ADVERTISEMENT

ಹತ್ತಿ ಬೆಳೆ ಪ್ರಮಾಣ ಗಣನೀಯ ಕುಸಿತ; ಸದ್ದು ನಿಲ್ಲಿಸಿದ ಜಿನ್ನಿಂಗ್ ಫ್ಯಾಕ್ಟರಿಗಳು

ನಾಗರಾಜ ಎಸ್‌.ಹಣಗಿ
Published 18 ಅಕ್ಟೋಬರ್ 2025, 4:44 IST
Last Updated 18 ಅಕ್ಟೋಬರ್ 2025, 4:44 IST
ಲಕ್ಷ್ಮೇಶ್ವರದ ಪೂರ್ಣಾಜಿ ಖರಾಟೆ ಅವರಿಗೆ ಸೇರಿದ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಯಲ್ಲಿನ ಪ್ರೆಸ್ಸಿಂಗ್ ಮಷಿನ್ ಕೆಲಸ ನಿಲ್ಲಿಸಿವೆ
ಲಕ್ಷ್ಮೇಶ್ವರದ ಪೂರ್ಣಾಜಿ ಖರಾಟೆ ಅವರಿಗೆ ಸೇರಿದ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಯಲ್ಲಿನ ಪ್ರೆಸ್ಸಿಂಗ್ ಮಷಿನ್ ಕೆಲಸ ನಿಲ್ಲಿಸಿವೆ   

ಲಕ್ಷ್ಮೇಶ್ವರ: ಕೆಲ ದಶಕಗಳ ಹಿಂದಷ್ಟೇ ಲಕ್ಷ್ಮೇಶ್ವರ ತಾಲ್ಲೂಕು ಹತ್ತಿ ಬೆಳೆಯಲು ಸಾಕಷ್ಟು ಹೆಸರು ಮಾಡಿತ್ತು. ಪ್ರತಿವರ್ಷ ಸಾವಿರಾರು ಹೆಕ್ಟೇರ್‌ನಲ್ಲಿ ರೈತರು ಹತ್ತಿ ಬೆಳೆಯುತ್ತಿದ್ದರು. ಲಕ್ಷ್ಮೇಶ್ವರ ತಾಲ್ಲೂಕು ಸೇರಿದಂತೆ ಪಕ್ಕದ ಕುಂದಗೋಳ, ಸವಣೂರು, ಮುಂಡರಗಿ, ಗದಗ ತಾಲ್ಲೂಕಿನ ಬಹಳಷ್ಟು ರೈತರು ಲಕ್ಷ್ಮೇಶ್ವರದ ಎಪಿಎಂಸಿಗೆ ಹತ್ತಿಯನ್ನು ಮಾರಾಟಕ್ಕೆ ತರುತ್ತಿದ್ದರು.

ಆಗ ಹತ್ತಿಯನ್ನೇ ನೆಚ್ಚಿ ಹತ್ತಾರು ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಗಳು ಲಕ್ಷ್ಮೇಶ್ವರದಲ್ಲಿ ತಲೆ ಎತ್ತಿದ್ದವು. ಪ್ರತಿದಿನ ರೈತರು ಸೇರಿದಂತೆ ಸಾವಿರಾರು ಜನರಿಗೆ ಉದ್ಯೋಗ ಇತ್ತು. ಆದರೆ ಎರಡ್ಮೂರು ವರ್ಷಗಳಿಂದ ರೈತರು ಹತ್ತಿ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಇದರಿಂದಾಗಿ ಇದನ್ನೇ ನೆಚ್ಚಿದ್ದ ಹತ್ತಾರು ಫ್ಯಾಕ್ಟರಿಗಳಲ್ಲಿನ ಮಷಿನ್‍ಗಳು ಸದ್ದು ನಿಲ್ಲಿಸಿದ್ದು, ಅವು ತುಕ್ಕು ಹಿಡಿಯುತ್ತಿವೆ. ಇದರೊಂದಿಗೆ ಬಹಳಷ್ಟು ಜನರು ಕೆಲಸ ಕಳೆದುಕೊಂಡಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣದಲ್ಲಿ 14 ಜಿನ್ನಿಂಗ್ ಫ್ಯಾಕ್ಟರಿ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿದ್ದವು. ಅವುಗಳಲ್ಲಿ ಪ್ರತಿದಿನ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಅವು ಬಂದ್ ಆಗಿದ್ದು ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ ಮಾಲೀಕರು ನಷ್ಟದಲ್ಲಿದ್ದಾರೆ.

