ADVERTISEMENT

ಗದಗ | ಜನವಿರೋಧಿ ಕಾರ್ಯಗಳೇ ಕಾಂಗ್ರೆಸ್‌ ಸರ್ಕಾರದ ಸಾಧನೆ: ವೆಂಕನಗೌಡ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:34 IST
Last Updated 17 ಫೆಬ್ರುವರಿ 2026, 6:34 IST
ಗದಗ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ನಡೆದ ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮುಖಂಡ ವೀರಣ್ಣಗೌಡ ನಾಡಗೌಡ್ರ ಮಾತನಾಡಿದರು
ಗದಗ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ನಡೆದ ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮುಖಂಡ ವೀರಣ್ಣಗೌಡ ನಾಡಗೌಡ್ರ ಮಾತನಾಡಿದರು   

ಗದಗ: ‘ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ಜನರ ತೆರಿಗೆ ಹಣ ಬಳಸಿ, ಸಾವಿರ ದಿನಗಳ ಸಾಧನಾ ಸಮಾವೇಶ ಮಾಡಿದ್ದು ಯಾವ ಪುರುಷಾರ್ಥಕ್ಕೆ ಎಂಬುದನ್ನು ಜನತೆಗೆ ತಿಳಿಸಬೇಕು’ ಎಂದು ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಆಗ್ರಹಿಸಿದರು.

ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ನಡೆದ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

‘ಕಾಂಗ್ರೆಸ್ ಪಕ್ಷ ಸುಳ್ಳು ಭರವಸೆ ನೀಡಿ, ಅಧಿಕಾರದ ಚುಕ್ಕಾಣಿ ಹಿಡಿಯಿತು. ಗದ್ದುಗೆ ಸಿಕ್ಕ ನಂತರ ಜನವಿರೋಧಿ ನೀತಿ ಮೂಲಕ ಜನರ ಬದುಕಿನ ಮೇಲೆ ಬೆಲೆ ಏರಿಕೆಯ ಬರೆ ಎಳೆಯಿತು’ ಎಂದು ಕಿಡಿಕಾರಿದರು.

ADVERTISEMENT

‘ಇಂದು ರಾಜ್ಯದಲ್ಲಿನ ರೈತ ಸಂಕಟದಲ್ಲಿದ್ದಾನೆ. ಕೈಗಾರಿಕೆಗಳು ನಷ್ಟದಲ್ಲಿವೆ. ಯುವಕರು ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ಮಹಿಳೆಯರ ವಿರುದ್ಧ ದೌರ್ಜನ್ಯಗಳು ಹೆಚ್ಚಾಗಿವೆ. ಅಭಿವೃದ್ಧಿಗೆ ಹಣ ಇಲ್ಲ. ಹೀಗೆ ಹತ್ತು ಹಲವು ವೈಫಲ್ಯಗಳು ಇದ್ದರೂ ಯಾವ ಪುರುಷಾರ್ಥಕ್ಕಾಗಿ ಸಾಧನಾ ಸಮಾವೇಶ ಮಾಡಿದರು’ ಎಂದು ಹರಿಹಾಯ್ದರು.

‘ಸರ್ಕಾರ ಎಲ್ಲಾ ಇಲಾಖೆಗಳಲ್ಲಿ ಹಗರಣಗಳು ಹಾಗೂ ಲಂಚಾವತಾರ ತಾಂಡವವಾಡುತ್ತಿದೆ. ಇವುಗಳಿಗೆ ಲಗಾಮು ಹಾಕದಿರುವುದೇ ಈ ಸರ್ಕಾರದ ಸಾಧನೆ. ಜತೆಗೆ ದುಂದು ವೆಚ್ಚವು ಜನರ ತಲೆಯ ಮೇಲೆ ಸಾಲದ ಹೊರೆ ಹೆಚ್ಚಿಸುತ್ತಿದೆ’ ಎಂದು ದೂರಿದರು.

ಜೆಡಿಎಸ್‌ ಮುಖಂಡರಾದ ಬಸವರಾಜ ಅಪ್ಪಣ್ಣವರ, ಜಿ.ಕೆ.ಕೊಳ್ಳಿಮಠ, ಪ್ರಫುಲ್ಲ ಪುಣೇಕರ, ಪ್ರಭುರಾಜಗೌಡ ಪಾಟೀಲ, ರಮೇಶ್ ಹುಣಸಿಮರದ, ಸಂತೋಷ್ ಪಾಟೀಲ, ರಾಜಣ್ಣ ಸಂಶಿ, ಮುಖಂಡರು ಇದ್ದರು

ಗದಗ ಬೆಟಿಗೇರಿಯ ವಿವಿಧ ವಾರ್ಡ್‌ಗಳ ಯುವಕರು ಹಾಗೂ ಮಹಿಳೆಯರು ಪಕ್ಷಕ್ಕೆ ಸೇರ್ಪಡೆಗೊಂಡರು.

ಹಗರಣಗಳಲ್ಲಿ ಸಿಲುಕಿರುವ ಮಂತ್ರಿಗಳನ್ನು ರಕ್ಷಿಸಿ ಅಧಿಕಾರಿಗಳನ್ನು ಬಲಿ ಕೊಡುವುದರಲ್ಲೇ ಸಾವಿರ ದಿನಗಳು ಕಳೆದಿವೆ. ವಿರೋಧ ಪಕ್ಷದಲ್ಲಿದ್ದಾಗ ಎಲ್ಲ ಮಂತ್ರಿಗಳ ರಾಜೀನಾಮೆ ಕೇಳುತ್ತಿದ್ದ ಈಗಿನ ಸಿಎಂ ತಮ್ಮ ಸರ್ಕಾರದ ವಿರುದ್ಧ ಆರೋಪಗಳು ಬಂದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ
ವೀರಣ್ಣಗೌಡ ನಾಡಗೌಡ್ರ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.