ್ತಿಕೊಳ್ಳುವುದಾಗಿ ತಿಳಿಸಿ, ಮಾರ್ಚ್ 18ಕ್ಕೆ ದಿನ ನಿಗದಿಗೊಳಿಸಿದೆ. ಇದರಿಂದಾಗಿ, ಸದಸ್ಯತ್ವ ಮರಳಿ ಸಿಗಲಿದೆ ಎಂಬ ವಿಶ್ವಾಸವನ್ನು ಬಿಜೆಪಿ ನಾಯಕರು ಇಂದಿಗೂ ಜೀವಂತ ಉಳಿಸಿಕೊಂಡಿದ್ದಾರೆ.
ಆದರೆ, ಆ ವೇಳೆಗೆ ಚುನಾವಣೆ ಮುಗಿದು, ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಆಗಿರುತ್ತದೆ. ಒಂದು ವೇಳೆ, ಸದಸ್ಯತ್ವ ಮರಳಿ ಬಂದರೂ, ‘ಮುಂದೇನು’ ಎಂಬ ಪ್ರಶ್ನೆ ಬಿಜೆಪಿಗರನ್ನು ಕಾಡಲಿದೆ.
‘ಕೊನೆ ಕ್ಷಣದವರೆಗೆ ಏನು ಬೇಕಾದರೂ ಆಗಬಹುದು. ಬಿಜೆಪಿ ಇನ್ನೂ ಒಂದು ಹಂತದ ಹೋರಾಟ ಕೈಗೆತ್ತಿಕೊಂಡಿದೆ. ಅದು ಏನೆಂಬುದು ಸದ್ಯದಲ್ಲೇ ಗೊತ್ತಾಗಲಿದೆ’ ಎಂದು ಬಿಜೆಪಿಯ ಖಚಿತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಮಾರ್ಚ್ 3ರಂದು ನಾಮಪತ್ರ ಸಲ್ಲಿಸಬೇಕೋ ಬೇಡವೋ ಎಂಬುದರ ಬಗ್ಗೆ ಪಕ್ಷದ ಹಿರಿಯರು ತೀರ್ಮಾನ ಮಾಡುವರು. ಸದಸ್ಯತ್ವಕ್ಕೆ ಹಿಂಪಡೆಯುವ ಕಾನೂನು ಹೋರಾಟದಲ್ಲಿ ಗೆದ್ದೇ ಗೆಲ್ಲುವ ವಿಶ್ವಾಸ ಇದೆ–ಚಂದ್ರು ತಡಸದ, ಬಿಜೆಪಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.