ADVERTISEMENT

ಈ ಫ್ಯಾಕ್ಟರಿಗಳು ನಡೆಯಲು ಮುಖ್ಯವಾಗಿ ಕಚ್ಚಾ ವಸ್ತು ಹತ್ತಿ. ಆದರೆ ಇದೀಗ ಹತ್ತಿ ಬೆಳೆಯುವ ರೈತರ ಸಂಖ್ಯೆಯೇ ಕುಸಿದಿದೆ. ಕಚ್ಚಾ ವಸ್ತುವಿನ ಕೊರತೆ ಸೇರಿದಂತೆ ಮತ್ತಿತರ ಕಾರಣಗಳಿಗಾಗಿ ಫ್ಯಾಕ್ಟರಿಗಳು ಬಾಗಿಲು ಮುಚ್ಚಿವೆ.

ಕಳಪೆ ಬಿತ್ತನೆ ಬೀಜಗಳ ಪೂರೈಕೆ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಕೀಟಗಳ ಕಾಟ, ಅವುಗಳನ್ನು ನಿಯಂತ್ರಿಸಲು ಹೆಚ್ಚುತ್ತಿರುವ ಖರ್ಚು, ಅದರೊಂದಿಗೆ ಕೂಲಿ ಕಾರ್ಮಿಕರ ಕೊರತೆ, ಹತ್ತಿ ಬಿಡಿಸುವ ಸಂದರ್ಭದಲ್ಲಿ ಅನುಭವಿಸುವ ಕಷ್ಟ ಸೇರಿದಂತೆ ವಿವಿಧ ಕಾರಣಗಳಿಂದಾಗಿ ರೈತರು ಹತ್ತಿ ಬೆಳೆಯುವುದರಿಂದಲೇ ದೂರ ಸರಿಯುತ್ತಿದ್ದಾರೆ. ಹೀಗಾಗಿ ಹತ್ತಿಯನ್ನೇ ನೆಚ್ಚಿದ್ದ ಫ್ಯಾಕ್ಟರಿಗಳು ಒಂದೊಂದಾಗಿ ಬಂದ್ ಆಗುತ್ತಿವೆ.

ಒಂದು ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿ ಆರಂಭಿಸಲು ಕನಿಷ್ಠ ₹8 ಕೋಟಿ ಅಗತ್ಯ ಇದೆ. ಇಷ್ಟು ಬಂಡವಾಳ ಹಾಕಿದರೂ ಬಂಡವಾಳದಾರರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಬೇಸರಗೊಂಡಿರುವ ಜವಳಿ ಉದ್ಯಮಿದಾರರು ತಮ್ಮ ಉದ್ಯಮವನ್ನೇ ಬಂದ್ ಮಾಡುತ್ತಿರುವುದು ಒಳ್ಳೆ ಬೆಳವಣಿಗೆ ಅಲ್ಲ. ಯಾವುದೇ ಒಂದು ಊರು ಬೆಳವಣಿಗೆ ಹೊಂದಬೇಕಾದರೆ ಉದ್ಯಮಗಳು ಬೇಕು. ಆದರೆ ಕೆಲವು ದಶಕಗಳ ಹಿಂದೆ ಸಾವಿರಾರು ಜನರಿಗೆ ಕೆಲಸ ನೀಡಿದ್ದ ಪ್ರಮುಖ ಉದ್ಯಮವೊಂದು ಇಗ ನೇಪಥ್ಯಕ್ಕೆ ಸರಿಯುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಜವಳಿ ಉದ್ಯಮದ ಅಭಿವೃದ್ಧಿಗೆಂದೇ ಜಿಲ್ಲೆಗೊಂದು ಜವಳಿ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಆದರೆ ಅದಕ್ಕೂ ಸಮಸ್ಯೆಯನ್ನು ಪರಿಹರಿಸಲು ಆಗುತ್ತಿಲ್ಲ. ಹೀಗಾಗಿ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಉದ್ಯಮ ಕುಸಿಯುತ್ತಿದೆ. 

