ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ 2025-26ನೇ ಸಾಲಿನ ಸಮುದಾಯ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್. ಭೇಟಿ ನೀಡಿ ಕಾಮಗಾರಿ ಗುಣಮಟ್ಟ, ಅಳತೆ, ಯೋಜನೆ ಉದ್ದೇಶ ಕುರಿತು ಕೂಲಿಕಾರರೊಂದಿಗೆ ಸಮಾಲೋಚನೆ ನೆಡೆಸಿದರು.
ನಂತರ ಕಾಮಗಾರಿ ಕಡತ, ನ್ಯಾಶನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಂ, ಹಾಜರಾತಿ ಪರಿಶೀಲನೆ ನೆಡೆಸಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಕಾಯಕ ಬಂಧುಗಳು ಹಾಗೂ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಿಸುವ ಮೂಲಕ ಚಾಲನೆ ನೀಡಿದರು.
‘ಆರ್ಥಿಕ ವರ್ಷದಲ್ಲಿ ಪ್ರತಿ ಜಾಬ್ ಕಾರ್ಡ್‌ಗೆ 100 ದಿನ ಅಕುಶಲ ಕೂಲಿ ಕೆಲಸ ನೀಡಲಾಗುವುದು. ಕಾಮಗಾರಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಒಂದು ಕೆಲಸ ಮುಗಿದ ಮೇಲೆ ಇನ್ನೊಂದು ಕೆಲಸಕ್ಕಾಗಿ ಯೋಚನೆ ಮಾಡುವಂತಿಲ್ಲ. ಕೂಲಿಕಾರರು ನಿರಂತರವಾಗಿ ಕೆಲಸ ಮಾಡಲು ಈಗಾಗಲೇ ನರೇಗಾ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೊದನೆ ನೀಡಿದ್ದು ಒಂದು ಕುಟುಂಬಕ್ಕೆ 100 ದಿನ ಕೂಲಿ ಕೆಲಸ ನೀಡಲು ಕಾಮಗಾರಿಗಳನ್ನು ಸಿದ್ಧಪಡಿಸಲಾಗಿದೆ. ಈ ಬಗ್ಗೆ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳ ಹಂತದ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ’ ಎಂದರು.
ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಯ್ಯ ಕೊರವನವರ ಮಾತನಾಡಿ, ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಬ್ಬ ನೋಂದಾಯಿತ ಕೂಲಿಕಾರರಿಗೆ ನಿರಂತರವಾಗಿ 100 ದಿನಗಳ ಕೆಲಸ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ನಮೂನೆ - 6ರಲ್ಲಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಕೆಲಸ ಪಡೆಯಬಹುದು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ ಪೂಜಾರ ಮಾತನಾಡಿ, ‘ರೈತರು ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಎರೆ ಹುಳು ಘಟಕ, ದನದ ಕೊಟ್ಟಿಗೆ ಮುಂತಾದ ಕಾಮಗಾರಿಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಸಹಾಯಕ ನಿರ್ದೇಶಕ ಕುಮಾರ ಪೂಜಾರ, ಪಿಡಿಒ ಅಮೀರ ನಾಯಕ ಮಾತನಾಡಿದರು.
ಆರೋಗ್ಯ ಇಲಾಖೆ ಸಿಬ್ಬಂದಿ ನರೇಗಾ ಕಾಮಗಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸಿದ 1000ಕ್ಕೂ ಹೆಚ್ಚು ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಿದರು.
ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ, ತಾಲ್ಲೂಕು ಐಇಸಿ ಸಂಯೋಜಕ ವೀರೇಶ, ತಾಂತ್ರಿಕ ಸಹಾಯಕ ಅಜಯ ಅಬ್ಬಿಗೇರಿ, ನರೇಗಾ ಸಿಬ್ಬಂದಿ, ಕಾಯಕ ಬಂಧುಗಳು, ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
ಕೂಲಿಕಾರರ ಆರೋಗ್ಯ ತಪಾಸಣೆ
‘ನರೇಗಾ ಯೋಜನೆಯಡಿ ನಡೆಯುತ್ತಿರುವ ಸಮುದಾಯ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗುವುದು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರೀತ್ ಖೋನಾ ತಿಳಿಸಿದರು. ‘ನರೇಗಾ ಕೂಲಿಕಾರರಿಗೆ ಉತ್ತಮ ಆರೋಗ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿ ಸ್ಥಳದಲ್ಲಿಯೇ ರಕ್ತದೊತ್ತಡ ಮಧುಮೇಹ ಅತಿ ರಕ್ತದೊತ್ತಡದಂತಹ ಪ್ರಾಥಮಿಕ ಅಸಾಂಕ್ರಮಿಕ ಗುಣಲಕ್ಷಣಗಳನ್ನು ಪತ್ತೆ ಹಚ್ಚಿ ಸೂಕ್ತ ಸಮಾಲೋಚನೆ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.