ADVERTISEMENT

ದೇಶದಲ್ಲಿ ಅನ್ನದಾತನಿಗೆ ದೈವಿಕ ಸ್ಥಾನ

ಮಾಗಡಿಹಳ್ಳಿ: ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶಿವಾನಂದ ಪೋಶೆಟ್ಟಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 3:02 IST
Last Updated 24 ಡಿಸೆಂಬರ್ 2021, 3:02 IST
ಶಿರಹಟ್ಟಿ ತಾಲ್ಲೂಕಿನ ಮಾಗಡಿಯಲ್ಲಿ ಎಸ್‌ಬಿಐ ಶಿರಹಟ್ಟಿ ಶಾಖೆ ವತಿಯಿಂದ ನಡೆದ ರೈತ ದಿನಾಚರಣೆಯಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು
ಶಿರಹಟ್ಟಿ ತಾಲ್ಲೂಕಿನ ಮಾಗಡಿಯಲ್ಲಿ ಎಸ್‌ಬಿಐ ಶಿರಹಟ್ಟಿ ಶಾಖೆ ವತಿಯಿಂದ ನಡೆದ ರೈತ ದಿನಾಚರಣೆಯಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು   

ಗದಗ: ‘ರೈತ ದೇಶದ ಬೆನ್ನೆಲುಬು. ನಾವು ಪ್ರತಿನಿತ್ಯ ಸೇವಿಸುವ ಆಹಾರದ ಹಿಂದೆ ರೈತರ ಪರಿಶ್ರಮವಿದೆ. ಈ ಕಾರಣಕ್ಕಾಗಿಯೇ ಭಾರತೀಯ ಸಂಸ್ಕೃತಿಯಲ್ಲಿ ರೈತರಿಗೆ ದೇವರ ಸ್ಥಾನ ನೀಡಲಾಗಿದೆ’ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಶಿರಹಟ್ಟಿ ಶಾಖೆಯ ಡೆಪ್ಯುಟಿ ಮ್ಯಾನೇಜರ್‌ ಶಿವಾನಂದ ಪೋಶೆಟ್ಟಿ ಹೇಳಿದರು.

ಶಿರಹಟ್ಟಿ ತಾಲ್ಲೂಕಿನ ಮಾಗಡಿಹಳ್ಳಿಯಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ ಶಿರಹಟ್ಟಿ ಶಾಖೆ ಹಾಗೂ ಗದಗ ಪ್ರಾದೇಶಿಕ ವ್ಯವಹಾರ ಕಚೇರಿಯ– 4ರ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಐದನೇ ಪ್ರಧಾನಮಂತ್ರಿಯಾಗಿದ್ದ ಚರಣ್‌ ಸಿಂಗ್‌ ಅವರ ಜನ್ಮ ದಿನವನ್ನೇ ದೇಶದಲ್ಲಿ ರೈತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ರೈತರ ಬಗ್ಗೆ ಅವರಿಗೆ ಇದ್ದಂತಹ ಅಪಾರ ಕಾಳಜಿಯಿಂದಾಗಿ ಅನೇಕ ರೈತ ಪರ ಕಾನೂನುಗಳು ಅನುಷ್ಠಾನಗೊಂಡವು. ಹೊಸ ಯೋಜನೆ ಹಾಗೂ ಆಲೋಚನೆಗಳ ಮೂಲಕ ಅವರು ರೈತ ಸಮುದಾಯದಲ್ಲಿ ಚಿರಸ್ಥಾಯಿಯಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ಗದುಗಿನ ಎಸ್‌ಬಿಐ ಆರ್‌ಬಿಒನ ಮುಖ್ಯ ವ್ಯವಸ್ಥಾಪಕ ಮಹಾಂತೇಶ್‌ ಕೆ. ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ರೈತರಿಗೆ ತಿಳಿಸುವ ಕೆಲಸವನ್ನು ಬ್ಯಾಂಕ್‌ ನಿರಂತರವಾಗಿ ಮಾಡುತ್ತ ಬಂದಿದೆ. ರೈತರು ಬ್ಯಾಂಕ್‌ನಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು’ ಎಂದು ಹೇಳಿದರು.

ಎಸ್‌ಬಿಐ ಶಿರಹಟ್ಟಿ ಶಾಖೆ ವ್ಯವಸ್ಥಾಪಕ ಭಾಗವತ್‌ ಗವಿತ್ ಮಾತನಾಡಿ, ನಾವು ಕೂಡ ರೈತ ಕುಟುಂಬದಿಂದ ಬಂದವರು. ರೈತರ ಕಷ್ಟ ಸುಖಗಳ ಬಗ್ಗೆ ಚೆನ್ನಾಗಿ ಅರಿವಿದೆ. ರೈತರ ಪ್ರಗತಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಒದಗಿಸಿಕೊಡಲಾಗುವುದು ಎಂದು ಹೇಳಿದರು.

ಪ್ರಗತಿಪರ ರೈತ ಬಿ.ಡಿ.ಪಲ್ಲೇದ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ರೈತರು ಮತ್ತು ಬ್ಯಾಂಕ್‌ಗಳ ನಡುವಿನ ಬಾಂಧವ್ಯ ಉತ್ತಮಗೊಳ್ಳುತ್ತಿದೆ. ಸೌಲಭ್ಯಗಳ ಬಗ್ಗೆ ತಿಳಿಸಲು ರೈತರ ಬಳಿಗೆ ಬ್ಯಾಂಕ್‌ ಸಿಬ್ಬಂದಿಯೇ ಬರುತ್ತಿರುವುದು ಒಳ್ಳೆಯ ಬೆಳೆವಣಿಗೆ’ ಎಂದು ಹೇಳಿದರು.

ರೈತ ಮುಖಂಡರಾದ ನಾಗರಾಜ ಕುಲಕರ್ಣಿ, ಗುರುನಾಥ ದಾನಪ್ಪನವರ ಮಾತನಾಡಿದರು. ಸಭಾ ಕಾರ್ಯಕ್ರಮದ ನಂತರ 25ಕ್ಕೂ ಹೆಚ್ಚು ಮಂದಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ರೈತರಾದ ಫಕೀರಡ್ಡಿ ಮುಲ್ಲರ್‌, ದುರ್ಗಪ್ಪ ತಲವಾರ್‌, ಮಹದೇವಪ್ಪ ಗಾಣಿಗೇರ, ಗೋಪಾಲ ಭರಮನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.