
ಮುಂಡರಗಿ: ಶತಮಾನದ ಹಿಂದೆ ಒಂದು ಸಣ್ಣ ಸಂಸ್ಕೃತ ಪಾಠ ಶಾಲೆಯಿಂದ ಆರಂಭಗೊಂಡ ಪಟ್ಟಣದ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯು ಇಂದು ಕೆ.ಜಿ.ಯಿಂದ ಪಿ.ಜಿ.ವರೆಗೆ ಹಲವಾರು ಶಾಲಾ, ಕಾಲೇಜುಗಳನ್ನು ಆರಂಭಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಬಹುದೊಡ್ಡ ಶೈಕ್ಷಣಿಕ ಕ್ರಾಂತಿ ಮಾಡಿದೆ.
ಜಗದ್ಗುರು ಅನ್ನದಾನೀಶ್ವರ ಮಠದ ಹಿಂದಿನ ಶ್ರೀಗಳ ಆಶೀರ್ವಾದದಿಂದ ಪಟ್ಟಣದ ಹಲವಾರು ಹಿರಿಯ ಮುಖಂಡರು ಪಟ್ಟಣದಲ್ಲಿ ಶ್ರೀಮೃಡಗಿರಿ ವಿದ್ಯಾ ಸಮಿತಿ ಸ್ಥಾಪಿಸಿಕೊಂಡು 1924ರಲ್ಲಿ ಒಂದು ಇಂಗ್ಲಿಷ್ ಮಾಧ್ಯಮ ಶಾಲೆ ಹಾಗೂ 1948ರಲ್ಲಿ ಒಂದು ಪ್ರೌಢಶಾಲೆಯನ್ನು ತೆರೆದರು. ಅಂದಿನ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರು ನೂತನ ಶಾಲಾ ಕಟ್ಟಡಕ್ಕೆ ಅಡಿಗಲ್ಲು ಹಾಕಿದರು. 1958ರಲ್ಲಿ ಅಂದಿನ ರಾಜ್ಯಪಾಲ ಜಯಚಾಮರಾಜೇಂದ್ರ ಒಡೆಯರ್ ನೂತನ ಕಟ್ಟಡವನ್ನು ಉದ್ಘಾಟಿಸಿದ್ದರು. ಮಠದ ನವಮ ಪೀಠಾಧಿಪತಿ ವೆಂಕಟಾಪುರ ಅಜ್ಜನವರು ಶಾಲೆಯನ್ನು ಮುನ್ನಡೆಸಿದರು.
ಹಲವು ಏಳು, ಬೀಳುಗಳ ಕಾರಣದಿಂದ ಶಾಲೆಗಳನ್ನು ನಿರ್ವಹಿಸುವುದು ಪಟ್ಟಣದ ಹಿರಿಯರಿಗೆ ಕಷ್ಟವಾಯಿತು. ನಂತರ ಪೀಠಾಧಿಪತಿ ವೆಂಕಟಾಪುರ ಅಜ್ಜನವರಿಗೆ ವಿದ್ಯಾ ಸಮಿತಿಯನ್ನು ಹಸ್ತಾಂತರಿಸಲಾಯಿತು. ಅಂದಿನಿಂದ ಮೃಡಗಿರಿ ವಿದ್ಯಾ ಸಮಿತಿಯು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಎಂದು ಪುನರ್ ನಾಮಕರಣಗೊಂಡಿತು.
ಮುಂದೆ 1969ರಲ್ಲಿ ಮಠದ ದಶಮ ಪೀಠಾಧಿಪತಿಗಳಾದ ಇಂದಿನ ಜಗದ್ಗುರು ನಾಡೋಜ ಅನ್ನದಾನೀಶ್ವರ ಮಹಾಶಿವಯೋಗಿಗಳು ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಸಂಪೂರ್ಣ ನೇತೃತ್ವ ವಹಿಸಿಕೊಂಡರು. ಈ ಭಾಗದಲ್ಲಿ ಶಾಲೆಗಳಿಲ್ಲದೇ ಎಲ್ಲ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಮನಗಂಡ ಅವರು ಹಲವಾರು ಶಾಲೆ, ಕಾಲೇಜು ಹಾಗೂ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸುವ ಮೂಲಕ ಈ ಭಾಗದಲ್ಲಿ ಬಹುದೊಡ್ಡ ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದರು.
