ADVERTISEMENT

ಗದಗ: ಸಮಾವೇಶ ವ್ಯವಸ್ಥಿತವಾಗಿ ನಡೆಸಲು ಕ್ರಮವಹಿಸಿ

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:11 IST
Last Updated 14 ಫೆಬ್ರುವರಿ 2026, 7:11 IST
ಗದಗ ನಗರದ ಉಪವಿಭಾಗಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಗ್ಯಾರಂಟಿ ಯೋಜನೆಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಬಿ.ಬಿ.ಅಸೂಟಿ ಮಾತನಾಡಿದರು
ಗದಗ ನಗರದ ಉಪವಿಭಾಗಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಗ್ಯಾರಂಟಿ ಯೋಜನೆಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಬಿ.ಬಿ.ಅಸೂಟಿ ಮಾತನಾಡಿದರು   

ಗದಗ: ‘ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಕಾರ್ಯಾಗಾರ ಹಾಗೂ ಉತ್ಸವವು ಫೆ.18ರಂದು ಬೆಳಿಗ್ಗೆ 11ಕ್ಕೆ ನಗರದ ವಿವೇಕಾನಂದ ಸಭಾಭವನದಲ್ಲಿ ನಡೆಯಲಿದ್ದು, ಅದನ್ನು ವ್ಯವಸ್ಥಿತವಾಗಿ ಆಚರಿಸಲು ಕ್ರಮ ವಹಿಸಬೇಕು’ ಎಂದು ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ಹೇಳಿದರು.

ನಗರದಲ್ಲಿ ಶುಕ್ರವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ಉಪಾಧ್ಯಕ್ಷ ಎಸ್.ಆರ್.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಸೇರಿದಂತೆ ಪ್ರಮುಖರು ಸಮಾವೇಶದಲ್ಲಿ ಭಾಗವಹಿಸುವರು. ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಸಮಿತಿಯ ಅಧಿಕಾರಿಗಳು ತಮಗೆ ವಹಿಸಿಕೊಟ್ಟ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು’ ಎಂದರು.

ADVERTISEMENT

‘ಗದಗ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಯ ಪ್ರಗತಿಯು ಶೇ 99.04ರಷ್ಟಿದೆ. ಪಂಚ ಗ್ಯಾರಂಟಿ ಯೋಜನೆಗಳು ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಕುರಿತು ಬಿಂಬಿಸುವ ಮಳಿಗೆಗಳನ್ನು ತೆರೆಯಲು ಕ್ರಮ ವಹಿಸಬೇಕು. ಈ ಸಮಾವೇಶವು ರಾಜ್ಯದಲ್ಲಿಯೇ ಮಾದರಿ ಕಾರ್ಯಕ್ರಮ ಆಗಬೇಕು’ ಎಂದು ಹೇಳಿದರು. 

ಗದಗ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ಫೆ.18ರಂದು ನಡೆಯುವ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಕಾರ್ಯಾಗಾರ ಹಾಗೂ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಪಾಲ್ಗೊಳ್ಳುವಂತೆ ಕ್ರಮ ವಹಿಸಬೇಕು ಎಂದರು.

ಕಾರ್ಯಕ್ರಮದ ಸ್ಥಳವು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಶಿಷ್ಟಾಚಾರದ ಅನ್ವಯ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಕ್ರಮ ವಹಿಸಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಸೂಕ್ತ ಆಸನದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯ ವಿಳಂಬವಿಲ್ಲದೇ ದೊರಕುವಂತಾಗಬೇಕು ಎಂದರು.

‘ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಸಮಾವೇಶ ಕಾರ್ಯಕ್ರಮಕ್ಕೆ ವ್ಯವಸ್ಥಿತವಾಗಿ ಕರೆದುಕೊಂಡು ಬರಬೇಕು. ಫೆ.17ರಂದು ಎಲ್ಲ ಫಲಾನುಭವಿಗಳ ಮನೆಯ ಮುಂದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ರಂಗೋಲಿ ಹಾಕಿಸುವ ಕೆಲಸವಾಗಬೇಕು. ರಂಗೋಲಿ ಬಿಡಿಸಿರುವುದನ್ನು ವಾರ್ಡ್‌ ನಂಬರ್‌ ಸಮೇತ ಸಮಿತಿಯ ವಾಟ್ಸ್ಆ್ಯಪ್‌ ಗ್ರೂಪ್‌ಗೆ ಕಳುಹಿಸಬೇಕು’ ಎಂದು ತಿಳಿಸಿದರು.

ಸಭೆಯಲ್ಲಿ ಬ್ಯಾನರ್‌ಗಳ ಅಳವಡಿಕೆ, ಊಟ, ಉಪಾಹಾರದ ವ್ಯವಸ್ಥೆ, ಎಲ್‌ಇಡಿ ಅಳವಡಿಕೆ, ವೇದಿಕೆ ವ್ಯವಸ್ಥೆ ಕುರಿತಂತೆ ಚರ್ಚಿಸಲಾಯಿತು.

ತಾಲ್ಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಸಾವಿತ್ರಿ ಹೂಗಾರ, ಶಂಭು ಕಾಳೆ, ಮೀನಾಕ್ಷಿ ಬೆನಕಣ್ಣವರ, ದಯಾನಂದ ಪವಾರ, ಸಂಗಮೇಶ ಕೆರಕಲಮಟ್ಟಿ, ಭಾಷಾಸಾಬ ಮಲ್ಲಸಮುದ್ರ, ನಿಂಗಪ್ಪ ದೇಸಾಯಿ, ಸಂಗಮೇಶಹಾದಿಮನಿ, ರಮೇಶ ಹೊನ್ನಿಕಾಯ್ಕರ್, ದೇವರಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶಸಿಂಗ್ ಮಿಟಾಡೆ , ಮಲ್ಲಪ್ಪ ಬಾರಕೇರ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.