ADVERTISEMENT

ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ: ₹18.26 ಕೋಟಿಯ ಮಾಸ್ಟರ್ ಪ್ಲ್ಯಾನ್ ಸಿದ್ಧ

ಒಂದು ಜಿಲ್ಲೆ ಒಂದು ತಾಣ: ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 30 ಜೂನ್ 2025, 0:15 IST
Last Updated 30 ಜೂನ್ 2025, 0:15 IST
ಉದ್ದೇಶಿತ ನಕ್ಷತ್ರ ಅಧ್ಯಯನ ಗೋಪುರ ನಿರ್ಮಾಣದ ಎಐ ಚಿತ್ರ
ಉದ್ದೇಶಿತ ನಕ್ಷತ್ರ ಅಧ್ಯಯನ ಗೋಪುರ ನಿರ್ಮಾಣದ ಎಐ ಚಿತ್ರ   

ಗದಗ: ‘ಒಂದು ಜಿಲ್ಲೆ ಒಂದು ತಾಣ’ ಪರಿಕಲ್ಪನೆ ಅಡಿ ಕ‌ಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ ಉತ್ತೇಜನಕ್ಕೆ ಗದಗ ಅರಣ್ಯ ಇಲಾಖೆ ₹18.26 ಕೋಟಿ ಮೊತ್ತದ  ಮಾಸ್ಟರ್‌ ‍ಪ್ಲ್ಯಾನ್‌ ಸಿದ್ಧಪಡಿಸಿದೆ.

ಕಳೆದ ಸಾಲಿನ ಬಜೆಟ್‌ನಲ್ಲಿ ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಅದರಂತೆ ಕಪ್ಪತಗುಡ್ಡದಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ, ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸಲು ಕೈಗೊಳ್ಳಬೇಕಾದ ಕಾಮಗಾರಿ ಪಟ್ಟಿ ಹಾಗೂ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅರಣ್ಯ ಇಲಾಖೆಯನ್ನು ಕೋರಿತ್ತು.

ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯು ವನ್ಯಜೀವಿಗಳ ಸುಗಮ ಸಂಚಾರ ಮತ್ತು ಆವಾಸ ಸ್ಥಾನಕ್ಕೆ ಧಕ್ಕೆ ಆಗದಂತೆ ನಿಯಮಾವಳಿಗಳ ಪ್ರಕಾರ ಯೋಜನೆ ಸಿದ್ಧಪಡಿಸಿತ್ತು. ಇದಕ್ಕೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಿಂದ ಅನುಮೋದನೆ ಸಿಕ್ಕಿದ್ದು, ಅನುದಾನ ಹಂಚಿಕೆ ಕೋರಿ ಪ್ರವಾಸೋದ್ಯಮ ಇಲಾಖೆಗೆ ಸಲ್ಲಿಕೆಯಾಗಿದೆ.

ADVERTISEMENT

ಕೆಲ ರಾಜ್ಯಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ‘ಒಂದು ಜಿಲ್ಲೆ ಒಂದು ತಾಣ’ (ಒನ್‌ ಡಿಸ್ಟ್ರಿಕ್ಟ್‌ ಒನ್‌ ಡೆಸ್ಟಿನೇಷನ್‌) ಪರಿಕಲ್ಪನೆ ಯಶಸ್ವಿಯಾಗಿದೆ. ಅದರಂತೆ, ಗದಗ ಜಿಲ್ಲೆಯ ಅಸ್ಮಿತೆಯಂತಿರುವ ಕಪ್ಪತಗುಡ್ಡ ಗದಗ ತಾಲ್ಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲ್ಲೂಕಿನ ತುಂಗಭದ್ರಾ ನದಿ ಹಾದು ಹೋಗುವ ಸಿಂಗಟಾಲೂರಿನವರೆಗೆ ವ್ಯಾಪಿಸಿದ್ದು, ಕಪ್ಪತಗುಡ್ಡ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ವರದಿ ರೂಪಿಸಲಾಗಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಯಾವೆಲ್ಲ ಸೌಕರ್ಯಗಳು ಇರಲಿವೆ?:

ಯೋಜನೆ ಅನುಸಾರ ಗಾಳಿಗುಂಡಿ ಬಸವಣ್ಣ, ಕಪ್ಪತಮಲ್ಲೇಶ್ವರ ದೇವಸ್ಥಾನ ಹಾಗೂ ದೈವಿವನ ಕೇಂದ್ರೀಕರಿಸಿಕೊಂಡು ಸೈಟ್‌ ಎ, ಬಿ, ಸಿ ಎಂದು ವರ್ಗೀಕರಿಸಿ, ಅಲ್ಲಿ ವಿವಿಧ ಸೌಕರ್ಯ ಕಲ್ಪಿಸಲು ಯೋಜಿಸಲಾಗಿದೆ. ಸೈಟ್‌ ಎ ಭಾಗದಲ್ಲಿ ಪ್ರವೇಶದ್ವಾರ, ಮಾಹಿತಿ ಕೇಂದ್ರ, ಚಾರಣ ಮಾರ್ಗಗಳು, ಔಷಧೀಯ ಸಸ್ಯಗಳ ಪ್ರವಾಸೋದ್ಯಮ, ಗೋಲ್ಡ್‌ ಟೂರಿಸಂ, ವ್ಯೂವ್‌ ಪಾಯಿಂಟ್‌, ಸಾಹಸಕ್ರೀಡೆಗಳಿಗೆ ಬೇಕಿರುವ ಸೌಕರ್ಯ ಸೃಷ್ಟಿಯಾಗಲಿದೆ.