ಅಂದು ಶ್ರೀಗಳು ಮನಸ್ಸು ಮಾಡಿದ್ದರೆ ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜುಗಳನ್ನು ತೆರೆಯಬಹುದಾಗಿತ್ತು. ಆದರೆ, ನಾಡಿನ ಬಡ ಮಕ್ಕಳಿಗೆ ವಿದ್ಯಾದಾನ ನೀಡುವ ಉದ್ದೇಶದಿಂದ ಅನ್ನದಾನೀಶ್ವರ ಶ್ರೀಗಳು ಗ್ರಾಮೀಣ ಭಾಗಗಳಲ್ಲಿ ಶಾಲೆ, ಕಾಲೇಜುಗಳನ್ನು ತೆರೆದರು. ಜೊತೆಗೆ ಉಚಿತ ಪ್ರಸಾದ ನಿಲಯಗಳನ್ನು ಆರಂಭಿಸಿದರು.
ಅನ್ನದಾನೀಶ್ವರ ಶ್ರೀಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು
ಈ ಭಾಗದಲ್ಲಿ ಶಾಲಾ ಕಾಲೇಜುಗಳು ಇರಲಿಲ್ಲವಾದ್ದರಿಂದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗತೊಡಗಿದರು. ಇದನ್ನು ಮನಗಂಡ ಅನ್ನದಾನೀಶ್ವರ ಶ್ರೀಗಳು 1969ರಲ್ಲಿ ಮಹಾಬಳೇಶ್ವರಪ್ಪ ಡಂಬಳ ಅವರ ಸಹಕಾರದೊಂದಿಗೆ ಪಟ್ಟಣದಲ್ಲಿ ಎಂ.ಎಸ್.ಡಂಬಳ ಬಾಲಕಿಯರ ಪ್ರೌಢಶಾಲೆ ಆರಂಭಿಸಿದರು. 1970ರಲ್ಲಿ ಸ್ವತಂತ್ರ ಪಿಯು ಕಾಲೇಜು ಆರಂಭಿಸಿದರು.
ಬಡ ವಿದ್ಯಾರ್ಥಿಗಳು ಪದವಿ ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಅರಿತ ಶ್ರೀಗಳು ಪಟ್ಟಣದ ಮಹಾದಾನಿ ಲಿಂ.ಅಂದಾನಪ್ಪ ಬೆಲ್ಲದ ಅವರ ನೆರವಿನಿಂದ ಪಟ್ಟಣದಲ್ಲಿ ಕ.ರಾ.ಬೆಲ್ಲದ ಪದವಿ ಕಾಲೇಜು ಆರಂಭಿಸಿದರು. ಇಂದು ಅಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೂಡ ಕಾರ್ಯನಿರ್ವಹಿಸುತ್ತಿದೆ. ಪದವಿ ನಂತರ ವಿದ್ಯಾರ್ಥಿಗಳು ಶೈಕ್ಷಣಿಕ ತರಬೇತಿಯಿಂದ ವಂಚಿತರಾಗಬಾರದು ಎಂದು ಪಟ್ಟಣದ ಹೊರವಲಯದಲ್ಲಿ ಕೋಟ್ಯಂತರ ರೂಪಾಯಿ ಖರ್ಚುಮಾಡಿ ಸುಸಜ್ಜಿತ ಶಿಕ್ಷಣ ಮಹಾವಿದ್ಯಾಲಯ ಸ್ಥಾಪಿಸಿದರು.
ದಾಂಡೇಲಿಯಲ್ಲಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಿದರು. 1982ರಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ತಡಹಾಳ ಗ್ರಾಮದಲ್ಲಿ ಪ್ರೌಢಶಾಲೆ ಹಾಗೂ ಶಿರಹಟ್ಟಿ ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಪ್ರೌಢಶಾಲೆಗಳು ಹಿರೇವಡ್ಡಟ್ಟಿ ಗ್ರಾಮದಲ್ಲಿ ಕೆ.ಕೆ.ನಂದಿಕೋಳ ಪ್ರೌಢಶಾಲೆಗಳನ್ನು ತೆರೆದರು. 1983ರಲ್ಲಿ ಕೊಪ್ಪಳ ತಾಲ್ಲೂಕಿನ ಗೊಂಡಬಾಳ ಗ್ರಾಮದಲ್ಲಿ 1985ರಲ್ಲಿ ಗದಗ ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಹಾಗೂ 1986ರಲ್ಲಿ ವಿಜಯಪುರ ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದಲ್ಲಿ ಪ್ರೌಢಶಾಲೆಗಳನ್ನು ತೆರೆದು ಅಲ್ಲಿಯ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.