ADVERTISEMENT

ದಂತ ವೈದ್ಯನ ‘ಕಾಡು ಕೃಷಿ’ ಪ್ರೇಮ’: 10.34 ಎಕರೆ ಜಮೀನಲ್ಲಿವೆ 15 ಸಾವಿರ ಗಿಡಗಳು

ಕಾಡಾಯಿತು 10.34 ಎಕರೆ ಜಮೀನು– ವಿವಿಧ ತಳಿಯ 15 ಸಾವಿರ ಗಿಡಗಳು

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
ಡಾ. ಪ್ರದೀಪ್‌ ಉಗಲಾಟದ ಅವರ ಜಮೀನಿನಲ್ಲಿ ಬೆಳೆದಿರುವ ಮರಗಿಡಗಳು
ಡಾ. ಪ್ರದೀಪ್‌ ಉಗಲಾಟದ ಅವರ ಜಮೀನಿನಲ್ಲಿ ಬೆಳೆದಿರುವ ಮರಗಿಡಗಳು   

ಗದಗ: ನಗರದ ದಂತ ವೈದ್ಯ ಪ್ರದೀಪ್‌ ಉಗಲಾಟದ ಅವರ ಹಸಿರು ಪ್ರೀತಿಯಿಂದಾಗಿ 10.34 ಎಕರೆ ಜಮೀನು ಇಂದು ಕಾಡಾಗಿದೆ. ತಾಲ್ಲೂಕಿನ ಹುಯಿಲಗೋಳ ಗ್ರಾಮದ ಬಳಿಯ ಅವರ ಜಮೀನಿನಲ್ಲಿ 150ಕ್ಕೂ ಅಧಿಕಜಾತಿಯ 15 ಸಾವಿರಕ್ಕೂ ಹೆಚ್ಚು ಮರಗಿಡಗಳಿವೆ. ಅಸಂಖ್ಯ ಪಕ್ಷಿಗಳಿಗೆ ನೆಲೆ ಆಗಿವೆ.

‘ಅರಣ್ಯ ನಾಶದ ಬಗ್ಗೆ ಎಲ್ಲರೂ ಮಾತಿನಲ್ಲೇ ಆತಂಕ ವ್ಯಕ್ತಪಡಿಸುತ್ತಾರೆ. ಆದರೆ, ಅರಣ್ಯ ರಕ್ಷಣೆ ವಿಚಾರದಲ್ಲಿ ನಾನೇನು ಮಾಡಬಹುದು ಎಂಬ ಯೋಚನೆ ತಲೆ ಹೊಕ್ಕಾಗ ಕಾಡುಕೃಷಿಯ ಕಲ್ಪನೆ ಹೊಳೆಯಿತು’ ಎಂದು ಡಾ. ಪ್ರದೀಪ್‌ ಉಗಲಾಟದ ತಿಳಿಸಿದರು.

ಡಾ.ಪ್ರದೀಪ್‌ ಅವರು ಕಾಡುಕೃಷಿಗೆ ಮುಂದಾದಾಗ ಅಲ್ಲಿ ನೀರಿನ ಕೊರತೆ ಇತ್ತು. ಮಳೆನೀರು ವ್ಯರ್ಥವಾಗಿ ಹರಿಯದಂತೆ ತಡೆಯಲು ಜಮೀನಿನ ಸುತ್ತ ಮೂರು ಅಡಿಯ ಕಂದಕ ತೆಗೆಸಿದರು. ಬಳಿಕ ಗಿಡ ನೆಟ್ಟರು. ಐದು ವರ್ಷ ಸಾವಯವ ಗೊಬ್ಬರಕ್ಕೆ ವಾರ್ಷಿಕ ₹1.50 ಲಕ್ಷ ವ್ಯಯಿಸಿದರು.