ಸೈಟ್‌ ಬಿ ಭಾಗದಲ್ಲಿ ವನ್ಯಜೀವಿ ಮತ್ತು ಪ್ರಾಕೃತಿಕ ಮಾಹಿತಿಕೇಂದ್ರ, ಔಷಧೀಯ ಸಸ್ಯಗಳ ದೈವಿವನ ನಿರ್ಮಾಣ, ಔಷಧೀಯ ಸಸ್ಯಗಳ ಹೆಸರು, ಅದರ ಇನ್ನಿತರ ವೈಜ್ಞಾನಿಕ ಮಾಹಿತಿ ನೀಡುವ ಡಿಜಿಟಲ್‌ ಡಿಸ್‌ಪ್ಲೇ ವ್ಯವಸ್ಥೆ ಮಾಡಲಾಗುತ್ತದೆ. ಜತೆಗೆ ಕಪ್ಪತಗುಡ್ಡದ ಸುತ್ತಮುತ್ತ ನಾಟಿ ವೈದ್ಯರಿದ್ದು, ಚಿಕಿತ್ಸೆ ನೀಡಲು ಬೇಕಿರುವ ಸೌಕರ್ಯ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಸೈಟ್‌ ಸಿ ಭಾಗದಲ್ಲಿ ನೇಚರ್‌ ಕ್ಯಾಂಪ್‌ಗಳು, ವಸತಿ ವ್ಯವಸ್ಥೆ ಇರಲಿದೆ. ಇವೆಲ್ಲವೂ ಎಂಜಿನಿಯರಿಂಗ್‌ ವುಡ್‌ಬ್ಯಾಂಬು ಮೂಲಕ ನಿಸರ್ಗಸ್ನೇಹಿ ವ್ಯವಸ್ಥೆಯಲ್ಲಿ ನಿರ್ಮಾಣಗೊಳ್ಳಲಿವೆ. ಜತೆಗೆ ಕಾಡಿನಲ್ಲಿ ಕುಳಿತು ನಕ್ಷತ್ರಗಳ ಅಧ್ಯಯನ ಮಾಡಲು ನೆರವಾಗುವಂತೆ ಐದು ಅಂತಸ್ತಿನ ನಕ್ಷತ್ರ ಅಧ್ಯಯನ ಟವರ್‌ ನಿರ್ಮಾಣ ಹಾಗೂ ರೋಮಾಂಚನಕಾರಿ ಮೈನಿಂಗ್‌ ಟೂರಿಸಂಗೂ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. 

ಗೋಲ್ಡ್‌ ಟೂರಿಸಂನ ಎಐ ಚಿತ್ರ
ಮಾಸ್ಟರ್‌ ಪ್ಲ್ಯಾನ್ ಡಿಪಿಆರ್‌ ಅನುಮೋದನೆ ಹಂತದಲ್ಲಿದೆ. ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಚಾರಣ ಮಾರ್ಗ ನಿರ್ಮಾಣ ಸೇರಿದಂತೆ ಇಲಾಖೆಯಿಂದ ಏನು ಮಾಡಬೇಕೋ ಅದನ್ನು ಮಾಡಲಾಗುತ್ತಿದೆ
ಸಂತೋಷ್‌ ಕುಮಾರ್‌, ಡಿಸಿಎಫ್‌ ಗದಗ
ಪ್ರವಾಸಿಗರ ಅನುಕೂಲಕ್ಕಾಗಿ ಕಪ್ಪತಗುಡ್ಡಕ್ಕೆ ಪ್ರತ್ಯೇಕವಾದ ವೆಬ್‌ಸೈಟ್‌ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗುವುದು. ಜತೆಗೆ ಪ್ರವಾಸಿಗರು ಸುತ್ತಮುತ್ತಲಿನ ತಾಣಗಳನ್ನು ಅನ್ವೇಷಿಸಲು ನೆರವಾಗುವಂತಹ ಸೌಲಭ್ಯ ಕಲ್ಪಿಸಲಾಗುವುದು
ಮಂಜುನಾಥ ಮೇಗಲಮನಿ, ಆರ್‌ಎಫ್‌ಒ ಮುಂಡರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.