ADVERTISEMENT

ಗದಗ: ದೇವರನ್ನು ಮನೆಯಿಂದ ಹೊರಹಾಕಿದ ಪ್ರಗತಿಪರ ಕುಟುಂಬ

ಬುದ್ಧ, ಬಸವ, ಅಂಬೇಡ್ಕರ್‌ ತೋರಿದ ಬೆಳಕಿನ ಹಾದಿಯಲ್ಲಿ ನಡೆಯುವ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 15:17 IST
Last Updated 26 ಡಿಸೆಂಬರ್ 2024, 15:17 IST
   

ಗದಗ: ‘ದೇವರು ಎಂಬುದು ಊಹಾತ್ಮಕ ನಂಬಿಕೆ. ಅದು ಸತ್ಯ ಅಲ್ಲ. ಹಾಗಾಗಿ, ಮನೆಯಲ್ಲಿದ್ದ ಹುಲಿಗೆಮ್ಮ, ಯಲ್ಲಮ್ಮ ಸೇರಿದಂತೆ ಹಲವು ದೇವರ ಫೋಟೊಗಳನ್ನು ಹೊರಗೆ ಹಾಕಿದ್ದೇವೆ. ಅರಿವಿನ ಕೇಂದ್ರವಾದ ಬುದ್ಧ, ಬಸವ, ಅಂಬೇಡ್ಕರ್‌ ಅವರನ್ನು ಮನೆಯೊಳಗೆ ಪ್ರತಿಷ್ಠಾಪಿಸಿ, ಜ್ಞಾನದ ಬೆಳಕಿನಲ್ಲಿ ಮುನ್ನಡೆಯುವ ಸಂಕಲ್ಪ ಮಾಡಿದ್ದೇವೆ...’

ಹೀಗೆ ಹೇಳಿದ್ದು ಗದುಗಿನ ಅಂಬೇಡ್ಕರ್‌ ವಿಚಾರವಾದಿ ಶರೀಫ್‌ ಬಿಳೆಯಲಿ ದಂಪತಿ.

‘ಹೆಣ್ಣುಮಕ್ಕಳಿಗೆ ಸಮಾನತೆ ನೀಡದ ಮನುಸ್ಮೃತಿಯನ್ನು ಡಾ. ಬಿ.ಆರ್‌.ಅಂಬೇಡ್ಕರ್‌ ಸುಟ್ಟುಹಾಕಿದರು. ಅದೇ ದಿನದಂದು (ಡಿ.25) ನಾವು ಮನೆಯಲ್ಲಿನ ದೇವರ ಫೋಟೊಗಳನ್ನು ಹೊರಹಾಕಿದ್ದೇವೆ. ಇದಕ್ಕೆ ಪ್ರಗತಿಪರ ಚಿಂತಕರು, ಸಮಾನಮನಸ್ಕ ಗೆಳೆಯರು ಸಹಕಾರ ನೀಡಿದ್ದಾರೆ’ ಎಂದು ಶರೀಫ್‌ ಹೇಳಿದರು.

ADVERTISEMENT

‘ದೇವರಿಂದ ವೃತಾ ಖರ್ಚು. ನಮಗೆ ಶಿಕ್ಷಣ, ಅರಿವು, ಬಟ್ಟೆ ಮುಖ್ಯ. ನಮಗೆ ಈ ಅರಿವು ನೀಡಿದ ಜ್ಞಾನಿಗಳ ಹಾದಿಯಲ್ಲಿ ನಡೆಯುವ ನಿರ್ಧಾರ ಮಾಡಿದ್ದೇವೆ’ ಎಂದರು.

ಶರೀಫ್‌ ಪತ್ನಿ ಗಾಯತ್ರಿ ಮಾತನಾಡಿ, ‘ದೇವರು ಅಂದರೆ ಬಂಧನ. ಮೂಢನಂಬಿಕೆಗಳಿಂದ ಬದಲಾವಣೆ ಅಸಾಧ್ಯ. ಮನುಸ್ಮೃತಿ ಸುಟ್ಟ ದಿನದಂದು ದೇವರನ್ನು ಹೊರಗಿಟ್ಟಿದ್ದೇವೆ. ಮನಸ್ಸು ನಿರಾಳವಾಗಿದೆ’ ಎಂದರು.

ಪ್ರಗತಿಪರ ಚಿಂತಕ ಬಸವರಾಜ ಸೂಳಿಭಾವಿ ಮಾತನಾಡಿ, ‘ವೈದಿಕಶಾಹಿ ಈ ಸಮಾಜವನ್ನು ನಿರಂತರವಾಗಿ ಕತ್ತಲಲ್ಲಿ ಇಡುವ ಪ್ರಯತ್ನ ಮಾಡುತ್ತ ಬಂದಿದೆ. ಆ ಕತ್ತಲನ್ನು ದಾಟಿ ಬರುವ ಪ್ರಯತ್ನವನ್ನು ಅನೇಕ ವಿಚಾರವಂತರು ಮಾಡಿದ್ದಾರೆ. ಅದರಂತೆ, ಶರೀಫ್‌ ದಂಪತಿ ದೇವರು ಎಂಬ ನಂಬಿಕೆಗಳನ್ನು ಕಳಚಿಕೊಂಡು ಬೆಳಕಿನತ್ತ ಬರುವ ತೀರ್ಮಾನ ಮಾಡಿರುವುದು ಉತ್ತಮ ವಿಚಾರ’ ಎಂದರು.

‘ಈಗ ದೇವಸ್ಥಾನದಲ್ಲಿ ದೇವರ ಬಳಿ ಹೋಗಲು ದರಪಟ್ಟಿ ಇದೆ. ದೇವರು, ಧರ್ಮ ಎಂಬುದು ಜನರನ್ನು ಆರ್ಥಿಕವಾಗಿ ಶೋಷಣೆ ಮಾಡುವಂತಹ ವಿಧಾನ. ಆ ಮೂಲಕವಾಗಿ ಪುರೋಹಿತಶಾಹಿ ವರ್ಗ ಸುಭೀಕ್ಷವಾಗಿದೆ. ಆರ್ಥಿಕವಾಗಿ ಸದೃಢವಾಗಿದೆ. ಈ ದೇಶದಲ್ಲಿ 33 ಕೋಟಿ ದೇವರುಗಳಿವೆ ಎನ್ನುತ್ತಾರೆ. ಅಷ್ಟು ದೇವರಿಗಳಿದ್ದರೂ ಈ ದೇಶದ ಜನರ ಹಸಿವು ಹೋಗಿಲ್ಲ. ಜನ ಸಂಕಷ್ಟದಲ್ಲಿದ್ದಾರೆ. ರೋಗ ರುಜಿನಗಳಿಂದ ಬಳಲುತ್ತಿದ್ದಾರೆ. 33 ಕೋಟಿ ದೇವರುಗಳಿಗಿಂತ ನಮಗೆ ಆರೋಗ್ಯ ಕಾಪಾಡಿಕೊಳ್ಳಲು ಆಸ್ಪತ್ರೆಗಳು ಬೇಕು. ಹಸಿವಿನಿಂದ ದೂರಾಗಲು ಅನ್ನ ಬೇಕು. ಆ ನಿಟ್ಟಿನಲ್ಲಿ ಶರೀಫ್‌ ದಂಪತಿ ಬುದ್ಧ, ಬಸವ, ಅಂಬೇಡ್ಕರ್‌ ದಾರಿಯನ್ನು ಹಿಡಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.