ADVERTISEMENT

ಗದಗ | ರೈತರತ್ತ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ: ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:06 IST
Last Updated 26 ನವೆಂಬರ್ 2025, 5:06 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಗದಗ: ‘ರೈತರ ಬೆಳೆಗಳನ್ನು ಬೆಂಬಲ ಬೆಲೆಗೆ ಖರೀದಿಸಲು ಖರೀದಿ ಕೇಂದ್ರ ತೆರೆದಿಲ್ಲ. ಆದರೆ, ಶಾಸಕರನ್ನು ಖರೀದಿ ಮಾಡಲು ಖರೀದಿ ಕೇಂದ್ರ ತೆರೆದಿದ್ದಾರೆ. ಬೆಂಗಳೂರಿನಲ್ಲಿ ಈಗಾಗಲೇ ಖರೀದಿ ಶುರುವಾಗಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಆರೋಪಿಸಿದರು.

‘ಹೆಸರು, ಮೆಕ್ಕೆಜೋಳ, ಕಬ್ಬು ಸೇರಿದಂತೆ ರೈತರು ಬೆಳೆದ ವಿವಿಧ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ರಾಜ್ಯದಾದ್ಯಂತ ಹೋರಾಟ ನಡೆಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಅಧಿಕಾರ ಲಾಲಸೆಯಿಂದ ರೈತರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ರೈತರು ಬೆಳೆದ ಬೆಳೆ ಖರೀದಿಸಲು ಕಾಂಗ್ರೆಸ್ ಸರ್ಕಾರ ತಯಾರಿಲ್ಲ. ರೈತರಿಗಾಗಿ ಹಣ ಇಲ್ಲ; ಆದರೆ, ಶಾಸಕರ ಖರೀದಿಗೆ ಅವರ ಬಳಿ‌ ಹಣ ಇದೆ. ಒಬ್ಬೊಬ್ಬ ಶಾಸಕನಿಗೆ ₹50 ಕೋಟಿ ಕೊಟ್ಟಿದಾರಂತೆ. ಎರಡೂ ಬಣದಿಂದ ಖರೀದಿ ಶುರುವಾಗಿದೆ. ಯಾವ ಪುರುಷಾರ್ಥಕ್ಕಾಗಿ ಸರ್ಕಾರ ನಡೆಸುತ್ತಿದ್ದೀರಿ’ ಎಂದು ಹರಿಹಾಯ್ದರು.

ADVERTISEMENT

‘ರಾಜ್ಯ ಸರ್ಕಾರದ ವಿರುದ್ಧ ನ.27 ಹಾಗೂ 28ರಂದು ರೈತ ಮೋರ್ಚಾ ವತಿಯಿಂದ ಹೋರಾಟ ನಡೆಸಲಾಗುವುದು’ ಎಂದರು.

ಆವರ್ತ ನಿಧಿ ಬಳಕೆ ಏಕಿಲ್ಲ?

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಕೇಂದ್ರ ಸರ್ಕಾರ ನ.13ರಂದೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಆದರೆ, ರಾಜ್ಯ ಸರ್ಕಾರ ಈ ವಿಷಯ ಮುಚ್ಚಿಟ್ಟು ಕೇಂದ್ರದಿಂದ ಅನುಮತಿ ಸಿಕ್ಕಿಲ್ಲ ಎಂದು ಆರೋಪಿಸಿ, ಖರೀದಿ ಕೇಂದ್ರ ಆರಂಭಿಸದೇ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಆರೋಪಿಸಿದರು.

ಮೆಕ್ಕೆಜೋಳ ಬೆಂಬಲ ಬೆಲೆ ನಿಗದಿಪಡಿಸಿದರೂ ಈವರೆಗೆ ಖರೀದಿ ಕೇಂದ್ರ ತೆರೆದಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ಈ ರೀತಿಯ ಬಿಕ್ಕಟ್ಟು ಎದುರಾದಾಗ ರಾಜ್ಯ ಸರ್ಕಾರ ಆವರ್ತ ನಿಧಿ ಬಳಸಿ ರೈತರ ಉತ್ಪನ್ನಗಳನ್ನು ಖರೀದಿಸಬೇಕು. ತದನಂತರ ಕೇಂದ್ರ ಸರ್ಕಾರದಿಂದ ಮರುಪಾವತಿ ಪಡೆಯಬಹುದು ಎಂದು ಹೇಳಿದರು.

‘ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಎಸ್ಎಪಿ ಹೊಸ ಕಾನೂನು ಜಾರಿ ಮಾಡಲಾಗಿತ್ತು. ರೈತ ಉತ್ಪನ್ನಗಳ ಬಗ್ಗೆ ಬಿಕ್ಕಟ್ಟು ಎದುರಾದಾಗ ಸಲಹಾತ್ಮಕ ಬೆಲೆ (ಅಡ್ವೆಸರಿ ಪ್ರೈಸ್‌) ನಿಗದಿ ಮಾಡುವ ನಿಯಮ ಜಾರಿ ಮಾಡಲಾಗಿತ್ತು. ಆದರೂ, ಈ ಕಾನೂನು ಪಾಲನೆ ಆಗುತ್ತಿಲ್ಲ. ಕಬ್ಬಿನಿಂದ ಹೊರ ಬರುವ ಇತರೆ ವಸ್ತುಗಳ ಮೇಲಿನ ಲಾಭದಲ್ಲೂ ರೈತರಿಗೆ ನೀಡಬೇಕು ಎಂಬ ನಿಯಮ ಕೂಡ ಆ ಕಾನೂನಿನಲ್ಲಿ ಇದೆ. ಕಾಂಗ್ರೆಸ್ ಸರ್ಕಾರ ಇದ್ಯಾವುದನ್ನು ಪಾಲನೆ ಮಾಡುತ್ತಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.