ADVERTISEMENT

ಲಕ್ಷ್ಮೇಶ್ವರ: ರೈತನ ಕೈ ಹಿಡಿದ ತರಕಾರಿ ಕೃಷಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 5:56 IST
Last Updated 6 ಸೆಪ್ಟೆಂಬರ್ 2024, 5:56 IST
ಗಲಾಟಿ ಹೂವಿನ ತೋಟದಲ್ಲಿ ಲಕ್ಷ್ಮೇಶ್ವರದ ರೈತ ರಾಮನಗೌಡ ದುರುಗನಗೌಡ್ರ
ಗಲಾಟಿ ಹೂವಿನ ತೋಟದಲ್ಲಿ ಲಕ್ಷ್ಮೇಶ್ವರದ ರೈತ ರಾಮನಗೌಡ ದುರುಗನಗೌಡ್ರ   

ಲಕ್ಷ್ಮೇಶ್ವರ: ಅಲ್ಪಸ್ವಲ್ಪ ಭೂಮಿಯಲ್ಲೇ ಕಷ್ಪಪಟ್ಟು, ವಿವಿಧ ತರಕಾರಿಗಳನ್ನು ಬೆಳೆದು ಸೈ ಎನಿಸಿಕೊಂಡವರು ತಾಲ್ಲೂಕಿನ ಗುಲಗಂಜಿಕೊಪ್ಪ ಗ್ರಾಮದ ರಾಮನಗೌಡ ಶಂಕರಗೌಡ ದುರುಗನಗೌಡ್ರ.

ಮೂಲತಃ ಲಕ್ಷ್ಮೇಶ್ವರ ತಾಲ್ಲೂಕು ಗುಲಗಂಜಿಕೊಪ್ಪದ ನಿವಾಸಿಯಾದ ರಾಮನಗೌಡ್ರ ಈಗ ಲಕ್ಷ್ಮೇಶ್ವರದ ರಂಭಾಪುರಿ ನಗರದ ಆಶ್ರಯ ಕಾಲೊನಿಯಲ್ಲಿ ವಾಸವಾಗಿದ್ದಾರೆ.

ಲಕ್ಷ್ಮೇಶ್ವರದ ಮಾನ್ವಿ ಎಂಬುವವರಿಗೆ ಸೇರಿದ ಆರು ಎಕರೆ ತೋಟವನ್ನು ವರ್ಷಕ್ಕೆ ₹50 ಸಾವಿರದಂತೆ ಇವರು ಲಾವಣಿ ಆಧಾರದ ಮೇಲೆ ಪಡೆದುಕೊಂಡು ವಿವಿಧ ತರಕಾರಿ, ಗಲಾಟೆ ಹೂವು ಬೆಳೆಯುತ್ತಿದ್ದಾರೆ.

ADVERTISEMENT

ಹದಿನೈದು ಗುಂಟೆಯಲ್ಲಿ ಗಲಾಟಿ ಹೂ, 15 ಗುಂಟೆಯಲ್ಲಿ ಬದನೆಕಾಯಿ, ಒಂದು ಎಕರೆಯಲ್ಲಿ ಸವತೆಕಾಯಿ, ಒಂದು ಎಕರೆಯಲ್ಲಿ ಟೊಮೆಟೊ ಕೃಷಿ ಮಾಡುತ್ತಿದ್ದಾರೆ.

ಸುರೇಶ ಉಂಕಿ ಅವರ ಹೊಲವನ್ನು ಲಾವಣಿ ಹಾಕಿಸಿಕೊಂಡು ಅದರಲ್ಲಿ ಕ್ಯಾಬೀಜ್ ಬೆಳೆಯುತ್ತಿದ್ದಾರೆ. ಈವರೆಗೆ ಇವರು ₹2 ಲಕ್ಷ ಖರ್ಚು ಮಾಡಿದ್ದಾರೆ. ಬದನೆಕಾಯಿ ಸಸಿಗಳನ್ನು ತಾವೇ ಬೆಳೆಸಿ ಅವುಗಳನ್ನು ನಾಟಿ ಮಾಡಿದ್ದು, ಇನ್ನು ಹದಿನೈದು ದಿನಗಳಲ್ಲಿ ಇಳುವರಿ ಆರಂಭವಾಗಲಿದೆ.

