ADVERTISEMENT

ಕೊರೊನಾ ವಿರುದ್ಧ ಜಾಗೃತಿಗೆ ಲಿಂಗಾಯತರಿಗೆ ಕರೆ

ಏ.13ರಂದು ಸಂಜೆ 7 ಗಂಟೆಗೆ ತಮ್ಮ ಮನೆಗಳಲ್ಲಿ ಇಷ್ಟಲಿಂಗಪೂಜೆ ಮಾಡಲು ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 14:29 IST
Last Updated 9 ಏಪ್ರಿಲ್ 2020, 14:29 IST
ಡಾ. ಸಿದ್ಧರಾಮ ಸ್ವಾಮೀಜಿ
ಡಾ. ಸಿದ್ಧರಾಮ ಸ್ವಾಮೀಜಿ   

ಗದಗ: ಸಮಸ್ತ ಲಿಂಗಾಯತರು,ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಏ.13ರಂದು ಸಂಜೆ 7 ಗಂಟೆಗೆ ತಮ್ಮ ಮನೆಗಳಲ್ಲಿ ಗುರು ಬಸವಲಿಂಗಾಯ ನಮಃ ಪಠಣದೊಂದಿಗೆ ವಿಭೂತಿಧಾರಣ ಮಾಡಿಕೊಂಡು ಇಷ್ಟಲಿಂಗಪೂಜೆ, ಅನುಸಂಧಾನ ಮಾಡಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭೆ (ಜೆಎಲ್‌ಎಂ) ಕರೆ ನೀಡಿದೆ.

‘ಈ ಕಾರ್ಯದಲ್ಲಿ ಎಲ್ಲರೂ ಭಾಗಿಗಳಾಗೋಣ. ಕೊರೋನಾ ವಿಪತ್ತಿನಿಂದ ಸಮಸ್ತ ಜೀವ ಸಂಕುಲವನ್ನು ರಕ್ಷಿಸಲು ಭಗವಂತನಲ್ಲಿ ಪ್ರಾರ್ಥಿಸೋಣ’ ಎಂದು ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕೊರೋನಾ ಸೋಂಕು ಹರಡದಂತೆ ಎಲ್ಲ ರೀತಿಯ ಕ್ರಮ ಕೈಕೊಳ್ಳುವುದು ಇಂದಿನ ಅಗತ್ಯವಾಗಿದೆ. ವೈದ್ಯರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಮಸ್ತ ಬಸವಭಕ್ತರಿಗೆ ಈ ಕಾರ್ಯದಲ್ಲಿ ಭಾಗವಹಿಸಲು ತಿಳಿಸುವಂತೆ ನಾಡಿನ ಮಠಾಧಿಪತಿಗಳಿಗೆ ಸಿದ್ಧರಾಮ ಸ್ವಾಮೀಜಿ ಮನವಿ ಮಾಡಿಕೊಂಡಿದ್ದಾರೆ.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ಏ.5ರಂದು ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಬೆಳಗಿಸಲು ಕರೆ ಕೊಟ್ಟಿದ್ದು, ಕೊರೊನಾ ಜಾಗೃತಿ ನಿಟ್ಟಿನಲ್ಲಿ ಗಮನಾರ್ಹವಾದ ಉಪಕ್ರಮ. ಈ ರೀತಿಯ ಜನಜಾಗೃತಿಯ ಕ್ರಮವನ್ನು ಜನಪರ ಸಂಘ ಸಂಸ್ಥೆಗಳು ಮುಂದುವರಿಸಬೇಕಿದೆ’ ಎಂದೂ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.