ADVERTISEMENT

ಸಂಗೀತ ಕ್ಷೇತ್ರಕ್ಕೆ ಗದುಗಿನ ಕೊಡುಗೆ ಅಪಾರ: ಗುರುಸ್ವಾಮಿ ಕಲಕೇರಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 6:11 IST
Last Updated 23 ನವೆಂಬರ್ 2025, 6:11 IST
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ ದತ್ತಿ ಉಪನ್ಯಾಸದಲ್ಲಿ ಸಾಕ್ಷಿ ರವಿ ದೇವರಡ್ಡಿ ಹಾಗೂ ರಾಹುಲ ವಸಂತ ಸಿದ್ಧಮ್ಮನಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ ದತ್ತಿ ಉಪನ್ಯಾಸದಲ್ಲಿ ಸಾಕ್ಷಿ ರವಿ ದೇವರಡ್ಡಿ ಹಾಗೂ ರಾಹುಲ ವಸಂತ ಸಿದ್ಧಮ್ಮನಹಳ್ಳಿ ಅವರನ್ನು ಸನ್ಮಾನಿಸಲಾಯಿತು.   

ಗದಗ: ‘ಗದುಗಿನ ಪರಿಸರದಲ್ಲಿ ಜನ್ಮತಳೆದ ಅನೇಕ ಸಂಗೀತಗಾರರು ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತ ಕ್ಷೇತ್ರವನ್ನು ಬೆಳಗಿದ್ದಾರೆ’ ಎಂದು ರಾಜಗುರು ಪಂಡಿತ ಗುರುಸ್ವಾಮಿ ಕಲಕೇರಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕನ್ನಡ ಭವನದಲ್ಲಿ ಸಂಗೀತಗಾರ ಎಸ್.ಎನ್.ಪಾಟೀಲ ಅವರ ಸ್ಮರಣಾರ್ಥ ಈಚೆಗೆ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಾದದಿಂದಲೇ ಈ ಜಗತ್ತು ನಿರ್ಮಾಣಗೊಂಡಿದೆ. ನಮ್ಮ ಸುತ್ತಲಿನ ಪರಿಸರದ ಸಂಗತಿಗಳು ಸಂಗೀತದ ಹಿನ್ನೆಲೆಯಲ್ಲಿಯೇ ರೂಪುಗೊಂಡಿವೆ. ಸಂಗೀತ ಲೋಕದ ದಿಗ್ಗಜರಾದ ಪಂಚಾಕ್ಷರಿ ಗವಾಯಿಗಳು ಹಾಗೂ ಪಂ. ಪುಟ್ಟರಾಜ ಗವಾಯಿಗಳ ಶಿಷ್ಯ, ಪ್ರಶಿಷ್ಯ ವರ್ಗದ ಮೂಲಕ ಹೊಸ ಸಂಗೀತ ಪರಂಪರೆಗೆ ಮುನ್ನುಡಿ ಬರೆದು ಸಂಗೀತ ಕ್ಷೇತ್ರದಲ್ಲಿ ಗದುಗಿನ ಹಿರಿಮೆ ಹೆಚ್ಚಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ‘ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಪಂ. ಭೀಮಸೇನ ಜೋಶಿ ಅವರ ಕೊಡುಗೆ ಅಪಾರವಾಗಿದೆ. ವೀರೇಶ್ವರ ಪುಣ್ಯಾಶ್ರಮದಲ್ಲಿ ಅರಳಿದ ಪಂ. ವೆಂಕಟೇಶಕುಮಾರ ಅವರು ಗದುಗಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ನಾಡಿನ ಮೂಲೆ ಮೂಲೆಯಲ್ಲಿರುವ ಸಂಗೀತಗಾರರಿಗೆ ಗದಗ ಮೂಲನೆಲೆ ಹಾಗೂ ಮೂಲಸೆಲೆಯಾಗಿದೆ’ ಎಂದರು.

ಮಕ್ಕಳ ದಿನಾಚರಣೆ ಅಂಗವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಬೆಳಗುತ್ತಿರುವ ಸಾಕ್ಷಿ ರವಿ ದೇವರಡ್ಡಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ರಾಹುಲ ವಸಂತ ಸಿದ್ಧಮ್ಮನಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ನೀಲಮ್ಮ ಅಂಗಡಿ ಅವರಿಂದ ಗೀತಗಾಯನ ನಡೆಯಿತು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ರಾಹುಲ ಗಿಡ್ನಂದಿ ವಂದಿಸಿದರು.

ನಾಡಿನ ವಿವಿಧ ಭಾಗಗಳಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿರುವ ಎಸ್‌.ಎನ್‌.ಪಾಟೀಲ ಅವರ ಶಿಷ್ಯವರ್ಗ ವಿದೇಶಗಳಲ್ಲೂ ಹೆಸರು ಮಾಡಿದೆ. ಅವರ ಹೆಸರಿನಲ್ಲಿರುವ ಪ್ರತಿಷ್ಠಾನದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ಸಿದ್ಧಪಡಿಸಲಾಗಿದೆ
ಓಂ.ಪಾಟೀಲ ವಿದ್ವಾಂಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.