ಈಗಾಗಲೇ ಗಲಾಟಿ ಹೂ ಹಾಗೂ ಸವತೆಕಾಯಿಗಳನ್ನು ಪ್ರತಿದಿನ ಮಾರಾಟ ಮಾಡುತ್ತಿದ್ದಾರೆ.
ಸದ್ಯ ಸವತೆ ಹಾಗೂ ಹೂವಿಗೆ ಉತ್ತಮ ಬೆಲೆ ಇದ್ದು, ರೈತನ ಪಾಲಿಗೆ ವರದಾನವಾಗಿದೆ.

ಕೆ.ಜಿ ಹೂವಿನ ಬೆಲೆ ₹30 ಇದೆ. ಹಬ್ಬ ಹರಿದಿನಗಳಲ್ಲಿ ದರ ಮತ್ತಷ್ಟು ಹೆಚ್ಚಾಗುತ್ತದೆ.

ಬೆಳೆಗಳಿಗೆ ವರುಣರಾಯನ ಶಾಪ: ಈ ವರ್ಷ ಸತತ ಎರಡು ತಿಂಗಳವರೆಗೆ ನಿರಂತರವಾಗಿ ಮಳೆ ಸುರಿಯಿತು. ಇದು ತರಕಾರಿ ಕೃಷಿ ಮೇಲೆ ನೇರ ಪರಿಣಾಮ ಬೀರಿದೆ. ಮಳೆಯಿಂದಾಗಿ ಟೊಮೆಟೊ ಹಣ್ಣು ಗಿಡದಲ್ಲಿಯೇ ಕೊಳೆಯಿತು. ಅಲ್ಲದೆ ಉತ್ತಮ ದರವೂ ಸಿಗಲಿಲ್ಲ. ಇದರಿಂದಾಗಿ ನಷ್ಟ ಅನುಭವಿಸಿದ ಅವರು ಟೊಮೆಟೊ ಬಳ್ಳಿಯನ್ನು ಕಿತ್ತು ಹಾಕಿದ್ದಾರೆ. ಸವತೆಕಾಯಿ ಮತ್ತು ಗಲಾಟೆ ಹೂವಿನಿಂದ ಆದಾಯ ಕಂಡುಕೊಳ್ಳುತ್ತಿದ್ದಾರೆ.

ಒಂದು ವರ್ಷದಲ್ಲಿ ತರಕಾರಿ ಹಾಗೂ ಹೂ ಮಾರಾಟದಿಂದ ಈವರೆಗೆ ₹70 ಸಾವಿರ ಆದಾಯ ಇವರ ಕೈ ಸೇರಿದೆ. ತೋಟದಲ್ಲಿರುವ ತೆಂಗಿನ ಮರಗಳಿಂದಲೂ ಆದಾಯ ಬರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಎರಡು ವಾರಗಳಲ್ಲಿ ಬದನೆಕಾಯಿ ಹಾಗೂ ಕ್ಯಾಬೀಜ್ ಕೊಯ್ಲಿಗೆ ಬರಲಿದೆ.

ಈ ವರ್ಷ ಮಳಿ ಬಾಳ ಆತ್ರೀ. ಟೊಮೆಟೊದಿಂದ ಲಾಭ ಆಗಲಿಲ್ಲ. ಆದ್ರ ಸವತೆಕಾಯಿ ಗಲಾಟಿ ಹೂವಿನಿಂದ ಸ್ವಲ್ಪ ಅನುಕೂಲ ಆಗೇತ್ರೀ
ರಾಮನಗೌಡ ದುರುಗನಗೌಡ್ರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.