ADVERTISEMENT

ಆರನೇ ವರ್ಷದಿಂದ ಖರ್ಚು ಮಾಡಿಲ್ಲ. ಡಾ.ಪ್ರದೀಪ್‌ ನೆಟ್ಟಿದ್ದ ಗಿಡಗಳಲ್ಲಿ ಶೇ 10ರಷ್ಟು ಮಾತ್ರ ಉಳಿದವು. ಉಳಿದ ಗಿಡಗಳೆಲ್ಲವೂ ನೈಸರ್ಗಿಕವಾಗಿಯೇ ಬೆಳೆದಿವೆ. ಕಾಡಿನ ಪರಿಸರದ ಸೆಳೆತಕ್ಕೆ ಒಳಗಾಗಿ ಬಂದ ಪಕ್ಷಿಗಳು ಬೇರೆ ಕಡೆ ತಂದ ಹಣ್ಣುಗಳನ್ನು ತಿಂದು ಉದುರಿಸಿದ ಬೀಜಗಳು, ಇಲ್ಲಿಗೆ ಮೇಯಲು ಬರುತ್ತಿದ್ದ ಕುರಿಗಳು ಹಾಕಿದ ಹಿಕ್ಕೆಯಲ್ಲಿದ್ದ ಬೀಜಗಳು ಗಿಡಗಳಾಗಿ ಬೆಳೆದಿವೆ. ಹೀಗೆ ನಿಸರ್ಗದತ್ತವಾಗಿಯೇ ಬೆಳೆದ ಕಾಡು ಶೇ 90ರಷ್ಟಿದೆ. ಅರಣ್ಯ ಇಲಾಖೆಯಿಂದ ಯಾವುದೇ ಸೌಲಭ್ಯ ಪಡೆದಿಲ್ಲ.

ಜಮೀನಿನಲ್ಲಿ ಇಂದು ಶ್ರೀಗಂಧ, ಸುಬಾಬುಲ್, ಹೆಬ್ಬೇವು, ಮಹಾಗನಿ, ಹೊಂಗೆ, ಬಿದಿರು ಸೇರಿ ವಿವಿಧ ಜಾತಿಯ ಮರಗಳಿವೆ. ಕೆಲವು 20 ಅಡಿಗೂ ಎತ್ತರ ಇವೆ. ಕಾಡು ಹಣ್ಣಿನ ಗಿಡಗಳೂ ಸಾಕಷ್ಟಿವೆ. ಒಟ್ಟು ಜಮೀನಿನಲ್ಲಿ ಶೇ 70ರಷ್ಟು ಕಾಡು ಇದ್ದು, ಶೇ 30ರಷ್ಟು ಹುಲ್ಲುಗಾವಲು ಇದೆ. ಅಲ್ಲೂ ವೈವಿಧ್ಯದ ಹುಲ್ಲು ಬೆಳೆದಿದೆ. ಈ ಪ್ರದೇಶ ತೋಳದಂತಹ ಕಾಡುಪ್ರಾಣಿಗಳನ್ನೂ ಆಕರ್ಷಿಸುತ್ತಿದೆ.

‘2016ರಲ್ಲಿ ಹೊಳೆದ ಕಾಡುಕೃಷಿ ಕಲ್ಪನೆಗೆ ಜೀವ ಕೊಡಲು ಮುಂದಾದಾಗ ಮನೆಯವರಿಂದ ವಿರೋಧ ವ್ಯಕ್ತವಾಯಿತು. ಹೆಸರು, ಹತ್ತಿ, ಕಡಲೆ ಬೆಳೆಯುತ್ತಿದ್ದ ಜಮೀನಿನಲ್ಲಿ ಕಾಡುಕೃಷಿ ಏಕೆ ಎಂದು ಕೇಳಿದರು. ಆದರೆ, ಈಗ ಇಲ್ಲಿಗೆ ಬಂದವರೆಲ್ಲರೂ ಪುಟ್ಟ ಕಾಡು ಕಂಡು, ಕಪ್ಪತ್ತಗುಡ್ಡ ನೋಡಿದ ಅನುಭವ ನೀಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ’ ಎಂದು ಡಾ.ಪ್ರದೀಪ್‌ ತಿಳಿಸಿದರು.

ಡಾ. ಪ್ರದೀಪ್‌ ಉಗಲಾಟದ
ಕಾಡು ಕೃಷಿಯಿಂದ ಆದಾಯದ ನಿರೀಕ್ಷೆ ಇಲ್ಲ. ಪರಿಸರದ ಮೇಲಿನ ಕಾಳಜಿ ಹಾಗೂ ಮನಸ್ಸಿನ ಸಂತೋಷಕ್ಕಾಗಿಯೇ ಕಾಡು ಬೆಳೆಸುತ್ತಿದ್ದೇನೆ.
ಡಾ. ಪ್ರದೀಪ್‌ ಉಗಲಾಟದ, ಕಾಡು ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.