‘ಒಂದು ಸಣ್ಣ ಪ್ರಮಾಣದ ಜವಳಿ ಉದ್ಯಮ ಆರಂಭಿಸಲು ಕನಿಷ್ಠ ₹10 ಕೋಟಿ ಅಗತ್ಯ ಇದೆ. ನಮ್ಮ ಉದ್ಯಮದಲ್ಲಿ ದಿನಕ್ಕೆ ಐವತ್ತು ಕಾರ್ಮಿಕರು ದುಡಿಯುತ್ತಿದ್ದರು. ಆದರೆ ಇದೀಗ ಹತ್ತಿ ಬೆಳೆಯುವುದು ಕಡಿಮೆ ಆದ ನಂತರ ಈ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ’ ಎಂದು ಲಕ್ಷ್ಮೇಶ್ವರದ ವಿಜಯಲಕ್ಷ್ಮೀ ಕಾಟನ್ ಇಂಡಸ್ಟ್ರೀಸ್‌ನ ಮಾಲೀಕ ಪೂರ್ಣಾಜಿ ಖರಾಟೆ ಉದ್ಯಮದ ಸಂಕಷ್ಟಗಳನ್ನು ಹಂಚಿಕೊಂಡರು.

ಸರ್ಕಾರ ಹತ್ತಿ ಬೆಳೆಗಾರರಿಗೆ ಪ್ರೋತ್ಸಾಹ ನೀಡುವುದರ ಮೂಲಕ ಮತ್ತು ಜವಳಿ ಉದ್ಯಮ ಉಸಿರಾಡುವಂತೆ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಉದ್ಯಮಿಗಳು ಆಗ್ರಹಿಸಿದ್ದಾರೆ. 

ಲಕ್ಷ್ಮೇಶ್ವರದ ಪೂರ್ಣಾಜಿ ಖರಾಟೆ ಅವರಿಗೆ ಸೇರಿದ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಫ್ಯಾಕ್ಟರಿ
ಲಕ್ಷ್ಮೇಶ್ವರ ತಾಲ್ಲೂಕು ಗೊಜನೂರು ಗ್ರಾಮದ ರೈತರೊಬ್ಬರ ಹೊಲದಲ್ಲಿ ಬೆಳೆದಿರುವ ಬಿಟಿ ಹತ್ತಿ
ಬೇರೆ ಬೇರೆ ಕಡೆ ಸಿಗುವ ಸಾಲ ಪಡೆದು ಉದ್ಯಮಿದಾರರು ಫ್ಯಾಕ್ಟರಿ ಹಾಕಿದ್ದಾರೆ. ಆದರೆ ಉದ್ಯಮ ಬಂದ್ ಆಗಿರುವುದರಿಂದ ಸಾಲದ ಸುಳಿಯಲ್ಲಿ ಸಿಕ್ಕು ನರಳುತ್ತಿದ್ದಾರೆ
ಪೂರ್ಣಾಜಿ ಖರಾಟೆ ಉದ್ಯಮಿ

ಹತ್ತಿಗೆ ಹತ್ತು ಕುತ್ತು

‘ಹತ್ತಿ ಬೆಳೆಯಲು ರೈತರಿಗೆ ಹೆಚ್ಚಿನ ಖರ್ಚು ಬರುತ್ತದೆ. ಹತ್ತಿಗೆ ಹತ್ತು ಕುತ್ತು ಎನ್ನುವಂತೆ ಅದಕ್ಕೆ ರೋಗಬಾಧೆ ಕೂಡ ಅಧಿಕ. ಹೀಗಾಗಿ ರೈತರು ಹತ್ತಿ ಬೆಳೆಯುವುದನ್ನೇ ಕಡಿಮೆ ಮಾಡಿದ್ದಾರೆ’ ಎಂದು ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಹಾಗೂ ರಾಮಗೇರಿ ಗ್ರಾಮದ ಹತ್ತಿ ಬೆಳೆಗಾರ ಮಹೇಂದ್ರ ಬೆಟಗೇರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.