ADVERTISEMENT

ಬಸವಾದಿ ಶರಣರ ಸಮಾನತೆ ಬಹಳ ಮುಖ್ಯ: ತೋಂಟದ ಸಿದ್ಧರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 5:31 IST
Last Updated 15 ಫೆಬ್ರುವರಿ 2026, 5:31 IST
ಗದಗ ನಗರದ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು
ಗದಗ ನಗರದ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು   

ಗದಗ: ‘12ನೇ ಶತಮಾನದಲ್ಲಿ ಜನಸಾಮಾನ್ಯರ ಬದುಕು ಶೋಚನೀಯವಾಗಿತ್ತು. ಆಧುನಿಕ ಜಗತ್ತಿಗೆ ಬಸವಾದಿ ಶರಣರ ಕಾಯಕ ತತ್ವ, ದಾಸೋಹ ಮತ್ತು ಸಮಾನತೆ ಬಹಳ ಮುಖ್ಯವಾಗಿದೆ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದ ಆವರಣದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2,784ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದಿದೆ. ಶರಣರು 900 ವರ್ಷಗಳ ಹಿಂದೆಯೇ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ. ಆದರೆ, ಇನ್ನೂ ಮೇಲು ಕೀಳು ತಾರತಮ್ಯ ಮುಂದುವರಿದಿದೆ. ಸಾಮಾಜಿಕ ಅನಿಷ್ಟಗಳಿವೆ’ ಎಂದು ಬೇಸರ ವ್ಯಕ್ತಪಡಿಸಿದರು. 

ADVERTISEMENT

ಉಪನ್ಯಾಸಕ ಬಿ.ಐ.ಶಿರುಂದ ಮಾತನಾಡಿ, ‘ರಾಜರ ಕಾಲದಲ್ಲಿ ರಕ್ಷಣೆಗಾಗಿ ಕಾಲ್ದಳ, ನೌಕಾದಳ, ಗಜದಳ ನಿಂತಿರುತ್ತಿದ್ದವು. ಹಾಗೆಯೇ ಸಮಸಮಾಜದ ರಕ್ಷಣೆಗಾಗಿ ಅಂದು ಶರಣರು, ಇಂದು ಮಠಾಧೀಶರು, ಜಗದ್ಗುರುಗಳು ಅವಿರತವಾಗಿ ಪರಿಶ್ರಮಿಸುತ್ತಿದ್ದಾರೆ’ ಎಂದರು.

‘ತನ್ನನ್ನು ತಾನು ಅರಿತು, ಅಹಂಕಾರವನ್ನು ಮರೆತು, ನೈಜ ಬದುಕಿನ ವ್ಯಕ್ತಿತ್ವವೇ ಶರಣ. ಅತ್ಯಲ್ಪ ಅವಧಿಯಲ್ಲಿ ಸಮಾಜದಲ್ಲಿನ ಮೌಢ್ಯದಲ್ಲಿ ಬದಲಾವಣೆ ತರುವುದೇ ಕ್ರಾಂತಿ’ ಎಂದರು.

ಗುರುನಾಥ್ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ವಚನ ಸಂಗೀತ ಸೇವೆ ನಡೆಸಿಕೊಟ್ಟರು. ಮೇಘಾ ಚಂದಪ್ಪನವರ  ಧಾರ್ಮಿಕ ಗ್ರಂಥ ಪಠಿಸಿದರು. ಪೂಜಾ ಹೊನ್ನಳ್ಳಿ  ವಚನ ಚಿಂತನ ನಡೆಸಿಕೊಟ್ಟರು.  

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ ಹಾಗೂ ಶಿವಾನುಭವ ಸಮಿತಿಯ ಸಹಚೇರ್ಮನ್ ಶಿವಾನಂದ ಹೊಂಬಳ ಇದ್ದರು.

ಐ.ಬಿ.ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ತಾರತಮ್ಯ ಹೋಗಲಾಡಿಸಲು ಬಸವಣ್ಣನವರು ಇಷ್ಟಲಿಂಗ ದೀಕ್ಷೆ ಕೊಟ್ಟರು. ಮಹಿಳೆಯರಿಗೆ ಸ್ವಾತಂತ್ರ್ಯ ಕಲ್ಪಿಸಿಕೊಟ್ಟರು. ಅಂತರ್ಜಾತಿ ವಿವಾಹ ಮಾಡಿದರು. ಈ ಮೂಲಕ ತಾರತಮ್ಯ ರಹಿತ ಸಮಾಜ ನಿರ್ಮಾಣ ಮಾಡಿದರು
ಸಿದ್ಧರಾಮ ಸ್ವಾಮೀಜಿ ತೋಂಟದಾರ್ಯ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.