ಗದಗ: ಲಾಕ್ ಡೌನ್ ಘೋಷಣೆ ಇದ್ದರೂ, ತರಕಾರಿ ಖರೀದಿಸಲು ಮಾರುಕಟ್ಟೆಗೆ ಮುಗಿಬಿದ್ದ ಸಾರ್ವಜನಿಕರಿಗೆ ಮತ್ತು ಜಿಲ್ಲಾಡಳಿತದ ಸೂಚನೆಯನ್ನು ನಿರ್ಲಕ್ಷಿಸಿದ ವ್ಯಾಪಾರಿಗಳಿಗೆ ಗುರುವಾರ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಲಾಠಿ ಹಿಡಿದು ಬಿಸಿ ಮುಟ್ಟಿಸಿದರು. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ‘ಸಾಮಾಜಿಕ ಅಂತರ’ ಕಾಯ್ದುಕೊಳ್ಳುವ ಮಹತ್ವದ ಕುರಿತು ಅವರು ಪಾಠ ಮಾಡಿದರು.
ಲಾಕ್‌ಡೌನ್ ಅವಧಿಯಲ್ಲಿ ಜನರು ಹಣ್ಣು, ತರಕಾರಿ ಖರೀದಿಸಲು ಮಾರುಕಟ್ಟೆಗೆ ಮುಗಿಬೀಳುವುದನ್ನು ತಪ್ಪಿಸಲು, ಗದಗ ಜಿಲ್ಲಾಡಳಿತ ಜನರ ಮನೆ ಬಾಗಿಲಿಗೇ ತರಕಾರಿ ತಲುಪಿಸುವ ಯೋಜನೆಯನ್ನು ನಗರದಲ್ಲಿ ಜಾರಿಗೊಳಿಸಿದೆ. ಗುರುವಾರದಿಂದಲೇ ಇದು ಜಾರಿಗೆ ಬಂದಿದೆ. ಆದರೆ, ಸಾರ್ವಜನಿಕರ ಅಸಹಕಾರದಿಂದಾಗಿ ಈ ಯೋಜನೆಗೆ ಮೊದಲ ದಿನ ಸ್ವಲ್ಪ ಹಿನ್ನಡೆಯಾಯಿತು.
ಮನೆ ಬಾಗಿಲಿಗೆ ತರಕಾರಿ ಬರುತ್ತದೆ ಎಂದು ಜಿಲ್ಲಾಡಳಿತ ಖಾತರಿಪಡಿಸಿದ್ದರೂ, ಜನರು ಇದನ್ನು ನಿರ್ಲಕ್ಷಿಸಿ, ತರಕಾರಿ ಖರೀದಿಗಾಗಿ ಮಾರುಕಟ್ಟೆಗೆ ದೌಡಾಯಿಸಿದ್ದರು. ಕೆಲವು ವ್ಯಾಪಾರಿಗಳು ಮುಖ್ಯಮಾರುಕಟ್ಟೆ ಮತ್ತು ಗದಗ–ಹುಬ್ಬಳ್ಳಿ ರಸ್ತೆಯ ಬೀಷ್ಮಕೆರೆಯ ದಂಡೆಯ ಮೇಲಿನ ಪಾದಾಚಾರಿ ಮಾರ್ಗದಲ್ಲೇ ತರಕಾರಿಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಜನದಟ್ಟಣೆ ಕಡಿಮೆಯಾಗಲಿಲ್ಲ. ಕೊನೆಗೆ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರೇ ಲಾಠಿ ಹಿಡಿದು ಮಾರುಕಟ್ಟೆಗೆ ಬಂದು, ವ್ಯಾಪಾರಿಗಳಿಗೆ ತಾಕೀತು ಮಾಡಿದರು.
‘ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಏಕೈಕ ಮಾರ್ಗ ಮನೆಯಲ್ಲೇ ಇರುವುದು. ಅನಿವಾರ್ಯ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಒಬ್ಬರು ಮಾತ್ರ ಹೊರಗೆ ಬರಬೇಕು, ಪದೇ ಪದೇ ಬರುವದನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಪ್ರತಿಯೊಬ್ಬರ ಜೀವದ ಸುರಕ್ಷತೆ ಮುಖ್ಯ’ ಎಂದು ಅವರು ಸಾರ್ವಜನಿಕರಿಗೆ ಮನವರಿಕೆ ಮಾಡಿದರು. ಇಲ್ಲಿನ ಗ್ರೇನ್ ಮಾರುಕಟ್ಟೆ, ಜನತಾ ಬಜಾರ್ ಪ್ರದೇಶಗಳಲ್ಲಿ ಸುತ್ತಾಡಿ ಜನರಿಗೆ ತಿಳುವಳಿಕೆ ನೀಡಿದರು.
ಕಿರಾಣಿ ಅಂಗಡಿಗಳು ಬೆಳಿಗ್ಗೆ 7ರಿಂದ 10 ಗಂಟೆಯವರೆಗೆ ತೆರೆದಿದ್ದು, ಗ್ರಾಹಕರು, ಒಬ್ಬೊಬ್ಬರಾಗಿ ಆಗಮಿಸಿ ಮಾರ್ಕಿಂಗ್ ಮಾಡಿದ ಸ್ಥಳದಲ್ಲಿ ಸರತಿ ಸಾಲಿನಲ್ಲಿ ನಿಂತು, ಅಗತ್ಯದ ಸಾಮಗ್ರಿಗಳನ್ನು ಖರೀದಿಸಬೇಕು. ತರಕಾರಿಗಾಗಿ ಮಾರುಕಟ್ಟೆಗೆ ಬರದೆ, ಮನೆಗೆ ಬರುವ ವ್ಯಾಪಾರಿ ಬಳಿಯಿಂದ, ಮನೆಯಿಂದ ಒಬ್ಬ ಸದಸ್ಯರು ಹೊರಗೆ ಬಂದು ಖರೀದಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.